
ನಗರದ ಮೈಸೂರು ರಸ್ತೆಯ ವಿನಾಯಕ ಚಿತ್ರಮಂದಿರ ಬಳಿ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿ ಬೆಂಕಿಯಿಂದ ದಟ್ಟ ಹೊಗೆ ಆವರಿಸಿರುವುದು.
ಬೆಂಗಳೂರು,ಸೆ.೧೯-ವಿಘ್ನ ನಿವಾರಕ ಗಣೇಶ ಚತುರ್ಥಿ ದಿನದಂದೇ ನಗರದಲ್ಲಿ ಅಗ್ನಿ ಅವಘಡ ಸಂಭವಿಸಿ ಕೆನ್ನಾಲಿಗೆಗೆ ೮ ಮನೆಗಳು ಬೆಂಕಿಗಾಹುತಿಯಾಗಿ ಇಬ್ಬರು ಗಾಯಗೊಂಡಿದ್ದಾರೆ.ಚಾಮರಾಜಪೇಟೆಯ ಆನಂದಪುರದ ವಿನಾಯಕ ಚಿತ್ರಮಂದಿರರದ ಬಳಿಯ ಗೋದಾಮಿನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಗೋದಾಮು ಹಾಗೂ ೮ ಶೀಟ್ ಮನೆಗಳು ಬೆಂಕಿಗಾಹುತಿಯಾಗಿವೆ. ಘಟನೆಯಲ್ಲಿ ಒಬ್ಬರಿಗೆ ಗಾಯಗಳಾಗಿದ್ದು, ವಿಷಯ ತಿಳಿದು ಘಟನಾ ಸ್ಥಳಕ್ಕೆ ಎರಡು ಅಗ್ನಿಶಾಮಕ ವಾಹನಗಳು ದೌಡಾಯಿಸಿ ಬೆಂಕಿ ನಂದಿಸಿವೆ.ಗೋದಾಮಿನಲ್ಲಿ ಎರಡು ಸಿಲಿಂಡರ್‌ಗಳು ಸ್ಫೋಟಗೊಂಡು ಅಗ್ನಿ ದುರಂತ ಸಂಭವಿಸಿದೆ ಎಂದು ಹೇಳಲಾಗಿದ್ದು, ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಅಗ್ನಿ ಅವಘಡದಲ್ಲಿ ಗಾಯೊಂಡಿರುವ ಓರ್ವ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಾಪಾಯವಾಗಿಲ್ಲ ಎಂದು ತಿಳಿದುಬಂದಿದೆ.
ಅಗ್ನಿ ಅವಘಡದ ಬಗ್ಗೆ ಪ್ರತ್ಯಕ್ಷದರ್ಶಿ ಸೈಯ್ಯದ್ ಮಾತನಾಡಿ, ಸಾಕೆಟ್ ಬೋರ್ಡ್‌ನಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿದೆ. ಮನೆಯಲ್ಲಿದ್ದ ಮಹಿಳೆಯರು ಬೆಂಕಿ ಹೊತ್ತಿದ್ದ ಬಗ್ಗೆ ಮನೆಯಿಂದ ಹೊರಗೆ ಓಡಿ ಬಂದು ನನಗೆ ಮಾಹಿತಿ ನೀಡಿದರು. ಅಷ್ಟರಲ್ಲಿ ಮನೆಯಲ್ಲಿದ್ದ ಸಿಲಿಂಡರ್ ಸ್ಫೋಟದ ಜೊತೆ ಬೆಂಕಿ ಹರಡಿತ್ತು. ತಕ್ಷಣ ಅಗ್ನಿಶಾಮಕ ಕಚೇರಿಗೆ ಕರೆ ಮಾಡಿ ಮಾಹಿತಿ ನೀಡಿದೆ. ಎಲ್ಲರೂ ಹೊರಗೆ ಓಡಿ ಬಂದಿದ್ದರಿಂದ ಯಾರಿಗೂ ಗಾಯಗಳಾಗಿಲ್ಲ ಎಂದು ಮಾಹಿತಿ ನೀಡಿದರು.