ಸಿಲಿಂಡರ್ ಬೆಲೆ ಹೆಚ್ಚಳಕ್ಕೆ ವಿರೋಧ ಸೌದೆ ಒಲೆ ಹೊತ್ತಿಸಿ ಪ್ರತಿಭಟನೆ

ಬೆಂಗಳೂರು,ಡಿ.೨೬-ಎಲ್‌ಪಿಜಿ ಸಿಲಿಂಡರ್ ಬೆಲೆ ಹೆಚ್ಚಳದ ವಿರುದ್ದ ಆಮ್ ಆದ್ಮಿ ಪಕ್ಷ(ಎಎಪಿ) ಮಹಿಳಾ ಘಟಕದ ಕಾರ್ಯಕರ್ತರು ನಗರದಲ್ಲಿ ಸೌದೆ ಒಲೆಯಲ್ಲಿ ಪಕೋಡ, ಟೀ ತಯಾರಿಸಿ ವಿನೂತನ ಪ್ರತಿಭಟನೆ ನಡೆಸಿದರು.
ಮೌರ್ಯ ವೃತ್ತದಲ್ಲಿ ಮಹಿಳಾ ಘಟಕದ ಅಧ್ಯಕ್ಷೆ ಕುಶಲ ಸ್ವಾಮಿ ಅವರ ನೇತೃತ್ವದಲ್ಲಿ ಸೇರಿದ ನೂರಾರು ಮಹಿಳಾ ಕಾರ್ಯಕರ್ತರು ಸೌದೆ ಒಲೆಯಲ್ಲಿ ಪಕೋಡ, ಟೀ ಮಾಡಿ ಎಲ್‌ಪಿಜಿ ಸಿಲಿಂಡರ್ ಬೆಲೆ ಹೆಚ್ಚಳದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಡಿಸೆಂಬರ್ ನಲ್ಲಿ ಎರಡು ಬಾರಿ ಎಲ್‌ಪಿಜಿ ಸಿಲಿಂಡರ್ ದರ ಹೆಚ್ಚಳ ಮಾಡಿ ಜನರನ್ನು ಸುಲಿಗೆ ಮಾಡಲು ಪ್ರಧಾನಿ ನರೇಂದ್ರ ಮೋದಿ ಹೊರಟಿದ್ದಾರೆ ಎಂದು ದೂರಿದರು.
ಕೊರೊನಾ ಲಾಕ್‌ಡೌನ್ ನೆಪ ಮಾಡಿಕೊಂಡು ಸಬ್ಸಿಡಿ ನೀಡುವುದನ್ನು ನಿಲ್ಲಿಸಿರುವ ಸರ್ಕಾರ ನೇರವಾಗಿ ೨೦ ಸಾವಿರ ಕೋಟಿ ಉಳಿತಾಯ ಮಾಡಿದೆಯಾದರೂ ಬೆಲೆ ಹೆಚ್ಚಳ ಏಕೆ ಮಾಡಿದೆ ಎಂದು ಪ್ರಶ್ನಿಸಿದರು.
ಒಲೆಯಲ್ಲಿ ಅಡುಗೆ ಮಾಡುವುದ ರಿಂದ ಪರಿಸರ ಮಾಲಿನ್ಯ ತಪ್ಪಿಸ ಬಹುದು ಎಂದು ಹೇಳಿ ಗ್ಯಾಸ್ ವಿತರಿಸಿದ ಮೋದಿ ಬಡವರನ್ನು ಸುಲಿಗೆ ಮಾಡುತ್ತಿದ್ದಾರೆ. ಜನರನ್ನು ಸಂಕಷ್ಟದಿಂದ ಪಾರು ಮಾಡಲು ಸೌದೆಗಾದರೂ ಸಬ್ಸಿಡಿ ನೀಡಿ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಕೇಂದ್ರ ಬಿಜೆಪಿ ಸರ್ಕಾರದ ಧೋರಣೆ ಏನು ಎಂಬುದೇ ಅರ್ಥವಾಗುತ್ತಿಲ್ಲ, ಈ ದೇಶವನ್ನು ಸೂಪರ್ ಪವರ್ ಮಾಡುತ್ತೇವೆ ಎಂದು ಹೇಳುತ್ತಲೇ ಬಿಕಾರಿಗಳನ್ನಾಗಿ ಮಾಡುತ್ತಿದೆ, ಕಿಂಚಿತ್ತೂ ದೇಶ ಭಕ್ತಿ ಇಲ್ಲದ ಜನರಿಂದ ಪ್ರಗತಿ ನಿರೀಕ್ಷಿಸಲು ಸಾಧ್ಯವೇ ಎಂದು ಕುಶಲಸ್ವಾಮಿ ಪ್ರಶ್ನಿಸಿದರು.