ಸಿಲಿಂಡರ್ ಗ್ರಾಹಕರಿಗೆ ಬಲು ಭಾರ

ನವದೆಹಲಿ,ಸೆ.೧- ಪೆಟ್ರೋಲಿಯಂ ಕಂಪನಿಗಳು ಅಡುಗೆ ಅನಿಲ ದರವನ್ನು ಪ್ರತಿ ಸಿಲಿಂಡರ್‌ಗೆ ೨೫ ರೂ. ಹೆಚ್ಚಳ ಮಾಡಿ ಸಾಲು ಸಾಲು ಹಬ್ಬಗಳು ಮುಂದಿರುವಾಗಲೇ ಗ್ರಾಹಕರಿಗೆ ಶಾಕ್ ನೀಡಿವೆ. ಪರಿಷ್ಕೃತ ದರ ತಕ್ಷಣದಿಂದಲೇ ಜಾರಿಗೆ ಬಂದಿದೆ.
೧೫ ದಿನಗಳ ಅವಧಿಯಲ್ಲಿ ಸಿಲಿಂಡರ್ ದರವನ್ನು ೫೦ ರೂ.ಗೆ ಹೆಚ್ಚಳ ಮಾಡಲಾಗಿದೆ. ಈಗಾಗಲೆ ಪೆಟ್ರೋಲ್ ದರ ಪ್ರತಿ ಲೀಟರ್‌ಗೆ ೧೦೦ರೂ ಗಡಿ ದಾಟಿದೆ. ಇದೇ ರೀತಿ ಅಡುಗೆ ಅನಿಲ ದರವು ಏರಿಕೆಯಾಗುತ್ತಿದ್ದರೆ ಮುಂಬರುವ ದಿನಗಳಲ್ಲಿ ಸಿಲಿಂಡರ್ ದರ ೧೦೦೦ ರೂ. ತಲುಪುವ ಆತಂಕ ಎದುರಾಗಿದೆ. ಪದೇ ಪದೇ ಅಡುಗೆ ಅನಿಲ ದರ ಏರಿಕೆಯಾಗುತ್ತಿರುವುದಕ್ಕೆ ಗೃಹಿಣಿಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈಗಾಗಲೆ ಅಗತ್ಯ ವಸ್ತುಗಳ ದರ ಏರಿಕೆಯಿಂದ ಕಂಗೆಟ್ಟಿರುವ ಜನರು ಸಾಲು ಸಾಲು ಹಬ್ಬಗಳು ಸಮೀಪಿಸುತ್ತಿರುವಾಗಲೇ ಇಂಧನ ದರ ದುಬಾರಿಯಾಗಿದೆ. ಕೂಡಲೇ ದರ ಏರಿಕೆ ಇಳಿಸಬೇಕೆಂಬ ಆಗ್ರಹ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.
ರಾಜಧಾನಿ ಬೆಂಗಳೂರಿನಲ್ಲಿ ೧೪.೨ ಕೆಜಿ ತೂಕದ ಸಬ್ಸಿಡಿಯೇತರ ಅಡುಗೆ ಅನಿಲದ ದರ ೮೮೭ ರೂ. ೫೦ ಪೈಸೆಯಷ್ಟು ಹೆಚ್ಚಾಗಿದೆ. ರಾಜಧಾನಿ ದೆಹಲಿಯಲ್ಲಿ ಈಗ ಸಬ್ಸಿಡಿಯೇತರ ಅಡುಗೆ ಅನಿಲ ೧೪.೨ ಕೆಜಿ ತೂಕದ ಸಿಲಿಂಡರ್ ೮೮೪ ರೂ. ೫೦ ಪೈಸೆಯಷ್ಟು ಹೆಚ್ಚಳವಾಗಿದೆ.
ಈಗ ಶ್ರಾವಣಮಾಸದಿಂದಲೇ ಸಾಲು ಸಾಲು ಹಬ್ಬಗಳು ಬರುತ್ತವೆ. ಜನ ಸಾಮಾನ್ಯರಿಗೆ ಖರ್ಚು-ವೆಚ್ಚ ಇದ್ದೇ ಇರುತ್ತದೆ. ಈಗಾಗಲೇ ಪೆಟ್ರೋಲ್ ಮತ್ತು ಡೀಸಲ್ ದರ ಏರಿಕೆಯಾಗಿ ಅಗತ್ಯ ವಸ್ತುಗಳ ದರ ಗಗನಕ್ಕೇರಿದೆ. ಅದರಲ್ಲೂ ಗಣೇಶ ಚತುರ್ಥಿ ಹಬ್ಬಕ್ಕೆ ಕೆಲ ದಿನಗಳು ಮಾತ್ರ ಬಾಕಿ ಉಳಿದಿದ್ದು, ಈಗ ಅಡುಗೆ ಅನಿಲ ಸಿಲಿಂಡರ್ ದರವನ್ನು ಮತ್ತೆ ೨೫ ರೂ.ಗಳಿಗೆ ಏರಿಕೆ ಮಾಡಿರುವುದು ಗ್ರಾಹಕರಿಗೆ ಬರೆ ಎಳೆದಂತಾಗಿದೆ.
ಜ. ೧ ರಿಂದ ಸೆ. ೧ರ ನಡುವೆ ಎಲ್‌ಪಿಜಿ ಸಿಲಿಂಡರ್ ಬೆಲೆ ೧೯೦ ರೂ.ಗಳಷ್ಟು ಹೆಚ್ಚಳವಾಗಿದೆ. ದೇಶದ ಬಹುತೇಕ ನಗರಗಳಲ್ಲಿ ಅಡುಗೆ ಅನಿಲೆ ಬೆಲೆ ಹೆಚ್ಚಳವಾಗಿದ್ದು, ಜು. ೧ ರಂದು ಎಲ್‌ಪಿಜಿ ಸಿಲಿಂಡರ್ ೨೫ ರೂ. ೫೦ ಪೈಸೆಯಷ್ಟು ತೈಲ ಕಂಪನಿಗಳು ಏರಿಕೆ ಮಾಡಿದ್ದವು.
ಈಗ ಸೆಪ್ಟೆಂಬರ್ ತಿಂಗಳ ಮೊದಲ ವಾರದಲ್ಲೇ ಗೃಹೋಪಯೋಗಿ ಅನಿಲ ದರವನ್ನು ಹೆಚ್ಚಳ ಮಾಡಿ ಗ್ರಾಹಕರಿಗೆ ಆಘಾತ ನೀಡಿದೆ. ಜೂ. ೧ ರಂದು ಎಲ್‌ಪಿಜಿ ಸಿಲಿಂಡರ್ ದರ ೮೦೯ ರೂ., ಜು. ೧ ರಂದು ೮೩೪ ರೂ.ಗೆ ಏರಿಸಲಾಗಿತ್ತು. ತೈಲ ಕಂಪನಿಗಳು ತಿಂಗಳ ಮೊದಲ ದಿನವೇ ಎಲ್‌ಪಿಜಿ ಸಿಲಿಂಡರ್‌ಗಳ ದರವನ್ನು ಪರಿಷ್ಕರಿಸುತ್ತಿವೆ.
ಈ ವರ್ಷ ಮೊದಲ ಬಾರಿಗೆ ಫೆ. ೪ ರಂದು ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ೨೫ ರೂ.ಗೆ ಏರಿಸಲಾಗಿತ್ತು. ಫೆ. ೧೫ ರಂದು ೫೦ ರೂ., ಫೆ. ೨೫ ಮತ್ತು ಮಾ. ೧ ರಂದು ಮತ್ತೆ ೨೫ ರೂ. ಹೆಚ್ಚಿಸಲಾಗಿತ್ತು. ಇದರೊಂದಿಗೆ ಫೆಬ್ರವರಿ ತಿಂಗಳಲ್ಲೇ ೩ ಬಾರಿ ಅಡುಗೆ ಅನಿಲ ಸಿಲಿಂಡರ್ ದರವನ್ನು ಏರಿಕೆ ಮಾಡಲಾಗಿದೆ.
ಅಡುಗೆ ಅನಿಲ ಸಿಲಿಂಡರ್ ೧೨೫ ರೂ. ಏರಿಕೆಯಾಗಿದ್ದ ವೇಳೆ ಏ. ೧ ರಂದು ಪ್ರತಿ ಸಿಲಿಂಡರ್ ದರವನ್ನು ೧೦ ರೂ.ಗೆ ಕಡಿತ ಮಾಡಲಾಗಿತ್ತು. ಜುಲೈ, ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಎಲ್‌ಪಿಜಿ ದರವನ್ನು ತಲಾ ೨೫ ರೂ.ಗೆ ಹೆಚ್ಚಿಸಲಾಗಿದೆ. ಒಟ್ಟಾರೆ ೩ ತಿಂಗಳಲ್ಲಿ ೭೫ ರೂ. ಏರಿಕೆ ಕಂಡಿದೆ.
ಕಳೆದ ವರ್ಷ ಕೇಂದ್ರ ಸರ್ಕಾರ ಎಲ್‌ಪಿಜಿ ಸಿಲಿಂಡರ್ ಬೆಲೆಯ ಸಬ್ಸಿಡಿಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿತ್ತು ಸಬ್ಸಿಡಿಯೇತರ ಎಲ್ಲ ಅನಿಲ ಸಿಲಿಂಡರ್‌ಗಳ ಬೆಲೆಯನ್ನು ಏಕರೂಪಕ್ಕೆ ತರಲಾಗಿದೆ.

ಬೆಂಗಳೂರು-೮೮೭ ರೂ. ೫೦

ದೆಹಲಿ- ೮೮೪.೫ ರೂ.

ಮುಂಬೈ- ೮೮೪.೫g ರೂ.

ಕೊಲ್ಕತ್ತ- ೯೧೧ ರೂ.

ಚೆನ್ನೈ- ೯೦೦ ರೂ.

ವಾಣಿಜ್ಯ ಬಳಕೆಯ ಸಿಲಿಂಡರ್ ದರವು ೭೫ ರೂ.ನಷ್ಟು ಹೆಚ್ಚಳವಾಗಿದೆ. ವಾಣಿಜ್ಯ ಬಳಕೆಯ ಸಿಲಿಂಡರ್ ದರ ಏರಿಕೆಯಾಗಿರುವುದರಿಂದ ಹೋಟೆಲ್‌ಗಳಲ್ಲಿ ತಿಂಡಿ-ತಿನಿಸು ದರವು ಹೆಚ್ಚಳವಾಗಲಿದ್ದು, ಶ್ರೀಸಾಮಾನ್ಯರು ಹೆಚ್ಚಿನ ಹಣ ತೆರಬೇಕಾಗಿದೆ.

ರಾಹುಲ್ ಗರಂ
ಗೃಹ ಬಳಕೆಯ ಅಡುಗೆ ಅನಿಲ ದರ ಏರಿಸಿರುವ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್‌ಗಾಂಧಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ದರ ಏರಿಕೆ ಮಾಡುವ ಮೂಲಕ ಸಾರ್ವಜನಿಕರನ್ನು ಖಾಲಿ ಹೊಟ್ಟೆಯಲ್ಲಿ ಮಲಗುವಂತೆ ಮಾಡಿ, ಮೋದಿ ಅವರು ಸ್ನೇಹಿತರ ನೆರಳಿನಲ್ಲಿ ಮಲಗುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಹಿಂದಿಯಲ್ಲಿ ಟ್ವೀಟ್ ಮಾಡಿರುವ ರಾಹುಲ್‌ಗಾಂಧಿ, ಜನರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ದೇಶದ ಜನತೆ ಒಗ್ಗಟ್ಟಿನಿಂದ ಹೋರಾಡಲಿದೆ ಎಂದು ಗುಡುಗಿದ್ದಾರೆ.
ದೇಶದ ೪ ಮಹಾ ನಗರಗಳಲ್ಲಿ ಕಳೆದ ಜನವರಿ ತಿಂಗಳಿನಿಂದ ಅಡುಗೆ ಅನಿಲ ದರ ಹೆಚ್ಚಿಸಿರುವ ಪಟ್ಟಿಯೊಂದಿಗೆ ಟ್ಯಾಗ್ ಮಾಡಿದ್ದಾರೆ. ಪೆಟ್ರೋಲ್, ಡೀಸಲ್ ಮತ್ತು ಅಡುಗೆ ಸಿಲಿಂಡರ್‌ಗಳ ಮೇಲಿನ ದರ ಏರಿಕೆ ಕುರಿತು ಕೇಂದ್ರದ ವಿರುದ್ಧ ಕಾಂಗ್ರೆಸ್ ಸಮರ ಸಾರಿದೆ.
ಈ ವಿಷಯಗಳನ್ನು ಮುಂದಿಟ್ಟುಕೊಂಡು ಇಂಧನ ದರಗಳ ಮೇಲಿನ ತೆರಿಗೆಯನ್ನು ಕಡಿಮೆ ಮಾಡುವಂತೆ ಒತ್ತಡ ಹೇರುತ್ತಿದೆ.