ಸಿರುಗುಪ್ಪ: 13ಸಾವಿರ ಹೇಕ್ಟರ್ ಬಿತ್ತನೆ ಮಾಡಿದ ರೈತರು


ಸಂಜೆವಾಣಿ ವಾರ್ತೆ
ಸಿರುಗುಪ್ಪ, ಜು.26:  ತಾಲೂಕಿನಲ್ಲಿ ಮಳೆ ಕೊರತೆಯ ನಡುವೇ ಕೆಲವು ಗ್ರಾಮಗಳಲ್ಲಿ ಉತ್ತಮ ಮಳೆಯಾಗಿದ್ದು, ತಾಲೂಕಿನಾದ್ಯಂತ 13000 ಹೆಕ್ಟೇರ್ ಪ್ರದೇಶದಲ್ಲಿ ವಿವಿಧ ಬೆಳೆಗಳನ್ನು ಬಿತ್ತನೆ ಮಾಡಲಾಗಿದ್ದು, ಕಳೆದ 5 ದಿನಗಳಿಂದ ಸುರಿಯುತ್ತಿರುವ ಜಿಟಿ ಜಿಟಿ ಮಳೆಯಿಂದಾಗಿ ಒಣಗಿ ಹೋಗುತ್ತಿದ್ದ ವಿವಿಧ ಬೆಳೆಗಳು ಚೇತರಿಸಿಕೊಂಡಿವೆ. ಅಲ್ಲದೆ ನೀರಿನ ಸೌಲಭ್ಯವಿರುವ ರೈತರು ಬೆಳೆದ ಭತ್ತದ ಸಸಿಮಡಿಗಳು ಹಸಿರಿನಿಂದ ನಳನಳಿಸುತ್ತಿವೆ.
ಮುಂಗಾರು ಹಂಗಾಮಿನಲ್ಲಿ ಸುಮಾರು 28 ರಿಂದ 33 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಪ್ರಮುಖ ಬೆಳೆಯಾಗಿ ಭತ್ತವನ್ನು ಬೆಳೆಯ ಲಾಗುತ್ತಿದ್ದು, ಈಗಾಗಲೇ ತುಂಗಭದ್ರ ಜಲಾಶಯದ ಮೇಲ್ಬಾಗದಲ್ಲಿ ಉತ್ತಮ ಮಳೆಯಾಗುತ್ತಿರುವುದು ತಾಲೂಕಿನ ರೈತರಲ್ಲಿ ಸಂತಸ ಮೂಡಿಸಿದ್ದು, ಭತ್ತ ನಾಟಿ ಕಾರ್ಯಕ್ಕೆ ಬೇಕಾದ ಸಸಿಮಡಿಗಳನ್ನು ಬೆಳೆಸುವ ಕಾರ್ಯದಲ್ಲಿ ರೈತರು ತೊಡಗಿಸಿಕೊಂಡಿದ್ದಾರೆ. ಅಲ್ಲದೆ ತುಂಗಭದ್ರ ನದಿ ಪಾತ್ರದ ಗ್ರಾಮಗಳ ರೈತರು ಸೇರಿದಂತೆ ಬೋರ್‌ ವೆಲ್ ಮತ್ತು ಭಾವಿ ನೀರಿನ ಸೌಲಭ್ಯವಿರುವ ರೈತರು ಸುಮಾರು ನಾಲ್ಕು ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತವನ್ನು ನಾಟಿ ಮಾಡಿದ್ದಾರೆ. ಅಲ್ಲದೆ ಮಳೆಯಾಶ್ರಿತ ಪ್ರದೇಶದಲ್ಲಿ ಸುಮಾರು 8843 ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಬೆಳೆಯನ್ನು ಬೆಳೆಯಲಾಗಿದ್ದು, ಉತ್ತಮ ಮಳೆಯಾದ ಭಾಗದಲ್ಲಿ ಒಂದು ಬಾರಿ ಹತ್ತಿಬೆಳೆಗೆ ರಸಗೊಬ್ಬರವನ್ನು ಹಾಕಿ ರೈತರು ಕಳೆ ಕೀಳುವ ಕಾರ್ಯದಲ್ಲಿ ತೊಡಗಿದ್ದಾರೆ. ಅಲ್ಲದೆ 75ಹೆಕ್ಟೇರ್ ಪ್ರದೇಶದಲ್ಲಿ ಸೂರ್ಯಕಾಂತಿ ಬೆಳೆಯನ್ನು ತಾಲೂಕಿನ ಹಗರಿ ನದಿ ಪಾತ್ರದ ರೈತರು ಬೆಳೆದಿದ್ದಾರೆ. ಅಲ್ಲದೆ ಸಿರುಗುಪ್ಪದ ರೈತರು ಮೆಣಸಿನಕಾಯಿ ಬೀಜವನ್ನು ಟ್ರ್ಯಾಕ್ಟರ್‌ ಕೂರಿಗೆ ಮೂಲಕ ಬಿತ್ತನೆ ಮಾಡುತ್ತಿದ್ದಾರೆ.
 ನಮ್ಮ ಭಾಗದಲ್ಲಿ ಉತ್ತಮ ಮಳೆಯಾಗಿದ್ದು, ಮೆಣಸಿನಕಾಯಿ ಬೆಳೆಯನ್ನು ಟ್ರ್ಯಾಕ್ಟರ್ ಕೂರಿಗೆ ಮೂಲಕ ಬೀಜ ಹಾಕಿ ನಾಟಿಮಾಡುತ್ತಿದ್ದೇವೆಂದು ಸಿರುಗುಪ್ಪದ ರೈತ ಈರಣ್ಣ ತಿಳಿಸಿದ್ದಾರೆ.
: ತಾಲೂಕಿನಲ್ಲಿ 13ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ವಿವಿಧ ಬೆಳೆಗಳನ್ನು ಬೆಳೆಯಲಾಗಿದೆ. ಮುಂಗಾರು ಹಂಗಾಮಿನಲ್ಲಿ ಭತ್ತ ನಾಟಿಗಾಗಿ ರೈತರು ಸಸಿಮಡಿಗಳನ್ನು ಹಾಕಿಕೊಂಡಿದ್ದು, ತುಂಗಭದ್ರ ಜಲಾಶಯಕ್ಕೆ ನೀರು ಹರಿದು ಬರುತ್ತಿದ್ದು, ಸಂತಸದ ಸಂಗತಿಯಾಗಿದೆ ಎಂದು ಸಹಾಯಕ  ಕೃಷಿ ನಿರ್ದೇಶಕ ಎಸ್.ಬಿ.ಪಾಟೀಲ್‌ ತಿಳಿಸಿದ್ದಾರೆ.