
ಸಿರಿಗೇರಿ ಏ18. ನಿನ್ನೆ ಏ.17 ರಂದು ಸೋಮವಾರ ಸಿರುಗುಪ್ಪ ವಿಧಾನ ಸಭಾ ಕ್ಷೇತ್ರದ ಎಸ್‍ಟಿ ಮೀಸಲಾತಿ ಕ್ಷೇತ್ರಕ್ಕೆ, ಈ ಚುನಾವಣೆಯಲ್ಲಿ ಈಭಾಗಕ್ಕೆ ಹೊಸ ಪಕ್ಷವಾದ ಬಹುಜನ ಸಮಾಜ ಪಾರ್ಟಿ (ಬಿಎಸ್‍ಪಿ) ಪಕ್ಷದಿಂದ ಅಭ್ಯರ್ಥಿಯೊಬ್ಬರು ನಾಮಪತ್ರ ಸಲ್ಲಿಸಿದ್ದಾರೆ. ಸಿರಿಗೇರಿಯ ಹಳ್ಳಿಮರದ ವೀರೇಶ್ ಎಂಬುವವರು ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಬಿಎಸ್‍ಪಿ ಪಕ್ಷದಿಂದ ಅಭ್ಯರ್ಥಿಯಾಗಿ ನಾಮ ಪತ್ರವನ್ನು ಸಲ್ಲಿಸಿದ್ದಾರೆ. ಸಿರಿಗೇರಿ ಮತ್ತು ಇತರೆ ಗ್ರಾಮಗಳ ತಮ್ಮ ನೂರಾರು ಬೆಂಬಲಿಗರೊಂದಿಗೆ ಗ್ರಾಮದ ಶ್ರೀ ನಾಗನಥೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ತಮ್ಮ ಪರವಾನಿಗೆಯ ವಾಹನಗಳಲ್ಲಿ, ಬೈಕ್‍ಗಳಲ್ಲಿ ಸಿರುಗುಪ್ಪಕ್ಕೆ ತೆರಳಿ ತಾಲೂಕು ಕ್ರೀಢಾಂಗಣದಿಂದ ಮೆರವಣಿಗೆ ಹೊರಟು ಚುನಾವಣಾಧಿಕಾರಿಗಳಿಗೆ ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಿದರು. ಸಿರುಗುಪ್ಪ ತಾಲೂಕಿನಲ್ಲಿ ಈ ಸಲದ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳ ಜೊತೆಗೆ ಬಿಎಸ್‍ಪಿ, ಆಪ್, ಪ್ರಾದೇಶಿಕ ಪಕ್ಷಗಳ ಪೈಕಿ ಕೆಆರ್‍ಪಿಪಿ, ಕೆಆರ್‍ಎಸ್, ಎನ್ನುವ ಹೊಸ ಪಕ್ಷಗಳಿಂದ ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಿ, ಪ್ರಮುಖ ಪಕ್ಷಗಳ ನಡುವೆ ತಮ್ಮ ಅದೃಷ್ಟದ ಪರೀಕ್ಷೆಗಿಳಿದಿರುವುದು ವಿಶೇಷವಾಗಿದೆ.