ಸಿರುಗುಪ್ಪ ನಗರಸಭೆ ಮತ್ತೆ ಕಾಂಗ್ರೆಸ್ ತೆಕ್ಕೆಗೆ

ಬಳ್ಳಾರಿ ನ 03 : ಬಿಜೆಪಿಯ ಸಂಸದ ಮತ್ತು ಶಾಸಕರು ಇರುವ ಜಿಲ್ಲೆಯ ಸಿರುಗುಪ್ಪ ನಗರಸಭೆಯಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ನಿನ್ನೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದಿದೆ. ಎರಡೂ ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆ.
31 ಸದಸ್ಯ ಬಲದ ನಗರ ಸಭೆಯಲ್ಲಿ ಬರೊಬ್ಬರಿ 19 ಸದ್ಯಸರನ್ನುಹೊಂದಿರುವ ಕಾಂಗ್ರೆಸ್ ನಗರಸಭೆಯ ಅಧಿಕಾರದ ಚುಕ್ಕಾಣಿಯನ್ನುಅನಾಯಾಸವಾಗಿ ಹಿಡಿದಿದೆ.11 ಸದಸ್ಯರು ಬಿಜೆಪಿ ಮತ್ತು ಓರ್ವ ಪಕ್ಷೇತರ ಸದಸ್ಯರಿದ್ದರು.
6ನೇ ವಾರ್ಡನ ಸದ್ಯಸ ದೇಶನೂರು ನಾಗರಾಜ ಅಧ್ಯಕ್ಷರಾಗಿ, 1ನೇವಾರ್ಡ ಸದಸ್ಯೆ ಗುಲ್ಜಾರ್ ಬೇಗಂ ಉಪಾಧ್ಯಕ್ಷರಾಗಿದ್ದಾರೆ. ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು.
ಅಧ್ಯಕ್ಷ ಸ್ಥಾನಕ್ಕೆ ಡಿ.ನಾಗರಾಜ, ಮುರಳಿ ಮೋಹನರೆಡ್ಡಿ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಗುಲ್ಜಾರಾ ಬೇಗಂ, ಎ. ಭಾರತಿ ನಾಮಪತ್ರ ಸಲ್ಲಿಸಿದ್ದರು. ಬಿಜೆಪಿಯ ಮುರಳಿಮೋಹನರೆಡ್ಡಿ, ಎ. ಭಾರತಿ ನಾಮಪತ್ರ ಹಿಂಪಡೆದರು ಎಂದು ಚುನಾವಣಾಧಿಕಾರಿ ರಮೇಶ ಕೋನರೆಡ್ಡಿ ಘೋಷಿಸಿದರು. ತಹಶೀಲ್ದಾರ್ ಎಸ್.ಬಿ. ಕೂಡಲಗಿ, ಪೌರಾಯುಕ್ತ ಪ್ರೇಮ್ ಇದ್ದರು.
ಆಯ್ಕೆಯಾದ ನಂತರ ನೂತನ ಅಧ್ಯಕ್ಷ ಉಪಾಧ್ಯಕ್ಷರನ್ನು ಮಾಜಿ ಶಾಸಕ ಟಿ.ಎಂ.ಚಂದ್ರಶೇಖರಯ್ಯ, ಬಿ.ಎಂ.ನಾಗರಾಜ್, ಕಾಂಗ್ರೆಸ್ ಪಕ್ಷದ ಮುಖಂಡರುಗಳಾದ ಬಿ.ಮುರುಳಿ, ಅಗಸನೂರು ಗೋಪಾಲರೆಡ್ಡಿ ಮೊದಲಾದವರು ಅಭಿನಂದಿಸಿದರು.