ಸಿರುಗುಪ್ಪ ತಾಲೂಕು ಛಲವಾದಿ ಮಹಾಸಭ ವತಿಯಿಂದ ಮಾಸಿಕ ಸಭೆ”


ಸಂಜೆವಾಣಿ ವಾರ್ತೆ
ಸಿರಿಗೇರಿ ಜು 26. ಸಿರುಗುಪ್ಪ ತಾಲೂಕ ಛಲವಾದಿ ಮಹಾಸಭಾ ಸಂಘದ ಜುಲೈ ತಿಂಗಳ ಮಾಸಿಕ ಸಭೆ ಜು.23 ರಂದು ಸಿರುಗುಪ್ಪ ನಗರ ಹೊರವಲಯದ ಶ್ರೀಶಂಭುಲಿಂಗೇಶ್ವರ ಸಭಾಂಗಣದಲ್ಲಿ ನಡೆಯಿತು. ಸಂಘದ ತಾಲೂಕು ಅಧ್ಯಕ್ಷ ಬಿ.ಸಣ್ಣರಾಮಯ್ಯ ಮಾತನಾಡಿ ಸಂಘದಿಂದ ನಡೆದ ಚಟುವಟಿಕೆಗಳನ್ನು ತಿಳಿಸಿ, ಮುಂದಿನ ಚಟುವಟಿಕೆಗಳ ಮಾಹಿತಿ ನೀಡಿ, ನಮ್ಮ ಸಮುದಾಯದವರು ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವಲ್ಲಿ ಇತರರು ನಮ್ಮ ಸಂಘಟನೆಯ ಶಕ್ತಿ ಕುಗ್ಗಿಸುವ ವ್ಯಕ್ತಿಗಳ ಸಂಪರ್ಕಕ್ಕೆ ಹೋಗಬಾರದು. ಸಂಘದಿಂದ ನಿಮಗೆ ಸೂಕ್ತ ಪರಿಹಾರ ದೊರೆಯದಿದ್ದಲ್ಲಿ ಕಾನೂನು ಪ್ರಕಾರ ಪರಿಹರಿಸಿಕೊಳ್ಳಿ ಎಂದು ತಿಳಿಸಿದರು. ಯುವ ವಕೀಲ ಮಣ್ಣೂರು ಸೋಮಶೇಖರ್ ಮಾತನಾಡಿ ಡಾ.ಬಿ.ಆರ್.ಅಂಬೆಡ್ಕರ್ ಸಿದ್ದಾಂತದ ಮೇಲೆ ನಡೆಯುತ್ತಿರುವ ಸಂಘಟನೆಗಳು ಮಾತ್ರ ಚಾಲ್ತಿಯಲ್ಲಿವೆ, ಹಣ ಅಧಿಕಾರದ ಹಿಂದೆ ಬಿದ್ದ ಸಂಘಟನೆಗಳು ನೆಲಕಚ್ಚಿವೆ ಎಂದು ತಿಳಿಸಿದರು. ಸಭೆಯಲ್ಲಿ ಉಪಾಧ್ಯಕ್ಷ ಜಿ.ತಿಮ್ಮಯ್ಯ, ಸಹ ಕಾರ್ಯದರ್ಶಿ ಬೂದುಗುಪ್ಪ ಓಂಕಾರಪ್ಪ, ಯುವಸಮಿತಿ ಉಪಾಧ್ಯಕ್ಷ ಕರೆಂಟ್ ಮಲ್ಲಯ್ಯ, ಪದಾಧಿಕಾರಿ ಸಿ.ಹನುಮಂತ, ಇವರು ಮಾತನಾಡಿ ಕೆಲ ಗ್ರಾಮದ ಸಮುದಾಯದವರ ಸಮಸ್ಯೆಗಳ ಕುರಿತು ಮಾತನಾಡಿ ಸಂಘಟನೆಯ ಪಾತ್ರದ ಬಗ್ಗೆ ತಿಳಿಸಿ, ಮುಂದಿನ ದಿನಗಳಲ್ಲಿ ಸಂಘಟನೆಯಿಂದ ಕೈಗೊಳ್ಳುವ ಉದ್ದೇಶಗಳನ್ನು ತಿಳಿಸಿದರು.
ಬಳ್ಳಾರಿ ಜಿಲ್ಲಾ ಬೌದ್ಧ ಮಹಾಸಭಾ ಜಿಲ್ಲಾ ಅಧ್ಯಕ್ಷ ಡಿ.ಎಚ್.ಹನುಮೇಶಪ್ಪ ಮಾತನಾಡಿ ಸಂಘದ ಜೊತೆ ಸಮುದಾಯದವರು ಇದ್ದರೆ ಅಂತಹವರನ್ನು ಸಂಘವು ಕೆಲವು ಸಮಸ್ಯೆಗಳಿಂದ ರಕ್ಷಣೆ ನೀಡುತ್ತದೆ. ಎಲ್ಲರೂ ಬುದ್ಧರ ಉಪದೇಶದಂತೆ ಸಾಮರಸ್ಯೆ, ಮೈತ್ರಿಜೀವನ, ಒಳ್ಳೆಯ ನಡತೆಗಳನ್ನು ಅಳವಡಿಸಿಕೊಂಡು ಹೋಗಬೇಕೆಂದು ತಿಳಿಸಿದರು. ಗೌರವಾಧ್ಯಕ್ಷ ಎಚ್.ಬಸವರಾಜ ಮಾತನಾಡಿ ನಮ್ಮ ಜಿಲ್ಲೆಯಲ್ಲಿಯೇ ನಮ್ಮ ತಾಲೂಕಿನ ಸಂಘಟನೆಯು ಕ್ರಿಯಾಶೀಲವಾಗಿದೆ, ಗ್ರಾಮಗಳಲ್ಲಿ ಗ್ರಾಮ ಘಟಕಗಳನ್ನು ರಚಿಸಿಕೊಂಡು ಸಂಘದ ಜೊತೆಗಿದ್ದು ಇನ್ನೂ ಹೆಚ್ಚಿನ ಬಲವನ್ನು ಸಂಘಟನೆಗೆ ನೀಡಬೇಕೆಂದು ಕರೆನೀಡಿದರು. ಸಿರುಗುಪ್ಪ ತಾಲೂಕಿನ ವಿವಿಧ ಗ್ರಾಮಗಳಿಂದ ಛಲವಾದಿ ಮಹಾಸಭಾ ಸಮಿತಿಯ ಪದಾಧಿಕಾರಿಗಳು, ಮುಖಂಡರು, ಸದಸ್ಯರು ಪಾಲ್ಗೊಂಡಿದ್ದರು. ಸಿರುಗುಪ್ಪ ನಗರ ಘಟಕದ ವತಿಯಿಂದ ಮಾಸಿಕ ಸಭೆಯನ್ನು ನಡೆಸಿಕೊಡಲಾಯಿತು.