ಸಿರುಗುಪ್ಪ ಡಿಪೋದಿಂದ ಸಿರಿಗೇರಿ ಮಾರ್ಗವಾಗಿ ಬೆಂಗಳೂರು ಬಸ್ ಪ್ರಾರಂಭ.


ಸಂಜೆವಾಣಿ ವಾರ್ತೆ
ಸಿರಿಗೇರಿ ನ21. ಬಹುದಿನಗಳಿಂದ ಸಿರಿಗೇರಿ ಮಾರ್ಗವಾಗಿ ಬೆಂಗಳೂರಿಗೆ ಹೋಗುವ ಸರ್ಕಾರಿ ಬಸ್ಸು ಬಿಡಬೇಕೆಂದು ಸ್ಥಳೀಯ ಹಲವು ಸಂಘಟನೆಗಳ ಮುಖಂಡರು, ಜನಪ್ರತಿನಿಧಿಗಳು ಒತ್ತಾಯಿಸಿದ್ದರು. ಅನೇಕ ಬಾರಿ ಬಳ್ಳಾರಿ ಕೇಂದ್ರ ಕಚೇರಿಗೆ, ಸಿರುಗುಪ್ಪ ಡಿಪೋಕ್ಕೆ, ಕೋರುಗೋಡು ಡಿಪೊಕ್ಕೆ, ಸಂಬಂಧಿಸಿದ ಇಲಾಖೆ ಸಚಿವರಿಗೂ  ಮನವಿ ಪತ್ರಗಳನ್ನು ಸಲ್ಲಿಸಿದ್ದರು. ಗ್ರಾಮದ ಕೆಲ ಮುಖಂಡರು ಸಾರಿಗೆ ಅಧಿಕಾರಿಗಳನ್ನು ಮೌಖಿಕವಾಗಿಯೂ ಭೇಟಿಯಾಗಿ ಸಿರಿಗೇರಿ ಬೆಂಗಳೂರು ಬಸ್ಸಿಗಾಗಿ ಒತ್ತಾಯಿಸಿದ್ದರು. ಕೊನೆಗೆ ಹಲವು ವರ್ಷಗಳಿಂದ ಒತ್ತಾಯವಿದ್ದ ಬೇಡಿಕೆಗೆ ನಿನ್ನೆಯಿಂದ ಸಿರುಗುಪ್ಪ ಡಿಪೋದಿಂದ ಸಿರಿಗೇರಿ ಮಾರ್ಗದಲ್ಲಿ ಬೆಂಗಳೂರು ಬಸ್ಸು ಸಂಚಾರಕ್ಕೆ ಚಾಲನೆ ನೀಡಲಾಗಿದೆ ಎಂದು ಸಂಸ್ಥೆಯ ನಿರ್ವಾಹಕರಾದ ಸಿರಿಗೇರಿ ವಿಶ್ವನಾಥ ಮಾಹಿತಿ ನೀಡಿದರು. ರಾತ್ರಿ 8 ಗಂಟೆಗೆ ಸಿರುಗುಪ್ಪ ಬಿಟ್ಟು, ಕೆಂಚನಗುಡ್ಡ, ಹೆರಕಲ್ಲು, ನಿಟ್ಟೂರು, ನಡವಿ ಮಾರ್ಗವಾಗಿ 8-30 ಕ್ಕೆ ಸಿರಿಗೇರಿಗೆ ಬಂದು ಕುರುಗೋಡು, ಬಾದನಹಟ್ಟಿ, ಎರಂಗಳಿಗಿ, ಕೊಳಗಲ್ಲು ಮಾರ್ಗವಾಗಿ ಬಳ್ಳಾರಿಯಿಂದ ಬೆಂಗಳೂರಿಗೆ ಹೋಗಲಿದೆ. ಈ ಬಸ್ಸು ಸಂಚಾರದಿಂದ ಮಧ್ಯಮ ವರ್ಗದವರಿಗೆ, ಕೂಲಿಕಾರ್ಮಿಕರಿಗೆ ಅನುಕೂಲವಾಗಲಿದೆ. ಈ ಹಿಂದೆ ಕುರುಗೋಡು ಡಿಪೋದಿಂದ ಸಿರಿಗೇರಿ ಮಾರ್ಗವಾಗಿ ದರೂರು, ತಾಳೂರು, ಹಡ್ಲಿಗಿ, ಮೊಕಾ ಮಾರ್ಗವಾಗಿ ಬಳ್ಳಾರಿಗೆ ಹೋಗಿ ಬೆಂಗಳೂರಿಗೆ ಹೋಗುತ್ತಿತ್ತು. ಈ ಮಾರ್ಗದಲ್ಲಿ ಸಿರಿಗೇರಿಯಿಂದ ಸಂಜೆ 6 ಗಂಟೆಗೆ ಬಿಡುವ ಬಸ್ಸು ಬಳ್ಳಾರಿಗೆ 10 ಗಂಟೆಗೆ ತಲುಪುತಿತ್ತು ಇದರಿಂದ ಈ ಬಸ್ಸು ಇದ್ದೂ ಇಲ್ಲದ ರೀತಿಯಂತಾಗಿತ್ತು. ಈಗ ಬಿಟ್ಟಿರುವ ಬಸ್ಸು  ನಿಗದಿತ ಸಮಯಕ್ಕೆ ಪ್ರತಿದಿನ ತಪ್ಪದೇ ಬರುವಂತಾದರೆ ಹೆಚ್ಚಿನ ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂದು ಸಾರ್ವಜನಿಕರು ಅಭಿಪ್ರಾಯ ಮತ್ತು ಸಂತಸ ವ್ಯಕ್ತಪಡಿಸಿದ್ದಾರೆ.