ಸಿರುಗುಪ್ಪ ಕೈ ಬಿಗಿ ಹಿಡಿತ ಬಿಡದಿರಲು ಶಾಸಕ ನಾಗೇಂದ್ರ ಪ್ರಯತ್ನ

ಎನ್.ವೀರಭದ್ರಗೌಡ
ಬಳ್ಳಾರಿ: ಸೋಲೇ ಗೆಲುವಿನ ಮೆಟ್ಟಿಲು ಎಂಬಂತೆ ಸಿರುಗುಪ್ಪ ಕ್ಷೇತ್ರದಲ್ಲಿ ಶಾಸಕರಾದವರ ಅನುಭವ, ಸಿ.ಎಂ. ರೇವಣಸಿದ್ದಯ್ಯ, ಅವರ ಅಳಿಯ ಟಿ.ಎಂ. ಚಂದ್ರಶೇಖರಯ್ಯ, ಹಾಲಿ ಶಾಸಕ ಎಂ.ಎಸ್.ಸೋಮಲಿಂಗಪ್ಪ, ಮಾಜಿ ಶಾಸಕ ಬಿ.ಎಂ.ನಾಗರಾಜ್ ಇವರೆಲ್ಲ ಮೊದಲು ಸೋತು ಆನಂತರ ಗೆದ್ದವರು.
ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಹೆಚ್ಚಿನ ಪ್ರಯತ್ನ ವಿಲ್ಲದೆ ಗೆಲುವಿನ ಸನಿಹಕ್ಕೆ ಬಂದಿದ್ದ ತಮ್ಮ ಅಳಿಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಬಿ.ಮುರುಳಿ ಅವರಿಗೆ ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಟಿಕೆಟ್ ತಂದರೆ ಶಾಸಕನನ್ನಾಗಿ ನೋಡಬಹುದು ಎಂಬ ನಿಟ್ಟಿನಲ್ಲಿ ಬಳ್ಳಾರಿ ಗ್ರಾಮೀಣ ಶಾಸಕ ಬಿ.ನಾಗೇಂದ್ರ ಸಿರುಗುಪ್ಪ ಕ್ಷೇತ್ರದಲ್ಲಿ ಅಳಿಯ ಮುರುಳಿ ಜೊತೆ ಮತ್ತು ಮಾಜಿ ಶಾಸಕರಾದ ಚಂದ್ರಶೇಖರಯ್ಯ, ಬಿ.ಎಂ.ನಾಗರಾಜ್ ಮೊದಲಾದವರೊಂದಿಗೆ ಹಾಲಿ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಪಕ್ಷ ಬೆಂಬಲಿತ ಅಭ್ಯರ್ಥಿಗಳ ಗೆಲುವಿಗೆ ರಣ ತಂತ್ರ ರೂಪಿಸತೊಡಗಿದ್ದಾರೆ.
ಈಗಾಗಲೇ ಸಿರುಗುಪ್ಪ ನಗರ ಸಭೆ ಚುನಾವಣೆನ್ನು ಮುರುಳಿ ಅವರ ನೇತೃತ್ವದೊಂದಿಗೆ ಕಾಂಗ್ರೆಸ್ ವಶಕ್ಕೆ ಪಡೆಯುವಲ್ಲಿ ನಡೆಸಿದ ಪ್ರಯತ್ನದಲ್ಲಿ ಸಿರುಗುಪ್ಪ ಕಾಂಗ್ರೆಸ್ ಮುಖಂಡರು ಯಶಸ್ಸು ಕಂಡಿದ್ದಾರೆ.
ಈಗ ರಾಜಕೀಯಕ್ಕೆ ಭದ್ರ ಬುನಾದಿಯಾದ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲೂ ಕಾಂಗ್ರೆಸ್ ಪಕ್ಷವನ್ನು ಬಲಪಡಿಸಲು, ಸಂಘಟಿಸಲು, ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಕಾರ್ಯತಂತ್ರ ರೂಪಿಸುವ ಕಾರ್ಯವನ್ನು ಶಾಸಕ ನಾಗೇಂದ್ರ ನಡೆಸಿದ್ದಾರೆ.
ಹೀಗಾಗಿ ಅನೇಕ ಕಡೆ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಅವಿರೋಧ ಆಯ್ಕೆ ಮಾಡುವ ಪ್ರಯತ್ನ ನಡೆದಾಗ ಅಲ್ಲಿ ಮಧ್ಯ ಪ್ರವೇಶ ಮಾಡಿ, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಚುನಾವಣೆ ಎದುರಿಸಲು ಬೇಕಾದ ಸಹಾಯ ಸಹಕಾರವನ್ನು ಮಾಡತೊಡಗಿದ್ದಾರೆ. ಶಾನವಾಸಪುರ ಗ್ರಾಮ ಪಂಚಾಯ್ತಿಯಲ್ಲಿನ ಸ್ಪರ್ಧೆ ಇದಕ್ಕೆ ಉದಾಹರಣೆಯಾಗಿದೆ.
ಇದೇ ರೀತಿ ಹಲವು ಪಂಚಾಯ್ತಿಗಳಲ್ಲಿ ನಡೆದಿದೆ. ಆದರೆ ಚುನಾಔಣೇ ಮುಗಿಯುವ ವರೆಗೆ ನಿಂತು ಅಭ್ಯರ್ಥಿಗಳ ಗೆಲುವಿಗೆ ಪ್ರಯತ್ನ ನಡೆಸಬೇಕಿದೆ.
ಈ ದಿಶೆಯಲ್ಲಿ ಸಿರುಗುಪ್ಪ ಕೇತ್ರದ ಹಲವಾರು ಹಳ್ಳಿಗಳಲ್ಲಿ ಸಂಚಿರುತ್ತಿರುವ ಶಾಸಕ ನಾಗೇಂದ್ರ ಅವರು ನಿನ್ನೆ ತಾಳೂರು ಗ್ರಾಮ ಪಂಚಾಯತಿಯ ವ್ಯಾಪ್ತಿಯ ಬಿಜೆಪಿ ಮತ್ತು ಇತರೆ ಪಕ್ಷದ ಸುಮಾರು 500ಕ್ಕೂ ಹೆಚ್ಚು ಮುಖಂಡರು ಹಾಗೂ ಕಾರ್ಯಕರ್ತರನನ್ನು ಕಾಂಗ್ರೆಸ್ ಪಕ್ಷಕ್ಕೆ ಬರಮಾಡಿಕೊಂಡರು.
ಈ ಸಂದರ್ಭದಲ್ಲಿ ಮಾಜಿ ಶಾಸಕರುಗಳಾದ ಟಿ.ಎಂ.ಚಂದ್ರಶೇಖರಯ್ಯ, ಬಿ.ಎಂ.ನಾಗರಾಜ, ಬಿ.ಮುರಳಿ ಕೃಷ್ಣ, ಪಕ್ಷದ ಮುಖಂಡರುಗಳಾದ ಗೋಪಾಲರೆಡ್ಡಿ, ಗಜಗನಾಳ ವೀರೇಶ್ ಗೌಡ, ಶಿವಶಂಕರ ಗೌಡ, ಮಲ್ಲಿಕಾರ್ಜುನ ಬಾಳಪ್ಪ, ಬಿ.ಎಂ ಸತೀಶ ಕರೂರ ಪ್ರತಾಪ್ ರೆಡ್ಡಿ, ಮಾರುತಿರೆಡ್ಡಿ, ಕುಮಾರ ರಾಜಗೌಡ, ಶ್ರೀನಿವಾಸರೆಡ್ಡಿ, ಸೂರ್ಯ ಪ್ರಕಾಶ್ ರೆಡ್ಡಿ, ತಾಳೂರು ಕಾಂಗ್ರೆಸ್ ಮುಖಂಡರುಗಳು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.