ಸಿರಿ ಧಾನ್ಯದಿಂದ ಸುಸ್ತಿರ ಆರೋಗ್ಯ ಸುಸ್ಥಿರ ಅರೋಗ್ಯ

ಚಿಕ್ಕಬಳ್ಳಾಪುರ.ಡಿ.೨೪.ಆರೋಗ್ಯಕ್ಕೆ ಪೂರಕವಾಗಿರುವ ಸಿರಿಧಾನ್ಯಗಳಿಗೆ ಬೇಡಿಕೆ ಹೆಚ್ಚಾಗುತ್ತಿದ್ದು, ಸುಸ್ಥಿರ ಆರೋಗ್ಯದ ದೃಷ್ಟಿಯಿಂದ ಇಂದು ಶ್ರೀಮಂತರೂ ಸಿರಿಧಾನ್ಯಗಳತ್ತ ಹೆಚ್ಚಿನ ಒಲವು ತೋರುತ್ತಿದ್ದಾರೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಅವರು ತಿಳಿಸಿದರು.
ಅವರು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕೃಷಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಸಿರಿಧಾನ್ಯಗಳ ಮೇಳ, ರೈತ ದಿನ ಹಾಗೂ ಸಿರಿಧಾನ್ಯ ಉತ್ಪಾದಕರು ಮತ್ತು ಮಾರುಕಟ್ಟೆದಾರರ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಸಿರಿಧಾನ್ಯಗಳಿಗೆ ಇತ್ತೀಚಿನ ದಿನಗಳಲ್ಲಿ ಬೇಡಿಕೆ ಹೆಚ್ಚಿದ್ದು, ಅತಿ ಕಡಿಮೆ ನೀರಿನಲ್ಲಿ ಸಿರಿಧಾನ್ಯಗಳನ್ನು ಬೆಳೆಯಲು ಅವಕಾಶವಿದೆ. ಈ ಹಿಂದೆ ಹಳ್ಳಿಗಳಲ್ಲಿ ಮಳೆಯಾಶ್ರಿತ ಬೆಳೆಯಾಗಿ ಬೆಳೆಯುತ್ತಿದ್ದ ಸಿರಿಧಾನ್ಯಗಳ ಮಹತ್ವ ತುಂಬಾ ಜನರಿಗೆ ತಿಳಿದಿರಲಿಲ್ಲ. ಹಲವು ಉತ್ತಮ ಪೋಷಕಾಂಶಗಳನ್ನು ಹೊಂದಿರುವ ಸಿರಿಧಾನ್ಯಗಳನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಸರ್ಕಾರ ೨೦೨೩ ರ ವರ್ಷವನ್ನು ಸಿರಿಧಾನ್ಯಗಳ ವರ್ಷ ಎಂದು ಘೋಷಿಸಿದೆ. ಹಿಂದೆ ಬಡವರು ಮಾತ್ರ ಉಪಯೋಗಿಸುತ್ತಿದ್ದ ಸಿರಿಧಾನ್ಯಗಳತ್ತ ಶ್ರೀಮಂತರೂ ಹೆಚ್ಚಿನ ಒಲವು ತೋರುತ್ತಿದ್ದಾರೆ. ಜನವರಿ ತಿಂಗಳಿನಲ್ಲಿ ಬೆಂಗಳೂರಿನಲ್ಲಿ ಮೂರುದಿನಗಳ ಕಾಲ ಬೃಹತ್ ಮಟ್ಟದ ಸಿರಿಧಾನ್ಯಗಳ ಮೇಳವನ್ನು ಸರ್ಕಾರವೇ ಆಯೋಜಿಸುತ್ತಿದೆ ಎಂದರು.
ಸಚಿವರು ರೈತರೊಂದಿಗೆ ಸಂವಾದ ನಡೆಸಿದರು. ಪ್ರಗತಿ ಪರ ರೈತರಿಗೆ ಸನ್ಮಾನಿಸಿ ಗೌರವಿಸಿದರು.ಕೃಷಿ ಮೇಳದ ಅಂಗವಾಗಿ ವಿವಿಧ ಇಲಾಖೆಗಳು ತೆರಿದಿದ್ದ ಸಿರಿಧಾನ್ಯ ಜಾಗೃತಿ ಮಳಿಗೆಗಳು, ವಸ್ತು ಪ್ರದರ್ಶನ ಕೇಂದ್ರಗಳನ್ನು ಉದ್ಘಾಟನೆ ಮಾಡಿದರು.ಸಿರಿಧಾನ್ಯಗಳ ಮಹತ್ವ ಸಾರುವ ಕರಪತ್ರಗಳನ್ನು ಸಚಿವರು ಬಿಡುಗಡೆ ಮಾಡಿದರು.
ಜಿಪಂ ಸಿಇಒ ಪ್ರಕಾಶ್ ಜಿ.ಟಿ.ನಿಟ್ಟಾಲಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್.ನಾಗೇಶ್, ಅಪರ ಜಿಲ್ಲಾಧಿಕಾರಿ ಡಾ.ಎನ್.ತಿಪ್ಪೇಸ್ವಾಮಿ, ಉಪವಿಭಾಗಾಧಿಕಾರಿ ಡಿ.ಹೆಚ್.ಅಶ್ವಿನ್, ಕೃಷಿ ಇಲಾಖೆಯ ಜಂಟಿ ನಿರ್ದೆಶಕಿ ಜಾವೀದಾ ನಾಸಿಮ್ ಖಾನಂ,ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ನಾರಾಯಣ ಸ್ವಾಮಿ, ನಗರಸಭೆ ಸದಸ್ಯರು, ಸ್ಥಳೀಯ ಜನಪ್ರತಿನಿಧಿಗಳು ರೈತ ಸಂಘಟನೆಗಳ ಮುಖಂಡರು, ಪದಾಧಿಕಾರಿಗಳು, ರೈತ ಮಹಾಶಯರು,ವಿವಿಧ ಸ್ವ-ಸಹಾಯ ಸಂಘಗಳ ಪದಾಧಿಕಾರಿಗಳು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಸಿಬ್ಬಂದಿ ಹಾಜರಿದ್ದರು.