ಸಿರಿಯಾದಿಂದ ರಾಸಾಯನಿಕ ಅಸ್ತ್ರಗಳ ಮಾಹಿತಿ ಅಪೂರ್ಣ

ನ್ಯೂಯಾರ್ಕ್, ಮೇ ೧೦- ಸಿರಿಯಾದ ರಾಸಾಯನಿಕ ಶಸ್ತ್ರಾಸ್ತ್ರ ಕಾರ್ಯಕ್ರಮಕ್ಕೆ ಸಂಬಂಧಿಸಿದ ೨೦ ಬಗೆಹರಿಯದ ವಿಷಯಗಳನ್ನು ಇತ್ಯರ್ಥಪಡಿಸುವ ಅಗತ್ಯವಿದೆ. ತನ್ನ ರಾಸಾಯನಿಕ ಶಸ್ತ್ರಾಸ್ತ್ರ ಕಾರ್ಯಕ್ರಮದ ನಿರ್ಮೂಲನೆ ಮತ್ತು ದಾಸ್ತಾನು ನಾಶಕ್ಕೆ ಸಂಬಂಧಿಸಿದಂತೆ ಸಿರಿಯನ್ ಆಡಳಿತ ಈಗಲೂ ರಾಸಾಯನಿಕ ಶಸ್ತ್ರಾಸ್ತ್ರಗಳ ಮೇಲ್ವಿಚಾರಣಾ ಸಮಿತಿಯನ್ನು ಅನುಸರಿಸುತ್ತಿಲ್ಲ ಎಂದು ವಿಶ್ವಸಂಸ್ಥೆಯ ಅಧೀನ ಪ್ರಧಾನ ಕಾರ್ಯದರ್ಶಿ ಮತ್ತು ನಿಶ್ಯಸ್ತ್ರೀಕರಣ ವ್ಯವಹಾರಗಳಿಗಾಗಿನ ವಿಶ್ವಸಂಸ್ಥೆ ಕಚೇರಿ (ಒಪಿಡಬ್ಲ್ಯೂಸಿ)ಯ ಉನ್ನತಾಧಿಕಾರಿ ಇಝುಮಿ ನಕಮಿತ್ಸು ಹೇಳಿದ್ದಾರೆ.
ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆಯಲ್ಲಿ ಮಾತನಾಡಿದ ಅವರು, ಸಂಘರ್ಷದ ಸಮಯದಲ್ಲಿ ನಾಗರಿಕರ ವಿರುದ್ಧ ರಾಸಾಯನಿಕ ಶಸ್ತ್ರಾಸ್ತ್ರಗಳ ಬಳಕೆಯನ್ನು ನಿಷೇಧಿಸುವ ಕುರಿತು ೨೦೧೩ರಲ್ಲಿ ವಿಶ್ವಸಂಸ್ಥೆ ಭದ್ರತಾ ಮಂಡಳಿ ಅಂಗೀಕರಿಸಿದ ನಿರ್ಣಯ ೨೧೧೮ರ ಪ್ರಕಾರ ಸಿರಿಯಾದ ರಾಸಾಯನಿಕ ಶಸ್ತ್ರಾಸ್ತ್ರಗಳ ಕಾರ್ಯಕ್ರಮಗಳನ್ನು ಪರಿಹರಿಸಬೇಕು. ಕನಿಷ್ಟ ೩ ಸಂದರ್ಭಗಳಲ್ಲಿ ಸಿರಿಯಾ ಸರಕಾರ ತನ್ನ ಪ್ರಜೆಗಳ ವಿರುದ್ಧ ರಾಸಾಯನಿಕ ಅಸ್ತ್ರಗಳನ್ನು ಬಳಸಿದೆ ಎಂದು ವಿಶ್ವಸಂಸ್ಥೆ ಮತ್ತು ಮಾನವ ಹಕ್ಕುಗಳ ಸಂಘಟನೆ ಆರೋಪಿಸಿವೆ. ರಾಜಧಾನಿ ದಮಾಸ್ಕಸ್ನಲ್ಲಿ ಹಾಗೂ ಸುತ್ತಮುತ್ತಲಿನ ನಗರಗಳಲ್ಲಿ ೨೦೧೩ರ ಆಗಸ್ಟ್, ೨೦೧೭ರ ಎಪ್ರಿಲ್ ಮತ್ತು ೨೦೨೮ರ ಎಪ್ರಿಲ್ನಲ್ಲಿ ರಾಸಾಯನಿಕ ಅಸ್ತ್ರ ಬಳಕೆಯಿಂದ ನೂರಾರು ನಾಗರಿಕರು ಮೃತಪಟ್ಟಿದ್ದು ಸಾವಿರಾರು ಮಂದಿ ಗಾಯಗೊಂಡಿರುವುದಾಗಿ ವಿಶ್ವಸಂಸ್ಥೆಯ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಸಿರಿಯಾ ಆಡಳಿತದ ರಾಸಾಯನಿಕ ಶಸ್ತ್ರಾಸ್ತ್ರ ಕಾರ್ಯಕ್ರಮಗಳ ಬಗ್ಗೆ ಸ್ಪಷ್ಟನೆ ಪಡೆಯುವಲ್ಲಿ ತನ್ನ ಕಚೇರಿ ಹಾಗೂ ವಿಶ್ವಸಂಸ್ಥೆಯ ಏಜೆನ್ಸಿಗಳು ವಿಫಲವಾಗಿವೆ. ಸಿರಿಯಾ ಅಧಿಕಾರಿಗಳು ಒದಗಿಸಿದ ಘೋಷಣೆಗಳಲ್ಲಿ ಅಸಂಗತತೆ, ವ್ಯತ್ಯಾಸಗಳು ಹಾಗೂ ದೋಷಗಳಿವೆ. ತನ್ನ ರಾಸಾಯನಿಕ ಕಾರ್ಯಕ್ರಮಗಳಿಗೆ ಸಂಬಂಧಿಸಿದ ಎಲ್ಲಾ ಬಾಕಿಯುಳಿದಿರುವ ಸಮಸ್ಯೆಗಳನ್ನು ಪರಿಹರಿಸಲು ಒಪಿಡಬ್ಲ್ಯೂಸಿಯೊಂದಿಗೆ ಸಿರಿಯಾ ಆಡಳಿತ ಸಹಕರಿಸುವ ಅಗತ್ಯವಿದೆ ಎಂದು ನಕಮಿತ್ಸು ಹೇಳಿದ್ದಾರೆ.