ಸಿರಿಧಾನ್ಯ ಸೇವನೆಯಿಂದ ಆರೋಗ್ಯ ವೃದ್ಧಿ: ರವಿಂದ್ರ

ಚಿತ್ತಾಪೂರ:ಸೆ.22:ಸಿರಿಧಾನ್ಯಗಳಲ್ಲಿ ಹಲವು ಬಗೆಯ ಆರೋಗ್ಯಕಾರಿ ಅಂಶಗಳು, ರೋಗ – ರುಜಿನಗಳನ್ನು ದೂರವಿಡುವುದು ಮಾತ್ರವಲ್ಲದೆ, ದೀರ್ಘಕಾಲದ ಕಾಯಿಲೆಗಳಿಂದ ಕೂಡ ನಮ್ಮ ಆರೋಗ್ಯವನ್ನು ಕಾಪಾಡುವ ಜೊತೆಗೆ ಆರೋಗ್ಯ ವೃದ್ಧಿಸುತ್ತದೆ ಎಂದು ಆರೋಗ್ಯ ಇಲಾಖೆಯ ಎಚ್.ಐ.ಓ ರವಿಂದ್ರ ಹೇಳಿದರು.

ತಾಲ್ಲೂಕಿನ ದಂಡೋತಿ ಗ್ರಾಮದ ಅಂಗನವಾಡಿ ಕೇಂದ್ರ-5ರ ವತಿಯಿಂದ ರಾಷ್ಟ್ರೀಯ ಫೆÇೀಷಣ ವಾಟಿಕ ಕಾರ್ಯಕ್ರಮದ ನಿಮಿತ್ಯ ಗ್ರಾಮ ಪಂಚಾಯಿತಿಯಲ್ಲಿ ಹಮ್ಮಿಕೊಂಡಿದ್ದ ಸಿರಿಧಾನ್ಯಗಳ ಅರಿವು ಮೂಡಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಸಿರಿ ಧಾನ್ಯಗಳಲ್ಲಿ ಪೌಷ್ಟಿಕಾಂಶಗಳ ಭಂಡಾರವೇ ಅಡಗಿದೆ. ಮನುಷ್ಯನ ಆರೋಗ್ಯಕ್ಕೆ ಬೇಕಾಗುವ ಎಲ್ಲಾ ಬಗೆಯ ಪೌಷ್ಟಿಕ ಸತ್ವಗಳು ಕೂಡ ಈ ಧಾನ್ಯಗಳಲ್ಲಿ ಕಂಡು ಬರುತ್ತದೆ. ಮುಖ್ಯವಾಗಿ ತಾಮ್ರ, ಖನಿಜಾಂಶ, ಪೆÇ್ರೀಟೀನ್, ವಿಟಮಿನ್ಸ್ ಮೆಗ್ನೀಷಿಯಂ, ಪಾಸ್ಪರಸ್, ಮ್ಯಾಂಗನೀಸ್, ನಾರಿನಾಂಶ ಹಾಗೂ ಇತರ ಪೌಷ್ಟಿಕ ಸತ್ವಗಳು ಸಾಕಷ್ಟು ಪ್ರಮಾಣದಲ್ಲಿ ಇದರಲ್ಲಿ ಕಂಡು ಬರುತ್ತದೆ ಎಂದರು.

ಅಂಗನವಾಡಿ ಕಾರ್ಯಕರ್ತೆ ವಿದ್ಯಾನಿಧಿ ಕವಡೆ ಮಾತನಾಡಿ ಸರಿಸುಮಾರು 20- 25 ವರ್ಷಗಳ ಹಿಂದೆ, ನಮ್ಮ ಹಳ್ಳಿಗಳಲ್ಲಿ ವಾರಕ್ಕೆ ಒಮ್ಮೆ ನಡೆಯುವ ತರಕಾರಿ ಹಾಗೂ ದಿನಸಿ ಸಾಮಾಗ್ರಿಗಳನ್ನು ಮಾರಾಟ ಮಾಡುವ ಸಂತೆಗಳಿಗೆ, ನಮ್ಮ ಹಿರಿಯರ ಜೊತೆಗೆ ಹೋದಾಗ ಅಲ್ಲ ಅಲ್ಲಿ ವಿಭಿನ್ನ ಬಗೆಯ ಸಿರಿ ಧಾನ್ಯಗಳು ರಾಶಿ-ರಾಶಿಯೇ ಕಾಣಲು ಸಿಗುತ್ತಿತ್ತು. ಇದರ ಮಾರಾಟ ಕೂಡ ಅಷ್ಟೇ ಜೋರಾಗಿ ನಡೆಯುತ್ತಿತ್ತು. ಆದರೆ ಕಾಲ ಬದಲಾಗಿ ಬಿಟ್ಟಿದೆ, ಹಿಂದಿನ ಕಾಲದಲ್ಲಿ ಹೇರಳವಾಗಿ ಎಲ್ಲಾ ಕಡೆ ಲಭ್ಯವಿದ್ದ ಈ ಆರೋಗ್ಯ ಭರಿತ ಸಿರಿಧಾನ್ಯಗಳು, ಇತ್ತೀಚಿನ ದಿನಗಳಲ್ಲಿ ಕಣ್ಮರೆ ಆಗಿರುವುದು ನಿಜಕ್ಕೂ ಬೇಜಾರಿನ ಸಂಗತಿ ಆಗಿದೆ ಎಂದರು.

ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ಟಿಎಚ್ ಸಿಓ ರೇಣುಕಾ, ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು ಆಶಾ ಕಾರ್ಯಕರ್ತೆಯರು ಸೇರಿದಂತೆ ಇತರರು ಇದ್ದರು.