
(ಸಂಜೆವಾಣಿ ವಾರ್ತೆ)
ವಿಜಯಪುರ:ಜು.19: ಸಿರಿಧಾನ್ಯಗಳು ಪುರಾತನ ಕಾಲದಿಂದಲೂ ಮನುಷ್ಯನ ಮುಖ್ಯ ಆಹಾರವಾಗಿದೆ. ಆದರೆ ಇತ್ತಿಚಿನ ಆಧುನಿಕ ಜೀವನ ಶೈಲಿಯಿಂದ ಮನುಷ್ಯ ಅವುಗಳ ಬಳಕೆಯನ್ನು ಮರೆತಿದ್ದು, ಇದರಿಂದಾಗಿ ಅನೇಕ ರೋಗ ರುಜಿನಗಳಿಗೆ ತುತ್ತಾಗುತ್ತಿದ್ದಾನೆ ಎಂದು ಕೃಷಿ ಮಹಾವಿದ್ಯಾಲಯ ವಿದ್ಯಾಧಿಕಾರಿ ಡಾ. ಆಯ್. ಕೆ. ಕಾಳಪ್ಪನವರ ಸಲಹೆ ನೀಡಿದರು.
ನಗರದ ಹೊರವಲಯದ ಹಿಟ್ನಳ್ಳಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಜರುಗಿದ ಸಿರಿಧಾನ್ಯ ಬಳಸಿ – ಆರೋಗ್ಯ ವೃದ್ಧಿಸಿ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಆಧುನಿಕ ಆಹಾರ ಪದ್ಧತಿಗೆ ಮೋರೆಹೋಗಿ ಇಂದು ಜನರು ಫಿಜಾ ಬರ್ಗರ್, ನಾರಿನಂಶ ಕಡಿಮೆ ಇರುವ ಆಹಾರ ಪದಾರ್ಥಗಳನ್ನು ಸೇವಿಸಿ ಮಧುಮೇಹ, ರಕ್ತದೊತ್ತಡ ಮತ್ತು ಹೃದಯ ಕಾಯಿಲೆಯಿಂದ ಬಳಲುತ್ತಿದ್ದು, ಮತ್ತೆ ನಾವು ಹಿಂದಿನ ಪದ್ಧತಿ ಅಳವಡಿಸಿಕೊಳ್ಳಲು ಮತ್ತು ರೈತರಿಗೆ ಸಿರಿಧಾನ್ಯ ಬೆಳೆ ಬೆಳೆಯಲು ಪ್ರೋತ್ಸಾಹಿಸುವ ನಿಟ್ಟಿನಲ್ಲಿ 2023ನ್ನು ಸಿರಿಧಾನ್ಯ ವರ್ಷವೆಂದು ಘೋಷಿಸಲಾಗಿದ್ದು, ಎಲ್ಲರೂ ಸಿರಿಧಾನ್ಯದಿಂದ ತಯಾರಿಸಿದ ಪದಾರ್ಥಗಳನ್ನು ಬಳಸಲು ಕರೆ ನೀಡಿದರು.
ಮುಖ್ಯ ಅತಿಥಿ, ಸಹ ಸಂಶೋಧನಾ ನಿರ್ದೇಶಕ ಡಾ. ಶೇಖರೆಪ್ಪ ಮಾತನಾಡಿ, ಸಿರಿಧಾನ್ಯಗಳ ಬೆಳೆ ಬೆಳೆಯಲು ವಿಜ್ಞಾನಿಗಳು ಹಲವು ಸಂಶೋಧನೆಗಳನ್ನು ಮಾಡಿ, ವಿವಿಧ ತಳಿಗಳನ್ನು ಅಬಿವೃದ್ಧಿ ಪಡಿಸಿದ್ದು, ಈ ತಳಿಗಳು ಕಡಿಮೆ ಅವಧಿಯದಾಗಿದ್ದು, ಬರ ನಿರೋಧಕತೆ ಹೊಂದಿರುತ್ತವೆ. ಕಾರಣ ಅವುಗಳ ಬೆಳೆ ಬೆಳೆಯಲು ರೈತರಿಗೆ ಹೆಚ್ಚಿನ ಪ್ರೋತ್ಹಾಹ ನೀಡಿ, ಒಟ್ಟಾರೆ ಜನರ ಆರೋಗ್ಯ ಸುಧಾರಿಸಲು ಶ್ರಮಿಸಬೇಕಾಗಿದೆ ಎಂದರು. ಇನ್ನೋರ್ವ ಅತಿಥಿ ಹಿರಿಯ ಕ್ಷೇತ್ರ ಅಧಿಕ್ಷಕ ಡಾ. ಆರ್. ಬಿ. ಜೊಳ್ಳಿ ಇವರು ಸಿರಿಧಾನ್ಯ ಬೆಳೆಗಳಾದ ರಾಗಿ ಜೋಳ, ಸಜ್ಜೆ, ನವಣೆ, ಸಾವಿ, ಕೊರಲೆ, ಊದಲು ಮುಂತಾದ ನವಧಾನ್ಯಗಳಿದ್ದು, ಇವುಗಳಲ್ಲಿ ಹೇರಳ ಪೌಷ್ಠಿಕಾಂಶಗಳಿದ್ದು, ರೈತರು ಮೊದಲು ತಮಗೆ ಬೇಕಾಗುವಷ್ಟು ಬೆಳೆದು ಊಟ ಮಾಡಿ, ನಂತರ ಇತರರಿಗೆ ಮಾರಾಟ ಮಾಡಿ ಲಾಭಗಳಿಸುವಂತೆ ಸಲಹೆ ನೀಡಿದರು. ಅಧ್ಯಕ್ಷತೆ ವಹಿಸಿದ ಸಹ ವಿಸ್ತರಣಾ ನಿರ್ದೇಶಕ ಡಾ. ರವೀಂದ್ರ ಬೆಳ್ಳಿ ಮಾತನಾಡಿ, ರೈತರು ಹೆಚ್ಚೆಚ್ಚು ಸಿರಿಧಾನ್ಯ ಉತ್ಪಾದಿಸಿ, ಸಂಸ್ಕರಿಸಿ ಮಾರಾಟ ಮಾಡಲು ರೈತ ಉತ್ಪಾದಕ ಸಂಸ್ಥೆಗಳು ಜಿಲ್ಲೆಯಲ್ಲಿ ಸ್ಥಾಪಿತವಾಗಿದ್ದು, ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದರು. ಡಾ. ಎಸ್. ಎಸ್. ಕರಬಂಟನಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಜ್ಞಾನಿಗಳಾದ ಡಾ. ಶಿಲ್ಪಾ ಜೋಗಟಾಪುರ, ಡಾ. ಶ್ವೇತಾ ಮನ್ನಿಕೇರಿ ಸಿರಿಧಾನ್ಯಗಳ ಉತ್ಪಾದನಾ ತಾಂತ್ರಿಕತೆಗಳು ಮತ್ತು ಮೌಲ್ಯವರ್ಧಿತ ಉತ್ಪನ್ನಗಳ ತಯಾರಿಕೆ ಕುರಿತು ಉಪನ್ಯಾಸ ನೀಡಿದರು. ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಎಸ್. ಎಮ್. ವಸ್ತ್ರದ ಸ್ವಾಗತಿಸಿದರು. ಶ್ರೀಶೈಲ ರಾಠೋಡ ಕಾರ್ಯಕ್ರಮ ನಿರೋಪಿಸಿದರು. ಕೊನೆಯಲ್ಲಿ ಡಾ. ಸಂಗೀತಾ ಜಾದವ್ ವಂದಿಸಿದರು.
ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಎಸ್. ಎಮ್. ವಸ್ತ್ರದ, ಡಾ. ಸಂಗೀತಾ ಜಾದವ್, ಡಾ. ಪ್ರಕಾಶ ಹೆಚ್. ಟಿ, ಮಲ್ಲಪ್ಪ ಬಿ., ಶ್ರೀಶೈಲ ರಾಠೋಡ, ಡಾ. ಶಿಲ್ಪಾ, ಡಾ. ಶ್ವೇತಾ ಸೇರಿದಂತೆ ಕೃಷಿ ವಿಜ್ಞಾನ ಕೇಂದ್ರದ ಸಿಬ್ಬಂದಿ ವರ್ಗ, ರೈತರು, ಕೃಷಿ ಪರಿಕರ ಮಾರಾಟಗಾರರು ಉಪಸ್ಥಿತರಿದ್ದರು.