ಸಿರಿಧಾನ್ಯ ಬೆಳೆದು ಸಂಕಷ್ಟೀಡಾದ ರೈತರು

ಬಾಬುಅಲಿ ಕರಿಗುಡ್ಡ
ದೇವದುರ್ಗ.ಮಾ.೩೧-ಶಿರಸಿ ಮೂಲದ ಕದಂಬ ಆಗ್ರೋ ಪ್ರೋಡುಸರ್ ಕಂಪನಿಯೊಂದಿಗೆ ಹೊಡಂಬಡಿಕೆ ಮಾಡಿಕೊಂಡು ಸಿರಿಧಾನ್ಯ ಬೆಸ್ ಬೆಳೆದಿದ್ದ ತಾಲೂಕಿನ ರಾಮದುರ್ಗ ಹಾಗೂ ಅಮರಾಪುರದ ರೈತರು ಅಕ್ಷರಶಃ ಸಂಕಷ್ಟೀಡಾಗಿದ್ದಾರೆ.
ಕರೊನಾ ನೆಪ, ಬೇಡಿಕೆ ಕುಸಿತ ಎನ್ನುವ ಕಾರಣ ಮುಂದಿಟ್ಟು ಒಪ್ಪಂದ ಮಾಡಿಕೊಂಡಿದ್ದ ಕದಂಬ ಕಂಪನಿ ರೈತರು ಬೆಳೆದ ಸಿರಿಧಾನ್ಯ ಖರೀದಿಸಲು ಹಿಂದೇಟು ಹಾಕುತ್ತಿದೆ. ಇದರಿಂದ ತಾಲೂಕಿನ ೫ರೈತರು ಲಕ್ಷಾಂತ ರೂ. ವೆಚ್ಚದಲ್ಲಿ ಬೆಳೆದ ಸುಮಾರು ೧೧೦ ಕ್ವಿಂಟಲ್ ಬೆಸ್ ಸಿರಿಧಾನ್ಯ ಕೇಳುವವರಿಲ್ಲ. ಸಾಲಮಾಡಿ ಬೆಳೆ ಬೆಳೆದಿದ್ದ ರೈತರು ಬೆಳೆ ಮಾರಾಟವಾಗದೆ ತಲೆಮೇಲೆ ಕೈಹೊತ್ತು ಕುಳಿತಿದ್ದಾರೆ.
ರಾಮದುರ್ಗದ ರೈತ ವಿರೂಪಾಕ್ಷರೆಡ್ಡಿ ೧೦ಎಕರೆ, ಸೂಗಪ್ಪ ಕುಂಬಾರ ೫ಎಕರೆ, ಸುರೇಶ ಅಂಗಡಿ ೭ಎಕರೆ, ಅಮರಾಪುರದ ರೈತರಾದ ಶರಣಗೌಡ ೫ಎಕರೆ, ಕರಿಬಸಪ್ಪ ೪ಎಕರೆಯಲ್ಲಿ ಬೆಸ್ ಬೆಳೆದಿದ್ದಾರೆ. ಸುಮಾರು ೧೧೦ಕ್ವಿಂಟಾಲ್ ಬೆಳೆ ಬಂದಿದ್ದು, ೫.೫೦ಕೋಟಿ ರೂ. ಮೌಲ್ಯದ ಬೆಳೆ ಕೇಳುವವರಿಲ್ಲ. ಪ್ರತಿಎಕರೆ ೨೫೦ಗ್ರಾಂ ಬಿತ್ತನೆಬೀಜ, ಆರ್ಗನಿಕ್ ಕ್ರಿಮಿನಾಶ, ೨೦-೨೦-೧೭, ಯೂರಿಯ ೩ಪ್ಯಾಕೇಟ್ ಹಾಕಿದ್ದು, ಸಾವಯವ ಗೊಬ್ಬರ ಕೂಡ ಹಾಕಿದ್ದಾರೆ. ಸುಮಾರು ೪೫-೫೦ಸಾವಿರ ರೂ. ಖರ್ಚು ಮಾಡಿದ್ದಾರೆ. ಪ್ರತಿಎಕರೆ ಸರಾಸರಿ ೨ಕ್ವಿಂಟಾಲ್ ಬೆಳೆ ಬಂದಿದೆ. ಪ್ರತಿಕ್ವಿಂಟಾಲ್‌ಗೆ ೫೦ಸಾವಿರ ರೂ. ಬೆಲೆಯಿದೆ. ಆದರೆ, ಕಂಪನಿ ಸಿರಿಧಾನ್ಯ ಖರೀದಿಗೆ ಹಿಂದೇಟು ಹಾಕುತ್ತಿದ್ದು, ಅದನ್ನು ಯಾರಿಗೆ ಮಾರಾಟ ಮಾಡಬೇಕು ಎನ್ನುವ ಸಂಕಷ್ಟ ಎದುರಾಗಿದೆ.
ಭತ್ತ ಬೆಳೆಬಿಟ್ಟ ರೈತರು ಕಂಪನಿ ಮಾತುಕೇಳಿ ಬೀಜ ಸಸಿಮಡಿ ಹಾಕಿದ್ದು, ನಂತರ ಭತ್ತದ ರೀತಿ ಸಸಿಕಿತ್ತು, ಗದ್ದೆಯಲ್ಲಿ ಹಚ್ಚಿದ್ದಾರೆ. ಆದರೆ ಬೆಸ್ ಬೆಳೆ ಬಗ್ಗೆ ಹಲವು ರೈತರು ಹಾಗೂ ವ್ಯಾಪಾರಿಗಳಿಗೆ ಮಾಹಿತಿಯಿಲ್ಲ. ಈ ಬಗ್ಗೆ ಕೃಷಿ ಇಲಾಖೆ ಮಧ್ಯ ಪ್ರವೇಶ ಮಾಡಿ, ರೈತರು ಬೆಳೆದ ಸಿರಿಧಾನ್ಯ ಖರೀದಿ ಮಾಡಿ ಕೃಷಿಕರ ಸಂಕಷ್ಟಕ್ಕೆ ಸ್ಪಂದಿಸಬೇಕು ಎನ್ನುವ ಒತ್ತಾಯ ಕೇಳಿಬರುತ್ತಿವೆ.
ಸಿರಿಧಾನ್ಯ ಬೆಸ್ ಖರೀದಿಸಲು ಕದಂಬ ಕಂಪನಿ ಮುಂದೆಬಾರದ ಹಿನ್ನೆಲೆ ರೈತರೇ ಸ್ವತಃ ಲಾರಿ ಬಾಡಿಗೆ ಮಾಡಿಕೊಂಡು ಬೆಂಗಳೂರಿನ ಕದಂಬ ಕಂಪನಿಗೆ ಸುಮಾರು ೧೧೦ಕ್ವಿಂಟಾಲ್ ಬೆಸ್ ಕೊಂಡೊಯ್ದಿದ್ದಾರೆ. ಕಂಪನಿ ಅಧಿಕಾರಿಗಳು ಸೂಕ್ತವಾಗಿ ಸ್ಪಂದಿಸಿಲ್ಲ. ಕರೊನಾ ಹಿನ್ನೆಲೆ ಕಂಪನಿ ನಷ್ಟದಲ್ಲಿದ್ದು, ನಿಮ್ಮ ಬೆಳೆಗೂ ಬೇಡಿಕೆ ಕುಸಿದಿದೆ. ಹೀಗಾಗಿ ಖರೀದಿ ಮಾಡಲ್ಲ ಅಂತಹೇಳಿ ಕೈತೊಳೆದುಕೊಂಡಿದೆ. ಈ ಬಗ್ಗೆ ರೈತರು ಅಲವತ್ತುಕೊಂಡಾಗ ಲಾರಿಬಾಡಿಗೆ ೪೦ಸಾವಿರ ರೂ. ಕಂಪನಿ ನೀಡಿದೆ. ಇನ್ನೊಬ್ಬ ರೈತ ತೀವ್ರ ಸಂಕಷ್ಟದಲ್ಲಿದ್ದು, ಮಕ್ಕಳ ಮದುವೆಗೆಂದು ೧ಲಕ್ಷ ರೂ. ನೀಡಿದೆ. ಆದರೆ, ಸಿರಿಧಾನ್ಯ ಖರೀದಿ ಮಾಡದೆ ರೈತರಿಗೆ ಸಂಕಷ್ಟಕ್ಕೆ ದೂಡಿದ ಕಂಪನಿ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೋಟ್======
ರೈತರು ಕೃಷಿ ಇಲಾಖೆಗೆ ಮಾಹಿತಿ ನೀಡದೆ, ಕಂಪನಿ ಜತೆ ಒಪ್ಪಂದ ಮಾಡಿಕೊಂಡಿದ್ದಾರೆ. ಈ ಬಗ್ಗೆ ಯಾವುದೇ ದೂರು ನೀಡಿಲ್ಲ. ಕೆಲ ಸಿರಿಧಾನ್ಯ ಮಾತ್ರ ಬೆಳೆಯಲು ನಮ್ಮಲ್ಲಿ ಅವಕಾಶವಿದೆ. ರೈತರು ಮನವಿ ಮಾಡಿದರೆ ಕಂಪನಿ ಜತೆ ಮಾತನಾಡಿ ಬೆಳೆ ಖರೀದಿ ಮಾಡಲು ಪತ್ರ ಬರೆಯುತ್ತೇನೆ. ಅದರ ಹೊರತು ನಾವು ಏನು ಮಾಡಲು ಬರುವುದಿಲ್ಲ.
| ಡಾ.ಎಸ್.ಪ್ರಿಯಾಂಕಾ
ಕೃಷಿ ಇಲಾಖೆ ತಾಲೂಕು ಸಹಾಯಕ ನಿರ್ದೇಶಕಿ

ಕೋಟ್======
ಕದಂಬ ಕಂಪನಿ ನಮ್ಮ ಜತೆ ೨ವರ್ಷ ಒಪ್ಪಂದ ಮಾಡಿಕೊಂಡು ಬೆಸ್ ಸಿರಿಧಾನ್ಯ ಬೆಳೆಸಿದೆ. ಉಚಿತವಾಗಿ ಬೀಜ ಕೊಟ್ಟಿದ್ದರಿಂದ ನಾವು ಬೆಳೆ ಬೆಳೆದು ೫೦ಸಾವಿರ ರೂ. ಕ್ವಿಂಟಾಲ್‌ನಂತೆ ಮಾರಿದ್ದೇವೆ. ಆದರೀಗ ನಾನಾ ನೆಪಹೇಳಿ ಬೆಳೆ ಖರೀದಿ ಮಾಡುತ್ತಿಲ್ಲ. ನಾವೇ ಸ್ವತಃ ಲಾರಿ ಬಾಡಿಕೆ ಮಾಡಿಕೊಂಡು ಬೆಂಗಳೂರಿಗೆ ಹೋಗಿ ಕೊಟ್ಟರೂ ಕಂಪನಿ ಖರೀದಿಸುತ್ತಿಲ್ಲ. ಸಾಲಮಾಡಿ ಬೆಳೆ ಬೆಳೆದಿದ್ದು ಮಾಡಿದ ಸಾಲ ತೀರಿಸಲು ಆಗದ ಸ್ಥಿತಿ ಎದುರಾಗಿದೆ.
| ವಿರೂಪನಗೌಡ ರಾಮದುರ್ಗ
ಸಿರಿಧಾನ್ಯ ಬೆಸ್ ಬೆಳೆದ ರೈತ