ಸಿರಿಧಾನ್ಯ ಬಳಕೆಯಿಂದ ಉತ್ತಮ ಆರೋಗ್ಯ


ಬ್ಯಾಡಗಿ,ನ.17: ಪ್ರತಿಯೊಬ್ಬರೂ ನಮ್ಮ ದಿನನಿತ್ಯದ ಆಹಾರದಲ್ಲಿ ಸಿರಿಧಾನ್ಯಗಳನ್ನು ಬಳಕೆಯನ್ನು ಮಾಡುವ ಮೂಲಕ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ ಎಂದು ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಎನ್. ತಿಮ್ಮಾರೆಡ್ಡಿ ಹೇಳಿದರು.

ಪಟ್ಟಣದ ಬಿಇಎಸ್ ಪ್ರೌಢಶಾಲೆಯಲ್ಲಿ ಅಕ್ಷರ ದಾಸೋಹ ಯೋಜನೆಯಡಿ ಏರ್ಪಡಿಸಿದ್ದ ಸಿರಿಧಾನ್ಯ ಮೇಳವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ದಿನಮಾನದಲ್ಲಿ ಯುವಜನತೆ ಜಂಕ್ ಫುಡ್ ಬೆನ್ನು ಹತ್ತಿ ತಮ್ಮ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಈ ಹಿಂದಿನ ಕಾಲದಲ್ಲಿ ಇದ್ದ ಆಹಾರ ಪದ್ದತಿ ಆರೋಗ್ಯಕ್ಕೆ ಹಿತಕರವಾಗಿದ್ದು, ಜನರೆಲ್ಲರೂ ಮತ್ತೇ ಪ್ರಾಚೀನ ಕಾಲದ ಆಹಾರ ಪದ್ಧತಿಯನ್ನು ಅವಲಂಬಿಸುವುದು ಅತ್ಯವಶ್ಯವಾಗಿದೆ ಎಂದು ತಿಳಿಸಿದರು.

ಈ ಮೇಳದಲ್ಲಿ ಭಾಗವಹಿಸಿದ್ದ ಎಲ್ಲಾ ವಿದ್ಯಾರ್ಥಿಗಳು ಸಿರಿಧಾನ್ಯಗಳ ಲಾಭಗಳ ಕುರಿತು ಅದಕ್ಕೆ ಸಂಬಂಧಿಸಿದಂತೆ ರಂಗೋಲಿ ಹಾಗೂ ಚಾರ್ಟ್’ಗಳ ಮೂಲಕ ವಿವರಣೆ ನೀಡಿದರು. ಮೇಳದಲ್ಲಿ ಸಜ್ಜೆ,ರಾಗಿ, ನವಣೆ, ಕೊರಲಿ ಹಾಗೂ ಇನ್ನಿತರ ಸಿರಿಧಾನ್ಯಗಳ ಪ್ರದರ್ಶನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕ ಉಮಾಪತಿ ಹಾಗೂ ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಅಡುಗೆ ಸಿಬ್ಬಂದಿಗಳು ಭಾಗವಹಿಸಿದ್ದರು.