ಸಿರಿಧಾನ್ಯದಿಂದ ರೋಗ ನಿರೋಧಕ ಶಕ್ತಿ ವೃದ್ಧಿ

ಕೋಲಾರ,ಮೇ.೩- ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಸ್ನಾತಕೋತ್ತರ ಕೇಂದ್ರ ಮಂಗಸಂದ್ರ ಮತ್ತು ಎಸ್.ಇ.ಎ ಕಾಲೇಜು ಸಹಯೋಗದಲ್ಲಿ ಸಮಾಜ ಕಾರ್ಯ ವಿಭಾಗದ ಪ್ರಶಿಕ್ಷಣಾರ್ಥಿಗಳಿಂದ ತಾಲೂಕಿನ ಮಂಗಸಂದ್ರ ಗ್ರಾಮದ ರೈತರಿಗೆ ಸಿರಿಧಾನ್ಯಗಳು ಮತ್ತು ಬಿತ್ತನೆ ಬೀಜಗಳ ಅರಿವು ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ತಾಂತ್ರಿಕ ಬೆಳವಣಿಗೆಯಿಂದಾಗಿ ಸಂಸ್ಕೃತಿ ಪೌಷ್ಠಿಕ ಸಿರಿ ಧಾನ್ಯಗಳನ್ನು ತಿನ್ನುವುದನ್ನು ಮರೆತ್ತಿದ್ದೇವೆ ಎಂದು ಹಾಡಿನ ಮೂಲಕ ಮನವರಿಕೆ ಮಾಡಿಕೊಟ್ಟರು. ಚಿಂತಾಮಣಿ ಬೇರು ಬೆವರು ಕಲಾ ಬಳಗದ ಸೋರಪ್ಪಲ್ಲಿ ಚಂದ್ರಶೇಖರ್ ಮಾತನಾಡಿ, ಆಹಾರವೇ, ಆರೋಗ್ಯ ಮರೆಯದಿರಿ ಎಂದು ಹಿತ ನುಡಿಯನ್ನು ಹೇಳಿದರು. ಸಾಮೆ, ಸಜ್ಜೇ, ನವಣೆ, ಬರಗು, ಊದಲು, ಆರಕ ಈ ಸಿರಿಧಾನ್ಯಗಳ ಷೌಷ್ಠಿಕತೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಮತ್ತು ಆರೋಗ್ಯಕರವಾಗಿರುತ್ತದೆ ಎಂದು ಮತ್ತು ಊದಲು ಸೇವಿಸುವುದರಿಂದ ಚರ್ಮದ ರೋಗವನ್ನು ತಪ್ಪಿಸುತ್ತದೆ ಹಾಗೂ ಬೇಳೆ ಕಾಳು ಧಾನ್ಯ ಕುಟ್ಟಿ ಸೇವಿಸುವುದರಿಂದ ಮಾನವನ ದೇಹದಲ್ಲಿ ಷೌಷ್ಠಿಕಾಂಶಗಳು ಹೆಚ್ಚಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಸಮಾಜಕಾರ್ಯ ವಿಭಾಗದ ಉಪನ್ಯಾಸಕ ಡಾ.ಗುಂಡಪ್ಪ ದೇವಿಕೇರಿ, ಎಸ್.ಇ.ಎ ಕಾಲೇಜಿನ ಸಮಾಜ ಕಾರ್ಯ ವಿಭಾಗದ ಉಪನ್ಯಾಸಕ ವಸಂತಕುಮಾರ್, ಸಮಾಜಕಾರ್ಯ ವಿಭಾಗದ ಪ್ರಶಿಕ್ಷಣಾರ್ಥಿಗಳಾದ ಮೌನಿಕ ಆರ್, ದೀಪಿಕ ಕೆ.ಎನ್, ಶಾಹೀದ ಬಿ, ಹೇಮಲತಾ ಡಿ.ವಿ, ಅಶ್ವಿನಿ ಜಿ, ಹಾಗೂ ಮಂಗಸಂದ್ರ ಗ್ರಾಮಸ್ಥರಾದ ತಿಮ್ಮಣ್ಣ, ವೆಂಕಟೇಶ್, ರವಿ, ಗೋವಿಂದ, ಕುವ್ವಣ್ಣ, ಶ್ರೀರಾಮ್ ನರಸಿಂಹಮೂರ್ತಿ, ಯಾರಂಘಟ್ಟ ಗಿರೀಶ್ ಇನ್ನೂ ಮುಂತಾದವರು ಭಾಗವಹಿಸಿದ್ದರು.