ಸಿರಿಧಾನ್ಯಗಳಿಂದ ರೈತರ ಆದಾಯ ವೃದ್ಧಿ  -ಶರಣಪ್ಪ ಮುದಗಲ್


ಸಂಜೆವಾಣಿ ವಾರ್ತೆ
ಹೊಸಪೇಟೆ ಜ22: ಹವಾಮಾನ ವೈಪರಿತ್ಯವನ್ನೂ ಮೆಟ್ಟಿನಿಲ್ಲುವ ಸಿರಿಧಾನ್ಯಗಳ ಕೃಷಿಯಿಂದ ರೈತರ ಆದಾಯ ಮತ್ತು ಜನರ ಆರೋಗ್ಯ ವೃದ್ಧಿಸಲಿದೆ ಎಂದು ಜಂಟಿ ಕೃಷಿ ನಿರ್ದೇಶಕ ಡಾ. ಶರಣಪ್ಪ ಮುದಗಲ್ ಅಭಿಪ್ರಾಯ ಪಟ್ಟರು.
ಕೃಷಿ ಇಲಾಖೆ ಹೊಸಪೇಟೆ, ರೋಟರರಿ ಕ್ಲಬ್, ಹಂಪಿ ಪಲ್ರ್ಸ್ ಹಾಗೂ ಸಹಜ ಸಮೃದ್ಧ ಸಾವಯವ ಕೃಷಿಕರ ಬಳಗ ಮತ್ತಿತರೆ ಸಂಘಟನೆಗಳ ಸಹಯೋಗದಲ್ಲಿ ನಗರದ ರೋಟರಿ ಭವನದಲ್ಲಿ ಶನಿವಾರ ಆರಂಭವಾದ ಎರಡು ದಿನಗಳ ‘ಸಾವಯವ ಮತ್ತು ಸಿರಿಧಾನ್ಯ ಮೇಳ’ವನ್ನು ಉದ್ಘಾಟಿಸಿ ಅವರು ಮಾತನಾಡಿ ಇತ್ತೀಚೆಗೆ ಮೇಲಿಂದ ಮೇಲೆ ಉಂಟಾಗುವ ಅತಿವೃಷ್ಠಿ, ಅನಾವೃಷ್ಠಿಯಿಂದಾಗಿ ಕೃಷಿಗೆ ಹಿನ್ನಡೆಯಾಗುತ್ತಿದ್ದು, ರೈತ ಕುಟುಂಬಗಳು ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ. ಈ ಹಿನ್ನೆಲೆಯಲ್ಲಿ ಹವಾಮಾನ ಆಧಾರಿತ ಚತುರ ಕೃಷಿಯನ್ನಾಗಿ ರೂಪಿಸಿ ರೈತರನ್ನು ಸಂಕಷ್ಟದಿಂದ ಪಾರು ಮಾಡಬೇಕಿದೆ. 70 ದಶಕದ ಹಸಿರು ಕ್ರಾಂತಿಯಿಂದಾಗಿ ಮೂಲೆಗುಂಪಾಗಿದ್ದ ಸಿರಿಧಾನ್ಯಗಳು ಈಗ ಮತ್ತೆ ರೈತರ ಹೊಲಗದ್ದೆಗೆ ಪ್ರವೇಶಿಸಿವೆ. ಅವುಗಳಿಗೆ ಸೂಕ್ತ ಮಾರುಕಟ್ಟೆ ಕಲ್ಪಿಸಿ, ರೈತರ ಆದಾಯ ಹೆಚ್ಚಿಸುವ ಪ್ರಯತ್ನಗಳಾಗಬೇಕು ಎಂದು ಹೇಳಿದರು.
ಕೃಷಿ ವಿಜ್ಞಾನಿ ಡಾ. ಬದರಿಪ್ರಸಾದ್ ಪಿ.ಆರ್. ಮಾತನಾಡಿ, ರೈತರ ಸೋಲು ಗೆಲುವು ಹಂಚಿಕೊಳ್ಳುವ ಉದ್ದೇಶದಿಂದ ಕೊಪ್ಪಳ ಜಿಲ್ಲೆಯಲ್ಲಿ ಮಣ್ಣಿನೊಂದಿಗೆ ಮಾತುಕತೆ ಹಾಗೂ ವಿಜಯನಗರ ಜಿಲ್ಲೆಯಲ್ಲಿ ಹಸಿರಿನೊಂದಿಗೆ ಮಾತುಕತೆ ಆರಂಭವಾದೆವು. ಸುಸ್ಥಿರ ಕೃಷಿ, ಮೌಲ್ಯವರ್ಧನೆ ಹಾಗೂ ಮಾರುಕಟ್ಟೆ ಬಗ್ಗೆ ಚರ್ಚಿಸಲಾಗಿದೆ. ಅದರ ಮುಂದಿನ ಹಂತವೇ ಸಾವಯವ ಮೇಳ ಎಂದು ವಿವರಿಸಿದರು.
‘ಸಹಜ ಸಮೃದ್ಧ’ ಬಳಗದ ನಿರ್ದೇಶಕ ಜಿ. ಕೃಷ್ಣಪ್ರಸಾದ್ ಪ್ರಾಸ್ತಾವಿಕವಾಗಿ ಮಾತನಾಡಿ, ತುಂಗಭದ್ರಾ ನದಿ ನೀರು ಬಳಸಿ ಕಬ್ಬು, ಭತ್ತ ಬೆಳೆಯುವ ರೈತರು ಸಿರಿಧಾನ್ಯಗಳತ್ತ ಸಹ ಗಮನ ಹರಿಸಬೇಕು. ದೇಸಿ ದಾನ್ಯಗಳನ್ನು ಬೆಳೆಯುವ ಕೃಷಿಕರು, ವೈವಿಧ್ಯಮಯ ತಳಿಗಳನ್ನು ಸಂರಕ್ಷಿಸುವತ್ತ ಶ್ರಮಿಸಬೇಕು. ಸಿರಿ ಧಾನ್ಯಗಳ ಬಗ್ಗೆ ಇತ್ತೀಚೆಗೆ ಜನರಲ್ಲೂ ಹೆಚ್ಚೆಚ್ಚು ತಿಳುವಳಿಕೆ ಮೂಡುತ್ತಿದ್ದು, ಮಾರುಕಟ್ಟೆಯೂ ವ್ಯವಸ್ಥಿತವಾಗಿ ರೂಪುಗೊಳ್ಳುತ್ತಿದ್ದು, ಮುಂದಿನ ದಿನಗಳಲ್ಲಿ ದೇಸಿ ಕೃಷಿಕರ ಕೈಹಿಡಿಯಲಿದೆ ಎಂದರು.
ಇದೇ ವೇಳೆ ನಿರ್ಲಕ್ಷಿತ ಆಹಾರಧಾನ್ಯಗಳ ಮಹತ್ವ ವಿವರಿಸುವ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು. ಸಿರಿಧಾನ್ಯ ಕೃಷಿಯಲ್ಲಿ ಪ್ರಗತಿ ಸಾಧಿಸಿದ ಹುಲಿಗೆಮ್ಮ, ಎಚ್. ಫಕೀರಮ್ಮ ಮತ್ತು ಚಾಪೆ ಹನುಮಯ್ಯ ಅವರನ್ನು ಸನ್ಮಾನಿಸಲಾಯಿತು. ಸಾವಯವ ಕೃಷಿಕ ಬಸಯ್ಯ ಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಸಖಿ ಟ್ರಸ್ಟ್ ಮುಖ್ಯಸ್ಥೆ ಡಾ. ಎಂ.ಭಾಗ್ಯಲಕ್ಷ್ಮೀ, ರೋಟರಿ ಕ್ಲಬ್ ಅಧ್ಯಕ್ಷೆ ವೀಣಾ ಕೊತ್ತಂಬರಿ, ಉದ್ಯಮಿ ಅಶ್ವಿನ್ ಕೊತ್ತಂಬರಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಬಾರಿ ಮೆಚ್ಚುಗೆ ಗಳಿಸಿದ ಪ್ರದರ್ಶನ;
ಸಾವಯುವ ಬೆಳೆಗಳ ದವಸ ಧಾನ್ಯಗಳ ವಸ್ತು ಪ್ರದರ್ಶನ, ಹಾಗೂ ಸಾವಯುವ ಅಡುಗೆ ಮೇಳ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ಬಾರಿ ಮೆಚ್ಚುಗೆ ಗಳಿಸಿತು. ಸುಮಾರ 35ಕ್ಕೂ ಹೆಚ್ಚು ಮಹಿಳೆಯರು ವೈವಿದ್ಯಯ ಕೃಷಿ ಉತ್ಪನ್ನಗಳ ವೈವಿದ್ಯಮಯ ಖಾದ್ಯಗಳಿಂದ ಶುಚಿ ಹಾಗೂ ರೂಚಿಯಾದ ಅಡುಗೆಯ ಮೂಲಕ ಮುಂಬರುವ ದಿನಗಳಲ್ಲಿ ಬಾರಿ ಬೇಡಿಕೆಯನ್ನು ಪ್ರದರ್ಶಿಸಿದರು. 35 ಮಹಿಳೆಯರು 60ಕ್ಕೂ ಹೆಚ್ಚು ವೈವಿದ್ಯ ಖಾದ್ಯಗಳನ್ನು ತಯಾರಿಸಿ ನೋಡುಗರಿಗೆ ಹೊಸ ರುಚಿಯನ್ನು ಪ್ರದರ್ಶಿಸಿ ಮೆಚ್ಚುಗೆಗೆ ಕಾರಣರಾದರು.

One attachment • Scanned by Gmail