ಸಿರಿಗೇರಿ ಹೋಬಳಿಯಲ್ಲಿ ಮಳೆ. ಧಾನ್ಯ ಕೊಯ್ಲು ಮಾಡಿದ ರೈತರಲ್ಲಿ ಆತಂಕ


ಸಂಜೆವಾಣಿ ವಾರ್ತೆ
ಸಿರಿಗೇರಿ. ಏ 29. ನಿನ್ನೆ ಮಧ್ಯಾಹ್ನ ಮತ್ತು ಸಂಜೆ ಎರಡು ಅವಧಿಯಲ್ಲಿ ಸಿರಿಗೇರಿ ಹೋಬಳಿಯಲ್ಲಿ 2.0 ಮಿಲಿಮೀಟರ್ ಸಾಧಾರಣ ಮಳೆ ಸುರಿದಿದೆ. ವರ್ಷದ ಮೊದಲ ಮಳೆಯಾಗಿದ್ದು, ಬೇಸಿಗೆ ಬೆಳೆಗಳನ್ನು ಕೊಯ್ಲು ಮಾಡಿಕೊಂಡ ಕೆಲ ರೈತರಿಗೆ ಈ ಮಳೆ ಆತಂಕ ನೀಡಿದೆ. ಬೇಸಿಗೆಯಲ್ಲಿ ಬೆಳೆದ ಭತ್ತ, ಮೆಕ್ಕೆಜೋಳ. ಸಜ್ಜೆ. ಮತ್ತು ಜೋಳದ ಬೆಳೆಗಳನ್ನು ಕಣ ಮಾಡಿಕೊಳ್ಳುತ್ತಿರುವ ರೈತರಿಗೆ ತಮ್ಮ ಧಾನ್ಯಗಳನ್ನು ನಿನ್ನೆಯ  ಮಳೆಯಿಂದ ರಕ್ಷಿಸಿಕೊಳ್ಳಲು ತೊಂದರೆಯಾಯಿತು. ಹೆಚ್ಚಾಗಿ ಈಗ ಬೇಸಿಗೆಯ ಬತ್ತವನ್ನು ಕೊಯ್ಲು ಮಾಡಿಕೊಂಡಿರುವ ರೈತರು, ತಮ್ಮ ಬತ್ತದ ಬೆಳೆಯನ್ನು ಕೊಯ್ಲು ಮಾಡಿಕೊಂಡು ಮಾರಾಟ ಮಾಡುವವರೆಗೆ, ಮಳೆರಾಯ ಬರೆದಿದ್ದರೆ ಸಾಕು ಎನ್ನುವ ಆತಂಕದಲ್ಲಿದ್ದಾರೆ. ಸಿರಿಗೇರಿಯ ಉಪ ಮಾರುಕಟ್ಟೆಯಲ್ಲಿ ರೈತರು ತಮ್ಮ ಧಾನ್ಯಗಳನ್ನು ಮಳೆಯಿಂದ ರಕ್ಷಿಸಿಕೊಳ್ಳಲು ಪರದಾಡಿದ್ದು ನಿನ್ನೆ ಕಂಡುಬಂತು.