ಸಿರಿಗೇರಿ ಸ.ಹಿ.ಪ್ರಾಥಮಿಕ ಶಾಲೆಯಲ್ಲಿ ಕೆರೆಯಂತೆ ನಿಂತ ಮಳೆನೀರು


ಸಂಜೆವಾಣಿ ವಾರ್ತೆ   
ಸಿರಿಗೇರಿ ಜೂ29. ಗ್ರಾಮದ 4ನೇ ವಾರ್ಡಿನ ಹುಚ್ಚೇಶ್ವರನಗರ ಸರ್ಕಲ್‍ನಲ್ಲಿರುವ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ (ದೇವಸ್ಥಾನ) ಶಾಲೆಯ ಆವರಣದ ತುಂಬ ಕೆರೆಯಂತೆ ಮಳೆನೀರು ನಿಂತು ಮಕ್ಕಳಿಗೆ ತೊಂದರೆ ಉಂಟುಮಾಡಿದೆ. ಗುರುವಾರ ಬೆಳಿಗಿನ ಜಾವದಲ್ಲಿ ಸುರಿದ 18.3 ಮಿ.ಮೀಟರ್ ಮಳೆಯಿಂದಾಗಿ ಈ ಭಾಗದಲ್ಲಿ ಹರಿದುಬಂದ ಮಳೆನೀರು ಶಾಲೆಯ ಆವರಣದ ತುಂಬಾ ನಿಂತು ಕೆರೆಯಾಂತಾಗಿದೆ. ಆವರಣವು ತಗ್ಗು ಪ್ರದೇಶವಾಗಿದ್ದರಿಂದ ನೀರು ನಿಲುಗಡೆಯಾಗಿದೆ. ವಿದ್ಯಾರ್ಥಿಗಳು ಹೊರಗಡೆ ಬರಲು, ಒಳಗೆ ಹೋಗಲು, ಸಾಲಾಗಿ ನಿಂತು ಪ್ರಾರ್ಥನೆ ಮಾಡಲು ತೊಂದರೆಯಾಗಿದೆ. ನೀರು ನಿಂತಿರುವುದರಿಂದ ಹಗಲಿನಲ್ಲೂ ಸೊಳ್ಳೆ, ಕೀಟಗಳ ಕಡಿತದಿಂದ ಮಕ್ಕಳಿಗೆ ರೋಗ ತರುವ ಆತಂಕವಿದೆ. ಶಾಲೆಯಲ್ಲಿನ ಈ ಸಮಸ್ಯೆ ಬಗ್ಗೆ ಹಲವುಬಾರಿ ಸಂಬಂಧಿಸಿದವರ ಗಮನಕ್ಕೆ ತಂದರೂ ಯಾವ ಪ್ರಯೋಜನವಾಗಿಲ್ಲವೆಂದು ಪೋಷಕರು, ಎಸ್‍ಡಿಎಂಸಿ ಅಧ್ಯಕ್ಷ ಕೆ.ರವಿಕುಮಾರ್ ಅಸಮಧಾನ ವ್ಯಕ್ತಪಡಿಸಿದರು.
   ವಿಷಯ ತಿಳಿದು ಶಾಲೆಯಲ್ಲಿ ಕೆರೆಯಂತೆ ನಿಂತಿರುವ ನೀರನ್ನು ಸ್ವತಹ ಶಾಲೆಗೆ ಭೇಟಿನೀಡಿ ವೀಕ್ಷಿಸಿದ ಸ್ಥಳಿಯ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಭಜಂತ್ರಿರಮೇಶ ಪ್ರತಿಕ್ರಯಿಸಿ ಶಾಲಾಭಿವೃದ್ಧಿ ಸಮಿತಿಯಿಂದ ಪಂಚಾಯಿತಿಗೆ ಅರ್ಜಿನೀಡಿ ಪಿಡಿಓ ಅಧಿಕಾರಿಗಳ ಗಮನಕ್ಕೆ ತಂದು ತಾತ್ಕಾಲಿಕವಾಗಿ ಸಮಸ್ಯೆ ಪರಿಹರಿಸಲು ಒತ್ತಾಯಿಸುತ್ತೇನೆಂದು ತಿಳಿಸಿದರು. ಇದೇವೇಳೆ ಮುಖ್ಯಗುರುಗಳು ಮಾತನಾಡಿ ಶಾಲೆಯಲ್ಲಿಉತ್ತಮ ವಾತಾವರಣವಿಲ್ಲದೇ ಶಿಥಿಲಗೊಂಡ ಕೊಠಡಿಗಳ ದುರಸ್ಥಿಗೆ, ಶಾಲೆ ಆವರಣ ತಗ್ಗಿನಲ್ಲಿರುವುದರಿಂದ ಸಣ್ಣಪುಟ್ಟ ಮಳೆಗೂ ಹೊಂಡದಂತೆ ನೀರು ನಿಲ್ಲುತ್ತದೆ. ಮಲಿನ ನೀರಿನಲ್ಲಿ ಮಕ್ಕಳು ಆಟವಾಡಲು ಹೋಗದಂತೆ ತಡೆಯುವದೇ ಕೆಲಸವಾಗುತ್ತಿದೆ. ಶಾಲೆಯ ಆವರಣವನ್ನು ಎತ್ತರಿಸುವುದಕ್ಕೆ ಸಹಕರಿಸಬೇಕೆಂದು ಕೋರಿದರು. ಮಾಜಿ ತಾ.ಪಂಚಾಯಿತಿ ಸದಸ್ಯ ಬಕಾಡೆ ಈರಯ್ಯ, ಎಸ್‍ಡಿಎಂಸಿ ಅಧ್ಯಕ್ಷ ರವಿಕುಮಾರ, ಮುಖ್ಯಗುರುಗಳು ಮತ್ತು ಸಹಶಿಕ್ಷಕರು, ಅತಿಥಿ ಶಿಕ್ಷಕರು ಇದ್ದರು.