ಸಿರಿಗೇರಿ ಸರ್ಕಾರಿ ಪಿಯು ಕಾಲೇಜಿನಲ್ಲಿ ಸೌಲಭ್ಯಗಳ ಕೊರತೆ: ವಿದ್ಯಾರ್ಥಿಗಳ ಹಿತ ಕೋರುವರಾರು”


ಸಿ.ಶಿವರಾಮ ಸಿರಿಗೇರಿ
ಸಿರಿಗೇರಿ ಜೂ26. ಬಹುವರ್ಷಗಳ ಹೋರಾಟದ ನಂತರ 4ವರ್ಷದ ಕೆಳಗೆ ಸಿರುಗುಪ್ಪ ತಾಲೂಕಿನ ಸಿರಿಗೇರಿಯಲ್ಲೊಂದು ಸರ್ಕಾರಿ ಪದವಿಪೂರ್ವ ಕಾಲೇಜು ತಲೆಯೆತ್ತಿತು. ಕಾಲೇಜು ನಿರ್ಮಾಣಕ್ಕೆ ಸ್ಥಳದ ಕೊರತೆ ಅಡ್ಡಿಬಂದು ಇನ್ನೇನು ಕಾಲೇಜು ನಿರ್ಮಾಣ ಕೈತಪ್ಪುವುದೇನೋ ಎನ್ನುವಷ್ಟರಲ್ಲಿ ಮುಂದಿನ ಭವಿಷ್ಯದ ದೃಷ್ಟಿಯಿಂದ ಗ್ರಾಮದ ಮುದ್ದಟನೂರು ರಸ್ತೆಯ ಪಕ್ಕದ ಸರ್ಕಾರಿ ಜಾಗದಲ್ಲಿ ಸುಸಜ್ಜಿತ ಕಟ್ಟಡದಲ್ಲಿ ವಿಶಾಲ ತರಗತಿ, ಕಛೇರಿ, ಗ್ರಂಥಾಲಯ ಕೊಠಡಿಗಳು ನಿರ್ಮಾಣವಾದವು, ಆದರೆ ವಿದ್ಯಾರ್ಥಿಗಳಿಗೆ ಪೂರಕವಾದ ಮೂಲಭೂತ ಸೌಲಭ್ಯಗಳ ಕೊರತೆಗಳನ್ನು ನೀಗಿಸಲು ಮಾತ್ರ ಇಲ್ಲಿಯವರೆಗೂ ಸಾಧ್ಯವಾಗುತ್ತಿಲ್ಲ.
ವಿದ್ಯಾರ್ಥಿನಿಯರಿಗೆ ಶೌಚಾಲಯ ಕೊರತೆ: ಕಾಲೇಜು ಕಟ್ಟಡದಲ್ಲಿ ಸುಸಜ್ಜಿತ ಶೌಚಾಲಯವಿದೆ, ನೀರೆತ್ತುವ ಮೋಟಾರ್, ಶೇಖರಣೆಗೆ ದೊಡ್ಡ ಸಿಂಟೆಕ್ಸ್ ಅಳವಡಿಸಲಾಗಿದೆ ಆದರೆ ನೀರಿನ ಸೌಲಭ್ಯವಿಲ್ಲದೇ ನಿರ್ವಹಣೆಗೆ ತೊಂದರೆಯಾಗಿ ಬಾತ್‍ರೂಂಗೆ ಬೀಗ ಜಡಿದಿದ್ದರಿಂದ ಶೌಚಾಲಯ ಸಮಸ್ಯೆ ಇದೆ. ಕಾಲೇಜಿಗೊಂದು ಬೋರ್ ಹಾಕಿಸಿದರೆ ಈ ಕೊರತೆ ನೀಗಿಸಬಹುದಾಗಿದೆ. ಶೌಚಾಲಯ ಮತ್ತು ಕುಡಿವ ನೀರಿನ ತೊಂದರೆಯಿಂದ ವಿದ್ಯಾರ್ಥಿಗಳು ಸಮಸ್ಯೆ ಎದುರಿಸುತ್ತಿದ್ದಾರೆ. ಕೆಲದಿನ ಪಕ್ಕದ ಜಮೀನು ಮಾಲಿಕರ ಬೋರ್ ನೀರು ಎರವಲು ಪಡೆಯಲಾಗಿತ್ತು ಈಗ ಅವರು ತಮ್ಮ ಜಮೀನಿಗೆ ನೀರು ಸಾಲುವುದಿಲ್ಲವೆಂದು ನಿಲ್ಲಿಸಿದ್ದರಿಂದ ಇಲ್ಲಿ ಹನಿನೀರು ಗತಿ ಇಲ್ಲದಾಗಿದೆ.
ನೆಲದಮೇಲೆ ಕುಳಿತು ಪಾಠ ಕೇಳುವ ಅನಿವಾರ್ಯತೆ:- ಕಾಲೇಜಿನಲ್ಲಿ ಪಿಯುಸಿ ಕಲಾ (ಆಟ್ರ್ಸ್) ಮತ್ತು ವಾಣಿಜ್ಯ (ಕಾಮರ್ಸ್) ವಿಭಾದ ತರಗತಿಗಳು ನಡೆಯುತ್ತಿವೆ. ಒಬ್ಬರು ಸರ್ಕಾರಿ ನಿಯೋಜಿತ ಪ್ರಾಚಾರ್ಯರು ಮತ್ತು 07ಜನ ಅತಿಥಿ ಉಪನ್ಯಾಸಕರು ಬೋದನೆ ಮಾಡುತ್ತಿದ್ದಾರೆ. ಪ್ರಥಮವರ್ಷದಲ್ಲಿ ಹುಡುಗರು-22, ಹುಡಿಗಿಯರು-42 ಒಟ್ಟು-64, ದ್ವಿತೀಯ ವರ್ಷದಲ್ಲಿ ಹುಡುಗರು-26, ಹುಡುಗಿಯರು-28 ಒಟ್ಟು-54 ಸೇರಿ ಒಟ್ಟು-89 ವಿದ್ಯಾರ್ಥಿಗಳು ಇದ್ದಾರೆ. ಈ ತಿಂಗಳ ಕೊನೆವರೆಗೆ ಪ್ರವೇಶಾತಿ ಇದ್ದು ಇನ್ನೂ ಹತ್ತಾರು ವಿದ್ಯಾರ್ಥಿಗಳು ಸೇರಿದರೆ 100 ವಿದ್ಯಾರ್ಥಿಗಳು ತರಗತಿಗಳಲ್ಲಿ ನೆಲದಮೇಲೆ ಕುಳಿತು ಪಾಠ ಕೇಳುವುದು ಅನಿವಾರ್ಯವಾಗಿದೆ.
ಶೇಕಡಾ 90% ಎಸ್‍ಸಿ-ಎಸ್‍ಟಿ ವಿದ್ಯಾರ್ಥಿಗಳು:- ಉಳ್ಳವರು ಶಿವಾಲಯವ ಮಾಡುವರು ನಾನೇನು ಮಾಡಲಿ ಬಡವನಯ್ಯ ಎನ್ನುವಂತೆ ಈ ಕಾಲೇಜಿನಲ್ಲಿ ಇದ್ದಹಾಗೆ ಇರಲಿ ಮಕ್ಕಳ ವಿದ್ಯಾಭ್ಯಾಸ ಮುಂದುವರಿಯಲಿ ಎಂದು ಕೂಲಿ ಮಾಡುವ ಬಡ ಪೋಷಕರು ಎಸ್‍ಎಸ್‍ಎಲ್‍ಸಿ ನಂತರ ತಮ್ಮ ಮಕ್ಕಳನ್ನು ಇಲ್ಲಿ ಸೇರಿಸಿದ್ದು, ಬಹುತೇಕ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡದ ಅದರಲ್ಲೂ ಹೆಚ್ಚು ಬಡ ವಿದ್ಯಾರ್ಥಿನಿಯರು ಈ ಕಾಲೇಜಿನಲ್ಲಿ ಪ್ರವೇಶ ಪಡೆದಿದ್ದಾರೆ. ಎಸ್‍ಸಿ-ಎಸ್‍ಟಿಗೆ ಸೌಲಭ್ಯ ಒದಗಿಸುವ ಸರ್ಕಾರಿ ಮತ್ತು ಸರ್ಕಾರೇತರ ಸಂಸ್ಥೆಗಳು ಈ ಕಾಲೇಜಿನ ವಿದ್ಯಾರ್ಥಿಗಳ ಕಡೆ ಗಮನಹರಿಸಿ ಮೂಲಭೂತ ಸೌಲಭ್ಯಗಳನ್ನು ನೀಡಬೇಕಿದೆ.
ಹುಸಿಯಾದ ಭರವಸೆಗಳು: ಇಲ್ಲಿಯವರೆಗೆ ಕಾಲೇಜಿಗೆ ಭೇಟಿನೀಡಿದ ಪ್ರಜಾಪ್ರತಿನಿಧಿಗಳು, ಸರ್ಕಾರಿ ಅಧಿಕಾರಿಗಳು ನೀರಿನ ಸೌಲಭ್ಯ, ಕುಳಿತುಕೊಳ್ಳಲು ಡೆಸ್ಕ್‍ಗಳ ಸೌಲಭ್ಯ, ಮೈದಾನದ ಸೌಲಭ್ಯ, ಗ್ರಂಥಾಲಯದ ಸೌಲಭ್ಯ, ಎಲ್ಲವನ್ನೂ ಒಂದುವಾರದಲ್ಲಿ, ಒಂದು ತಿಂಗಳಲ್ಲಿ, ಈವರ್ಷದಲ್ಲಿ ಮಾಡಿಬಿಡುತ್ತೇವೆ, ಮಾಡಲು ಕ್ರಮ ಕೈಗೊಳ್ಳುತ್ತೇವೆಂದು ನೀಡಿದ ಭರವಸೆಗಳೆಲ್ಲವೂ ಹುಸಿಯಾಗಿವೆ. ಅತಿಥಿ ಉಪನ್ಯಾಸಕರ ಇಚ್ಚಾಸಕ್ತಿಯಿಂದ ಶಿಕ್ಷಣದಲ್ಲಿ ಗುಣಮಟ್ಟ ಮಾತ್ರ ಕಾಣುತ್ತಿದ್ದು ಉಳಿದ ಸಮಸ್ಯೆಗಳ ಪರಿಹಾರಕ್ಕೆ ಜವಾಬ್ದಾರಿ ಹೊತ್ತವರು ಪ್ರಯತ್ನಿಸಬೇಕಿದೆ.
ಬಾಕ್ಸ್:- ನಮಗೆ ವಿದ್ಯಾಬ್ಯಾಸಕ್ಕೆ ಯಾವುದೇ ತೊಂದರೆ ಇಲ್ಲ. ಎಲ್ಲಾ ಸರ್‍ಗಳು ಉತ್ತಮವಾಗಿ ಪಾಠ ಮಾಡುತ್ತಿದ್ದಾರೆ. ನಮಗೆ ನೀರಿನ ವ್ಯವಸ್ಥೆಯಾದರೆ ಶೌಚಾಲಯ ಮತ್ತು ಕುಡಿವನೀರು ಸಮಸ್ಯೆ ನೀಗುತ್ತದೆ. ಡೆಸ್ಕ್‍ಗಳಾದರೆ ಕುಳಿತು ಪಾಠ ಕೇಳಲು ಅನುಕೂಲ, ಮೈದಾನ ಅಗಲೀಕರಣಗೊಳಿಸಿದರೆ ಆಟವಾಡುತ್ತೇವೆ, ಗ್ರಂಥಪಾಲಕರಿದ್ದರೆ ಗ್ರಂಥಾಲಯದಲ್ಲಿ ಓದಬಹುದು ಎಲ್ಲರೂ ಬಂದು ಕೇಳಿ ಹೋಗುತ್ತಾರೆ ಯಾರೂ ಸಮಸ್ಯೆ ಪರಿಹರಿಸುತ್ತಿಲ್ಲ: ಕಾಲೇಜು ವಿದ್ಯಾರ್ಥಿಗಳು ಸಿರಿಗೇರಿ.