“ಸಿರಿಗೇರಿ ಪೋಲಿಸ್ ಠಾಣೆಯಲ್ಲಿ ಮೊಹರಂ ಆಚರಣೆಯ ಶಾಂತಿಸಭೆ”


ಸಂಜೆವಾಣಿ ವಾರ್ತೆ
ಸಿರಿಗೇರಿ ಜು 23. ಮೊಹರಂ ಹಬ್ಬದ ಆಚರಣೆ ಕುರಿತು ಸಿರಿಗೇರಿ ಪೋಲಿಸ್ ಠಾಣೆಯಲ್ಲಿ ನಿನ್ನೆ ಜು.22 ರಂದು ಸಂಜೆ ಗ್ರಾಮಸ್ಥರ ಜೊತೆ ಶಾಂತಿಸಭೆ ನಡೆಸಲಾಯಿತು. ಸಭೆಯಲ್ಲಿ ಪಿಎಸ್‍ಐ ಸದ್ದಾಂಹುಸೇನ್ ಮಾತನಾಡಿ ಸಿರಿಗೇರಿ ಪೋಲಿಸ್ ಠಾಣೆ ವ್ಯಾಪ್ತಿಯ ಸಿರಿಗೇರಿ, ಕರೂರು, ತಾಳೂರು, ಕೂರಿಗನೂರು, ಗ್ರಾಮಗಳಲ್ಲಿ ಮೊಹರಂ ಹಬ್ಬ ಆಚರಣೆ ಮಾಡುವುದು ನಿಷೇಧವಿದೆ. ಈ ಕುರಿತು ನಮಗೆ ಮಾನ್ಯ ಜಿಲ್ಲಾಧಿಕಾರಿಗಳಿಂದ ನಿಷೇಧವಿರುವ ಗ್ರಾಮಗಳಲ್ಲಿ ಹಬ್ಬ ಆಚರಣೆ ಕುರಿತು ಕೆಲವ ಮಾರ್ಗಸೂಚಿಗಳನ್ನು ತಿಳಿಸಿದ್ದಾರೆಂದು ಸಭೆಯಲ್ಲಿ ತಿಳಿಯಪಡಿಸಿ, ಡಿಸಿ ಅದೇಶದ ಪ್ರತಿಯನ್ನು ತೋರಿಸಿ ಯಾರೂ ಈ ನಿಯಮಗಳನ್ನು ಉಲ್ಲಂಘಿಸಿ ನಡೆದುಕೊಳ್ಳಬಾರದು. ಉಲ್ಲಂಘಿಸಿದರೆ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದೆಂದು ತಿಳಿಸಿದರು. ನಂತರ ಸಭೆಯಲ್ಲಿ ಎಎಸ್‍ಐ ರಮಣಕುಮಾರ್ ಅದೇಶ ಪ್ರತಿಯನ್ನು ಓದಿ ಮೊಹರಂ ಹಬ್ಬದ ನಿಷೇಧವಿರುವ ಗ್ರಾಮಗಳಲ್ಲಿ, ಅಲಾಯಕುಣಿ ತೋಡುವುದು, ಕುಣಿಯುವುದು, ಹಲಗೆ (ತಪ್ಪಡಿ) ಹೊಡೆಯುವುದು, ಜನ ಗುಂಪು ಸೇರುವುದು ನಿಷಿದ್ಧವಿದೆ. ಮಸೀದಿಗಳಲ್ಲಿ ಪೀರಲ ದೇವರು ಇಟ್ಟು ಶಾಂತಿಯುತವಾಗಿ ಪೂಜೆ ಮಾಡಲು ಮಾತ್ರ ಅವಕಾಶ ಇರುತ್ತದೆ ಎಂದು ತಿಳಿಸಿದರು.
ಸಭೆಯಲ್ಲಿ ಸ್ಥಳೀಯ ಮುಖಂಡರಾದ ಸಿ.ಎಂ.ನಾಗರಾಜಸ್ವಾಮಿ, ಎನ್.ವಿರುಪಾಕ್ಷಪ್ಪ ಇವರು ಮಾತನಾಡಿ ನಮ್ಮ ಗ್ರಾಮದಲ್ಲಿ ಮೊಹರಂ ಹಬ್ಬವು ನಿಷೇಧವಿದ್ದರೂ ಸುಮಾರು 25ವರ್ಷಗಳಿಂದ ಗ್ರಾಮದ ಎಲ್ಲಾ ಸಮುದಾಯದವರು ಸೌಹಾರ್ಧಯುತವಾಗಿ ಆಚರಿಸಿಕೊಂಡು ಬರುತ್ತಿದ್ದೇವೆ. ಇಲ್ಲಿಯವರೆಗೂ ಈ ಹಬ್ಬದಲ್ಲಿ ಒಂದೂ ಗಲಾಟೆಯ ಕಪ್ಪುಚುಕ್ಕೆಯಾಗದಂತೆ ಎಲ್ಲಾ ಮುಖಂಡರು ನೇತೃತ್ವದಲ್ಲಿ ನಡೆಸಿಕೊಂಡು ಬರುತ್ತಿದ್ದೇವೆ. ಈ ವರ್ಷವೂ ಅದೇರೀತಿಯಲ್ಲಿ ಆಚರಿಸುತ್ತೇವೆ. ಯಾವುದೇ ಕನೂನು ಕ್ರಮಗಳು ಜಾರಿಯಾಗುವಷ್ಟರ ಮಟ್ಟಿಗೆ ಅತಿರೇಕಕ್ಕೆ ಹೋಗದಂತೆ ಪೋಲಿಸ್ ಇಲಾಖೆಯವರ ಸಹಕಾರದಲ್ಲಿ ಶಾಂತಿಯುತವಾಗಿ ಮೊಹರಂ ಹಬ್ಬ ಮಾಡುತ್ತೇವೆಂದು, ಸುಮಾರು 25ವರ್ಷಗಳಿಂದಲೂ ಇಲ್ಲಿಯವರೆಗೆ ಈ ಹಬ್ಬದಲ್ಲಿ ಯಾವುದೇ ಗಲಾಟೆಗಳು ನಡೆಯದಂತೆ ಮಾದರಿಯಾಗಿ ನಡೆಸಿಕೊಂಡು ಬಂದಿದ್ದೇವೆ. ಇದನ್ನು ಪರಿಗಣಿಸಿ ಸಂಬಂಧಿಸಿದ ಅಧಿಕಾರಿಗಳು ನಮ್ಮ ಗ್ರಾಮವನ್ನು ನಿಷೇಧ ನಿಯಮದಿಂದ ಮುಕ್ತಗೊಳಿಸಬೇಕೆಂದು ಕೋರಿದರು. ಗ್ರಾಮದ ಎಲ್ಲಾ ಜನಾಂಗದ ಮುಖಂಡರು, ಜನಪ್ರತಿನಿಧಿಗಳು, 5ಮಸೀದಿಗಳ ಮುತವಲ್ಲಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.