“ಸಿರಿಗೇರಿ : ದಲಿತ ಕಾಲೋನಿಯ ನೀರಿನ ಸಮಸ್ಯೆ ಪರಿಹರಿಸಲು ಆಗ್ರಹ”


ಸಂಜೆವಾಣಿ ವಾರ್ತೆ
ಸಿರಿಗೇರಿ.ಏ18. ಗ್ರಾಮದ ಕುರುಗೋಡು ರಸ್ತೆಯ 1ನೇವಾರ್ಡು, ಈಶ್ವರಗುಡಿ, ಕೆಂಚಮ್ಮ ದೇವಸ್ಥಾನದ ಹತ್ತಿರದ ದಲಿತ ಕಾಲೋನಿಯಲ್ಲಿ ಕಳೆದ 20 ದಿನಗಳಿಂದ ಕುಡಿವ ನೀರಿನ ಸಮಸ್ಯೆ ತಲೆದೋರಿದೆ ಎಂದು ಇಂದು ಕಾಲೋನಿಯ ನಿವಾಸಿಗಳು ಕೆಲಹೊತ್ತು ಗ್ರಾಮ ಪಂಚಯಿತಿ ಮುಂದೆ ಖಾಲಿಕೊಡ ಪ್ರದರ್ಶಿಸಿ ಪ್ರತಿಭಟನೆ ಮಾಡಿದರು. ಇದೇವೇಳೆ ನಿವಾಸಿಗಳು ತಮ್ಮ ಸಮಸ್ಯೆಗಳನ್ನು ತಿಳಿಸುತ್ತಾ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಉಲ್ಬಣವಾಗಿದ್ದು, ಅದರಲ್ಲೂ ನಮ್ಮ ಕಾಲೋನಿಗೆ ನೀರು ಬರದೇ ತೊಂದರೆಯಾಗಿದೆ. ಎಸ್‍ಸಿ ಗ್ರಾಂಟ್‍ನಲ್ಲಿ ಎಸ್‍ಸಿ ಕಾಲೋನಿಗಾಗಿ ಈ ಹಿಂದೆ ಹಾಕಲಾಗಿದ್ದ ಕೊಳವೆಬಾವಿ (ಬೋರ್) ನೀರು ಪೈಪ್‍ನಿಂದ ಪ್ರಾರಂಭದಲ್ಲಿಂದ ನಮ್ಮ ಕಾಲೋನಿಗೆ ಬರುವ ಮದ್ಯೆ ಅಲ್ಲಲ್ಲಿ ಇತರೆ ಕಾಲೋನಿಗಳಿಗೆ ಕೊಳಾಯಿಗಳಿಗೆ ಸಂಪರ್ಕ ನೀಡಿರುವುದರಿಂದ ನಮ್ಮ ಕಾಲೋನಿಗೆ ನೀರು ತಲುಪದೇ ತೊಂದರೆಯಾಗಿದೆ. ಇದನ್ನು ಪರಿಹರಿಸುವಂತೆ ಗ್ರಾಮ ಪಂಚಾಯಿತಿ ಅಧಿಕಾರಿಗಳಲ್ಲಿ, ವಾರ್ಡ್ ಸದಸ್ಯರಲ್ಲಿ ಒತ್ತಾಯಿಸಿಕೊಂಡು ಬುರುತ್ತಿದ್ದೇವೆ. ಯಾವುದೇ ಪ್ರಯೋಜನವಾಗುತ್ತಿಲ್ಲ. ಸ್ಥಳಕ್ಕೆ ಬಂದು ಪರಿಶೀಲನೆಯನ್ನೂ ಮಾಡುತ್ತಿಲ್ಲ ಈಗ ಪ್ರತಿಭಟನೆಯಿಂದ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಗಮನಕ್ಕೆ ಸಮಸ್ಯೆಯನ್ನು ತಂದಿದ್ದೇವೆ, ನಾಳೆ ಬಂದು ಪರಿಶೀಲಿಸುತ್ತೇವೆಂದು ತಿಳಿಸಿದ್ದಾರೆ ಒಂದುವೇಳೆ ವಿಳಂಬವಾದಲ್ಲಿ ಮುಂದೆ ಪ್ರತಿದಿನ ಬಂದು ಪಂಚಾಯಿತಿ ಮುಂದೆ ಧರಣಿ ನಡೆಸಲಾಗುವುದೆಂದು ನಿವಾಸಿಗಳು ತಮ್ಮ ಆಗ್ರಹವನ್ನು ವ್ಯಕ್ತಪಡಿಸಿದರು.