ಸಿರಿಗೇರಿ ಗ್ರಾ.ಪಂ ಉಪಾಧ್ಯಕ್ಷರಾಗಿ ಎಱ್ರೆಪ್ಪ


ಸಂಜೆವಾಣಿ ವಾರ್ತೆ
ಸಿರಿಗೇರಿ ಜೂ.09. ಗ್ರಾಮದ ಗ್ರಾಮ ಪಂಚಾಯಿತಿಯಲ್ಲಿ ಜೂ.08 ರಂದು ರಾಜಿನಾಮೆಯಿಂದ ತೆರವಾಗಿದ್ದ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರ ಚುನಾವಣೆ ಪ್ರಕ್ರಿಯೆ ನಡೆಯಿತು. ಈಹಿಂದಿನ ಉಪಾಧ್ಯಕ್ಷರಾಗಿದ್ದ ಭಜಂತ್ರಿ ರಮೇಶ ಎಂಬುವವರು ರಾಜಿನಾಮೆ ನೀಡಿ ತೆರವಾಗಿದ್ದ ಪರಿಶಿಷ್ಟಜಾತಿಯ ಪುರುಷ ಮೀಸಲು ಸ್ಥಾನಕ್ಕೆ ಚುನಾವಣೆ ನಡೆಯಿತು. ಗ್ರಾಮ ಪಂಚಾಯಿತಿಯ ಒಟ್ಟು 31 ಸದಸ್ಯರ ಪೈಕಿ 16 ಜನ ಬಿಜೆಪಿ ಪಕ್ಷದ ಬೆಂಬಲಿತ ಸದಸ್ಯರು, 15 ಜನ ಕಾಂಗ್ರೇಸ್ ಬೆಂಬಲಿತ ಸದಸ್ಯರು ಒಳಗೊಂಡು, ಈ ಪೈಕಿ ನಿನ್ನೆ ನಡೆದ ಉಪಾಧ್ಯಕ್ಷರ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಎಚ್.ಎರೆಪ್ಪ, ಕಾಂಗ್ರೇಸ್ ಬೆಂಬಲಿತ ಅಭ್ಯರ್ಥಿಯಾಗಿ ಕೆ.ಶಿವಪ್ಪ ಇವರು ಆಕಾಂಕ್ಷಿಗಳಾಗಿ ನಾಮಪತ್ರ ಸಲ್ಲಿಸಿದ್ದರು. 11-30ರ ವರೆಗೆ ಚುನಾವಣೆ ನಡೆದು ಬಿಜೆಪಿ ಬೆಂಬಲಿತ ಅಭ್ಯರ್ಥಿ ಎಚ್.ಎರೆಪ್ಪನಿಗೆ 16 ಮತಗಳು, ಕಾಂಗ್ರೇಸ್ ಬೆಂಬಲಿತ ಅಭ್ಯರ್ಥಿ ಕೆ.ಶಿವಪ್ಪನಿಗೆ 14 ಮತಗಳು ಬಿದ್ದು. ಬಿಜೆಪಿ ಬೆಂಬಲಿತ ಅಭ್ಯರ್ಥಿ ಎಚ್.ಎರೆಪ್ಪ ಇವರು ಉಪಾಧ್ಯಕ್ಷರಾಗಿ ಆಯ್ಕೆಗೊಂಡರು. ಇವರ ಆಯ್ಕೆಯನ್ನು ಚುನಾವಣೆ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ ಸಿರುಗುಪ್ಪ ತಾಲೂಕು ಪಂಚಾಯಿತಿ ಇಒ ಮಡಗಿನ ಬಸಪ್ಪ ಇವರು ಅಧಿಕೃತವಾಗಿ ಘೋಷಿಸಿದರು. ಮುಂದಿನ 2ವರೆ ವರ್ಷಗಳ ಅವಧಿವರೆಗೆ ಹೊಸದಾಗಿ ಅಧ್ಯಕ್ಷರ, ಉಪಾಧ್ಯಕ್ಷರ ಆಯ್ಕೆಗೆ ಮೀಸಲಾತಿ ಕೌನ್ಸಿಲಿಂಗ್ ಮುಂದಿನ ವಾರದಲ್ಲಿ ನಡೆಯುತ್ತಿರುವ ಬೆನ್ನಲ್ಲೇ ಉಳಿದ ಅಲ್ಪದಿನಗಳಿಗೆ ಉಪಾಧ್ಯಕ್ಷರ ಚುನಾವಣೆ ನಡೆದಿದ್ದು ಸಾರ್ವಜನಿಕರಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಉಪಾಧ್ಯಕ್ಷರಾಗಿ ಆಯ್ಕೆಗೊಂಡ ಎಸ್‍ಸಿ ಎಡಗೈ ಸಮುದಾಯದ ಎಚ್.ಎರೆಪ್ಪ ಇವರನ್ನು ಗ್ರಾ.ಪಂ.ಅಧ್ಯಕ್ಷರು, ಸದಸ್ಯರು, ಅಭಿಮಾನಿಗಳು, ಮುಖಂಡರು ಅಭಿನಂದಿಸಿದರು. ಪಿಡಿಒ ಶಿವಕುಮಾರ್‍ಕೋರಿ, ಕಾರ್ಯದರ್ಶಿ ವೀರೇಶಗೌಡ, ಸಿಬ್ಬಂದಿಯವರು ಚುನಾವಣೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.
ಪೋಟೋ. ಸಿರಿಗೇರಿಯ ಗ್ರಾಮ ಪಂಚಾಯಿತಿಯಲ್ಲಿ ನಿನ್ನೆ ಉಪಾಧ್ಯಕ್ಷರ ಚುನಾವಣೆ ನಡೆಯಿತು.