
ಸಂಜೆವಾಣಿ ವಾರ್ತೆ
ಸಿರಿಗೇರಿ ಮೇ23. ಸಮೀಪದ ಸಿರಿಗೇರಿ ಕ್ರಾಸ್ ಹತ್ತಿರದ ಶಾನವಾಸಪುರ ಗ್ರಾಮದ ರೈತನ ಜಮೀನಿನಲ್ಲಿ ಮೇ 21 ರಂದು ರಾತ್ರಿ ಸಂಭವಿಸಿದ ಮಳೆ ಮತ್ತು ಭಾರಿ ಗಾಳಿಗೆ ಫಸಲಿಗೆ ಬಂದಿದ್ದ ಬಾಳೆ, ಕಬ್ಬು, ಸಪೋಟ ಬೆಳೆ ನೆಲಕ್ಕುರುಳಿ ರೈತನಿಗೆ ಭಾರಿ ನಷ್ಟ ಸಂಭವಿಸಿದೆ. ಶಾನವಾಸಪುರ ಗ್ರಾಮದ ರೈತ ಶಿವಶಂಕರಗೌಡ ಎಂಬುವವರ 10 ಎಕರೆ ಜಮೀನಿನಲ್ಲಿ 3 ಎಕರೆ ಕಬ್ಬು, 2ಎಕರೆ ಬಾಳೆ, ಹಾಗೂ ಸುಮಾರು 12 ರಿಂದ 15 ಸಪೋಟ ಗಿಡಗಳು ನೆಲಕ್ಕುರುಳಿವೆ. ಈಗಾಗಲೇ ಸಮೃದ್ಧ ಫಲ ಬಿಟ್ಟು ಕೈಗೆ ಫಲ ಬರಬೇಕಾಗಿದ್ದ ಸಮಯದಲ್ಲಿ ಈ ಮಳೆ ಗಾಳಿ ಸಂಭವಿಸಿದ್ದು, ಹಾಳಾಗಿರುವ ಬೆಳೆಯಿಂದ ಸುಮಾರ 6 ರಿಂದ 8 ಲಕ್ಷ ರೂ. ನಷ್ಟವಾಗಲಿದೆ ಎಂದು ರೈತ ಶಿವಶಂಕರಗೌಡ ತಮ್ಮ ಸಂಕಟ ವ್ಯಕ್ತಪಡಿಸಿದರು. ಅಲ್ಲದೇ ತಮ್ಮ ಜಮೀನಿನ ಸುತ್ತಲೂ ಬದುವಿನಲ್ಲಿ ಬೆಳೆಸಿದ್ದ ಕರಿಬೇವು, ಬೇವಿನ ಸುಮಾರು 15ರಿಂದ 20 ಗಿಡಗಳು ನೆಲಕ್ಕುರುಳಿವೆ, ತೋಟದಲ್ಲಿದ್ದ ದನಗಳ ಕೊಟ್ಟಿಗೆಯ ಮೇಲ್ಛಾವಣಿ (ಟಾಪ್) ಹಾರಿಹೋಗಿದೆ. ತುಂಬು ಫಸಲು ಹೊಂದಿದ್ದ ಬಾಳೆದಿಂಡಿನ ಗೊನೆಗಳು ನೆಲದ ಮೇಲೆ ಬಿದ್ದು ಅವುಗಳ ಮೇಲೆ ಬಾಳೆಗಿಡಗಳು ಬಿದ್ದಿರುವುದು, ಕೊಯ್ಲಿಗೆ ಬಂದಿದ್ದ ಕಬ್ಬು ನೆಲಕ್ಕೆ ಮಲಗಿದ್ದು, ಬುಡಮುರಿದು ನೆಲಕ್ಕುರುಳಿದ್ದ ಸಪೋಟಾ ಗಿಡಗಳನ್ನು ನೋಡಿ ಇತರೆ ರೈತರು ಮರುಕು ವ್ಯಕ್ತಪಡಿಸಿದರು. ಇದಲ್ಲದೆ ಸಿರಿಗೇರಿ ಹೋಬಳಿಯ ಇತರೆಡೆ ಅಲ್ಲಲ್ಲಿ ಮಳೆ ಗಾಳಿಯ ಪ್ರಭಾವದಿಂದ ರೈತರ ತೋಟಗಾರಿಕೆ ಬೆಳೆಗಳು ಹಾಳಾಗಿರುವುದು ಕಂಡುಬಂದಿದ್ದು ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಜಮೀನಿಗೆ ಭೇಟಿನೀಡಿ ಆಗಿರುವ ನಷ್ಟದ ಕುರಿತು ಗಮನಹರಿಸಬೇಕಿದೆ.
One attachment • Scanned by Gmail