
ಸಂಜೆವಾಣಿ ವಾರ್ತೆ
ಸಿರಿಗೇರಿ ಏ.23. ಗ್ರಾಮದ ಅಗಸೆ ಹತ್ತಿರದ ಶ್ರೀಬಸವಣ್ಣ ದೇವಸ್ಥಾನದಲ್ಲಿ ವೀರಶೈವ ಸಮಿತಿ ಮುಖಂಡರಿಂದ ಕ್ರಾಂತಿಯೋಗಿ, ಸಮಾಜ ಸುಧಾರಕ ಶ್ರೀಬಸವೇಶ್ವರರ ಜಯಂತಿಯನ್ನು ಭಕ್ತಿಯಿಂದ ಆಚರಿಸಲಾಯಿತು. ಬಸವೇಶ್ವರರ ಭಾವಚಿತ್ರಕ್ಕೆ ಪೂಜೆ ನೆರವೇರಿಸಿದ ನಂತರ ವಿವೇಕಾನಂದ ಪ್ರೌಢಶಾಲೆ ಮುಖ್ಯಗುರು ಎನ್.ಪಂಪಾಪತಿ ಬಸವಣ್ಣನವರನ್ನು ಕುರಿತು ಮಾತನಾಡಿ ಬಸವಣ್ಣನವರು ಜನರಲ್ಲಿದ್ದ ಮೌಡ್ಯವನ್ನು ತೊಡೆದು ಹಾಕುವ ಬೆಳಕಿನ ದೀಪವನ್ನು ಹಚ್ಚಿ ಹೋದರು. ಅವರ ಬೆಳಕಿನಲ್ಲಿ ಬಾಳುತ್ತಿರುವ ನಾವುಗಳು ಅವರ ಆದರ್ಶಗಳನ್ನು ಮರೆತು, ಜಾತಿಗಳ ಅಡ್ಡಗೋಡೆಗಳ ಮದ್ಯೆಯೇ ಸಂಕುಚಿತ ಜೀವನವನ್ನು ನಡೆಸುತ್ತಿದ್ದೇವೆ. ವಿಶ್ವವೇ ತನ್ನದೆಂದು ಅದರಲ್ಲಿನ ಜನರನ್ನು ತನ್ನ ಬಳಗವೆಂದು ಸಾರಿದ ಅವರ ತತ್ವಗಳನ್ನು ಬಿಟ್ಟು ನಾನು ನನ್ನದು ಎನ್ನುವ ಅಹಂಭಾವದಲ್ಲಿಯೇ ಜೀವನ ಸವೆಸುತ್ತಿದ್ದೇವೆ ಇದರಿಂದ ಮುಕ್ತರಾಗಬೇಕೆಂದು ತಿಳಿಸಿದರು. ನಂತರ ಗೋಡೆ ಅಡಿವೆಪ್ಪ ಅನುದಾನಿತ ಹಿ.ಪ್ರಾ.ಶಾಲೆಯ ಶಿಕ್ಷಕರಾದ ಮುದ್ದಟನೂರು ಶಿವಕುಮಾರ್ ಮಾತನಾಡಿ ಬಸವಣ್ಣನ ಆದರ್ಶಗಳು ಭೂಮಿಯ ಮೇಲೆ ಮನುಕುಲ ಇರುವವರೆಗೂ ಜೀವಂತ, ಅವರ ವಚನಗಳನ್ನು ಓದುತ್ತಾ ಆದರ್ಶಗಳನ್ನೂ ಪಾಲಿಸುತ್ತಾ ಶ್ರೇಷ್ಠ ವ್ಯಕ್ತಿಗಳಾಗುವುದು ನಮ್ಮ ಕೈಯಲ್ಲೇ ಇದೆ ಎಂದು ಬಸವಣ್ಣನವರ ಜೀವನದ ಕುರಿತು ತಿಳಿಸಿದರು. ಗೋಡೆ ಚಂದ್ರಶೇಖರಗೌಡ, ದರೂರು ಬಸವರಾಜ, ಶಶಿಧರಗೌಡ, ಎಂ.ಪಂಪನಗೌಡ, ಗುಂಡಿಗನೂರು ಯಲ್ಲನಗೌಡ, ಹಾವಿನಾಳ್‍ಎರೆಪ್ಪ, ಜೆ.ವೀರೇಶ್, ಸಿರಿಗೇರಿ ಎಲ್ಲನಗೌಡ, ಇತರರು ಪಾಲ್ಗೊಂಡಿದ್ದರು. ಗ್ರಾಮದ ಗ್ರಾ.ಪಂ.ಕಛೇರಿಯಲ್ಲಿ ಹಾಗೂ ವಿವಿದೆಡೆ ಬಸವ ಅನುಯಾಯಿಗಳು ಬಸವಣ್ಣನ ಜಯಂತಿಯನ್ನು ಆಚರಿಸಿದರು.