ಸಿರಿಗೇರಿಯಿಂದ 80 ಜನ ಭಕ್ತರಿಂದ ಶ್ರೀಶೈಲಕ್ಕೆ ಪಾದಯಾತ್ರೆ.


ಸಂಜೆವಾಣಿ ವಾರ್ತೆ
ಸಿರಿಗೇರಿ ಮಾ.10. ಪ್ರತಿ ವರ್ಷದಂತೆ ಈ ವರ್ಷವೂ ಸಿರಿಗೆರೆ ಗ್ರಾಮದಿಂದ 80 ಜನ ಶ್ರೀಶೈಲ ಮಲ್ಲಿಕಾರ್ಜುನ ಭಕ್ತರು ಶ್ರೀಶೈಲಕ್ಕೆ ಪಾದಯಾತ್ರೆ ಕೈಗೊಂಡರು. ಗ್ರಾಮದ ನಾನಾ ಸಮುದಾಯಗಳ ಭಕ್ತರು ಸಿರಿಗೆರಮ್ಮ ದೇವಸ್ಥಾನದ ಹತ್ತಿರ ಜಮಾವಣೆಗೊಂಡು, ದೇವಿಗೆ ಕಾಯಿ, ಕರ್ಪೂರ ಸಮರ್ಪಿಸಿ ಪಾದಯಾತ್ರೆ ಮುಂದುವರಿಸಿದರು. ಪ್ರತಿವರ್ಷವೂ ಗ್ರಾಮದಿಂದ ಮತ್ತು ಸಿರಿಗೆರೆ ವ್ಯಾಪ್ತಿಯ ಗ್ರಾಮಗಳಿಂದ ಸಾವಿರಾರು ಭಕ್ತರು, ಯುಗಾದಿ ಹಬ್ಬಕ್ಕೂ ಮುಂಚೇ ಶ್ರೀಶೈಲಕ್ಕೆ ಪಾದಯಾತ್ರೆ ಕೈಗೊಳ್ಳುವುದು ವಾಡಿಕೆಯಾಗಿ ಮತ್ತು ಭಕ್ತಿ ಸಂಪ್ರದಾಯವಾಗಿ ಬೆಳೆದು ಬಂದಿದೆ. ಈಗಾಗಲೇ ಹಲವು ತಂಡಗಳಿಂದ ಭಕ್ತರು ಪಾದಯಾತ್ರೆ ಮುಗಿಸಿ ಬಂದಿದ್ದು, ಇನ್ನೊಂದು ತಂಡದಿಂದ ನಿನ್ನೆ 80 ಜನ ಭಕ್ತರು ಪಾದಯಾತ್ರೆ ಕೈಗೊಂಡರು. ಪಾದಯಾತ್ರೆ ಸಿರಿಗೆರೆಯಿಂದ ಪ್ರಾರಂಭಗೊಂಡು, ದರೂರು, ಕರೂರು,  ನಂತರ ಆಂಧ್ರದ ಹೊಳಗುಂದಿ, ಆಸ್ಪರಿ, ಕರ್ನುಲ್, ವೆಂಕಟಾಪುರ, ಭೀಮನಕೊಂಡ, ಕೈಲಾಸ ಬೆಟ್ಟ ಮಾರ್ಗವಾಗಿ ಸುಮಾರು 350 ಕ್ಕೂ ಹೆಚ್ಚು ಕಿಲೋಮೀಟರ್ಗಳ ದಾರಿಯನ್ನು ಕ್ರಮಿಸಿ ಶ್ರೀಶೈಲ ತಲಪಲಿದ್ದೇವೆ ಎಂದು ಪಾದಯಾತ್ರೆಯ ನೇತೃತ್ವ ಹೊಂದಿದ್ದ ಯುವ ಮುಖಂಡರು ಮಾಹಿತಿ ನೀಡಿದರು. ವರ್ಷದಿಂದ ವರ್ಷಕ್ಕೆ ಮಹಿಳೆಯರು ಮತ್ತು ಯುವತಿಯರ ದಂಡು ಶ್ರೀಶೈಲಕ್ಕೆ ಪಾದಯಾತ್ರೆ ಕೈಗೊಳ್ಳುತ್ತಿದ್ದು, ಮಲ್ಲಿಕಾರ್ಜುನನ ಭಕ್ತರು ಮಹಿಳಾ ಮಣಿಗಳೇ ಹೆಚ್ಚಾಗಿ ರುವುದು  ಕಂಡುಬರುತ್ತಿರುವುದು ವಿಶೇಷವಾಗಿದ್ದು, ಸುಗ್ಗಿಯ ಬೆಳೆ ಬಂದ ನಂತರ ಹೆಚ್ಚಿನ ರೈತ ಮಹಿಳೆಯರು, ಮಹಿಳಾ ಕೂಲಿ ಕಾರ್ಮಿಕರು, ಶ್ರೀಶೈಲ ಮಲ್ಲಿಕಾರ್ಜುನ ಸ್ವಾಮಿಯ ಮತ್ತು ಪಂಡರಾಪುರದ ಪಾಂಡುರಂಗ ಸ್ವಾಮಿಯ ದೇವಸ್ಥಾನಗಳಿಗೆ ಪಾದಯಾತ್ರೆ ಕೈಕೊಳ್ಳುವ ರೂಢಿ ಗ್ರಾಮೀಣ ಭಾಗಗಳಲ್ಲಿ ಹೆಚ್ಚಾಗುತ್ತಿದೆ.