ಸಂಜೆವಾಣಿ ವಾರ್ತೆ
ಸಿರಿಗೇರಿ ಏ.24. ಗ್ರಾಮದಲ್ಲಿ ಏ.22 ರಂದು ಸಂಜೆ ಸಿಆರ್‍ಪಿಎಫ್ (ಪ್ಯಾಟಾಮಿಲ್ಕ) ಯೋಧರಿಂದ ಚುನಾವಣಾ ಜಾಗೃತಿ ಪಥಸಂಚಲನೆ ಕಾರ್ಯಕ್ರಮ ನಡೆಯಿತು. ಪೋಲಿಸ್ ಇಲಾಖೆಯ ನೇತೃತ್ವದಲ್ಲಿ 2023 ರ ವಿಧಾನಸಭಾ ಚುನಾವಣೆ ಜಾಗೃತಿಗಾಗಿ ಪಥಸಂಚಲನೆ ನಡೆಸಲಾಯಿತು. ಇದೇವೇಳೆ ತೆಕ್ಕಲಕೋಟೆ ಸಿಪಿಐ ಸುಂದರೇಶ್ ಮುಖ್ಯ ವೃತ್ತದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿ, ವಿಧಾನಸಭಾ ಚುನಾವಣೆಯು ನಿರ್ಭೀತಿಯಿಂದ, ಶಾಂತಿಯುತವಾಗಿ ನಡೆಸಲು ಸರ್ಕಾರದಿಂದ, ಚುನಾವಣೆ ಆಯೋಗದಿಂದ ಅಗತ್ಯ ಪೂರ್ವ ತಯಾರಿಗಳನ್ನು ಮಾಡಿಕೊಳ್ಳಲಾಗಿದೆ. ಸಾರ್ವಜನಿಕರು ಭಯಭೀತರಾಗದೇ ಮುಕ್ತವಾಗಿ ನಿಮಗೆ ಸೂಕ್ತವೆನಿಸುವ ವ್ಯಕ್ತಿಗೆ ಮತದಾನ ಮಾಡಬೇಕು. ದೌರ್ಜನ್ಯ, ಧರ್ಪ, ಬಲವಂತ, ಆಮಿಷಗಳು ಕಂಡುಬಂದಲ್ಲಿ ಕೂಡಲೇ ಸ್ಥಳೀಯ ಪೋಲಿಸ್ ಠಾಣೆಗೆ ಅಥವಾ ಚುನಾವಣೆ ಸಹಾಯವಾಣಿ ಸಂಖ್ಯೆಗಳಿಗೆ ಕರೆ ಮಾಡಬೇಕೆಂದು ತಿಳಿಸಿದರು. ಇದೇವೇಳೆ ಸ್ಥಳೀಯ ವಿವಿಧ ಪಕ್ಷಗಳ ಮುಖಂಡರು ಸರ್ಕಲ್‍ನಲ್ಲಿ ಜಮಾವಣೆಗೊಂಡು ಪೋಲಿಸ್ ಅಧಿಕಾರಿಗಳಿಗೆ, ಯೋಧರಿಗೆ ಮಾಲಾರ್ಪಣೆ ಪುಷ್ಪಾರ್ಚನೆ ಮಾಡಿ ಗೌರವಿಸಿದರು. ನಂತರ ಯೋಧರ ಪಥಸಂಚಲನವು ಗ್ರಾಮದ ಮುಖ್ಯ ಬೀದಿಗಳಲ್ಲಿ ಸಂಚರಿಸಿ ಠಾಣೆಯ ಸ್ಥಳಕ್ಕೆ ಮರಳಿತು. ನೂರಾರು ಸಿಆರ್‍ಪಿಎಫ್ ಯೋಧರು, ಸ್ಥಳೀಯ ಪೋಲಿಸ್ ಠಾಣೆಯ ಪಿಎಸ್‍ಐ ವೆಂಕಟೇಶ್‍ನಾಯಕ, ಎಎಸ್‍ಐ ಎಚ್.ಗಂಗಣ್ಣ, ರಮಣಕುಮಾರ್ ಮತ್ತು ಸಿಬ್ಬಂದಿಯವರು ಪಾಲ್ಗೊಂಡಿದ್ದರು. ಇದಕ್ಕೂ ಮುಂಚೆ ಕರೂರು ಮತ್ತು ದರೂರು ಗ್ರಾಮಗಳಲ್ಲೂ ಪಥ ಸಂಚಲನ ನಡೆಸಲಾಯಿತು ಎಂದು ಪಿಎಸ್‍ಐ ವೆಂಕಟೇಶನಾಯಕ ಮಾಹಿತಿ ನೀಡಿದರು.