ಸಿರಿಗೇರಿಯಲ್ಲಿ ಸಿಂದೋಳ ಸಮಜದವರಿಗೆ ಜಾಗೃತಿ ಶಿಬಿರ

ಸಂಜೆವಾಣಿ ವಾರ್ತೆ
ಸಿರಿಗೇರಿ 21. ಗ್ರಾಮದ ಗ್ರಾ.ಪಂ.ಸಮುದಾಯ ಭವನದಲ್ಲಿ ನ.20 ರಂದು ಸಂಜೆ ಜಾಗೃತಿ ಶಿಬಿರ ನಡೆಯಿತು. ಜಿಲ್ಲಾಡಳಿತ, ಜಿಲ್ಲಾಪಂಚಾಯಿತಿ, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಾ.ಶಿ.ಇಲಾಖೆ, ಗ್ರಾಮ ಆಡಳಿತ ಸಹಯೋಗದಲ್ಲಿ ಆಯೋಜಿಸಿದ್ದ ಶಿಬಿರದಲ್ಲಿ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಜಯಲಕ್ಷ್ಮಿ ಮಾತನಾಡಿ, ಕಾನೂನು ಬಾಹಿರ ಭಿಕ್ಷಾಟನೆಯಲ್ಲಿ ತೊಡಗಿದರೆ ಕ್ರಮ ಜರುಗಿಸಿದರೆ 7 ರಿಂದ10 ವರ್ಷ ಶಿಕ್ಷೆ ಮತ್ತು 10 ಲಕ್ಷ ರೂ. ದಂಡ ವಿಧಿಸಲಾಗುತ್ತದೆ. ಈಗ ಕಾಲ ತುಂಬಾ ಬದಲಾಗಿದ್ದು ನಮ್ಮ ಕಷ್ಟಗಳನ್ನು ಕಾರಣಕ್ಕೆ ಇಡಬಾರದು. ವಿವಿಧ ದುಡಿಮೆಗಳಲ್ಲಿ ತೊಡಗಿಕೊಂಡು ಆತ್ಮ ಗೌರವದಿಂದ ಬಾಳಬೇಕು. ಮುಂದಿನ ದಿನಗಳಲ್ಲಿ ಇಲಾಖೆಯಿಂದ ನಿಮಗೆ ಕಾನೂನು ಅರಿವು, ಸ್ವಂತ ಉದ್ಯೋಗ ಕೈಗೊಳ್ಳಲು ನೆರವು ನೀಡುವ ನಿಟ್ಟಿನಲ್ಲಿ ಪ್ರಯತ್ನಿಸಲಾಗಿವುದು. ಮಕ್ಕಳನ್ನು ತಪ್ಪದೇ ಶಾಲೆಗೆ ಕಡ್ಡಾಯವಾಗಿ ಕಳಿಸಿ ವಿದ್ಯಾವಂತರಾಗಿ ಮುಖ್ಯವಾಹಿನಿಗೆ ಬನ್ನಿ ಎಂದು ತಿಳಿಸಿದರು.
ರಾಜನಾಯಕ್ ಮಾತನಾಡಿ 1995 ರಲ್ಲಿ ಭಿಕ್ಷಾಟನೆ ಅಪರಾಧ ಎನ್ನುವ ಕಾಯ್ದೆ ಜಾರಿಗೆ ಬಂತು. ಆಗಿನಿಂದಲೂ ಭಿಕ್ಷಾಟನೆಯಲ್ಲಿ ತೊಡಗಿದ ಮಕ್ಕಳು ಹೆಣ್ಣುಮಕ್ಕಳನ್ನು ನಿರಾಶ್ರಿತ ಕೇಂದ್ರಗಳಿಗೆ ಕಳಿಸಿ ಪುನರ್ವಸತಿ ಕಲ್ಪಿಸಲಾಗಿದೆ. ಈಗ ಸಿಂದೋಲರ ಮೂಲ ಉದ್ಯೋಗ ಏನೆಂಬುದರ ಅನ್ವೇಷಣೆ ಮಾಡುತ್ತಿದ್ದೇವೆ. ನಿಮಗೆ ಸೌಲಭ್ಯ ಒದಗಿಸಲು ಸ್ಥಳೀಯ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ತಿಳಿಸಲಾಗುವುದು. ಇಲಾಖೆಯಿಂದ ಮಂಗಳಮುಖಿಯರಿಗೆ ಸ್ವ ಉದ್ಯೋಗ ಕೈಗೊಳ್ಳಲು ಕ್ರಮ ಕೈಗೊಂಡಿದೆ. ಮಕ್ಕಳಿಗೆ ಒಳ್ಳೆ ಶಿಕ್ಷಣ ಕೊಡಿಸಿ, ಬಾಲ್ಯವಿವಾಹ, ಭಿಕ್ಷಾಟನೆ ಮಾಡಿದರೆ ಬಂದಿಸಲಾಗುವುದು ಎಂದು ತಿಳಿಸಿದರು. ಸ.ಕ.ಇಲಾಖೆಯ ಅರುಣ್ ಕುಮಾರ್ ಮಾತನಾಡಿ ಇಲಾಖೆಯ ಆದೀನದಲ್ಲಿನ ನಿರಾಶ್ರಿತ ಕೇಂದ್ರದಲ್ಲಿ160 ಜನ ನಿರಾಶ್ರಿತರಿದ್ದಾರೆ. 18 ವರ್ಷದ ಮೇಲಿನ ಮಹಿಳೆ, 16 ವರ್ಷ ಮೇಲ್ಪಟ್ಟ ಬಾಲಕ ಭಿಕ್ಷಾಟನೆಯಲ್ಲಿ ತೊಡಗಿದರೆ ವಶಕ್ಕೆ ಪಡೆದು ಮುಖ್ಯವಾಹಿನಿಗೆ ತರುವ ಕೆಲಸ ಮಾಡಲಾಗುತ್ತಿದೆ. ಹೆಲ್ಪ್ ಲೈನ್ ನಂ.10581ಗೆ ಯಾರೇ ಕರೆಮಾಡಿದರು ಭಿಕ್ಷಾಟನೆಯಲ್ಲಿ ತೊಡಗಿದವರನ್ನು ವಶಕ್ಕೆ ಪಡೆಯಲಾಗುವುದೆಂದು ತಿಳಿಸಿದರು. ಸಿಂದೋಳ ಸಂಘದ ರಾಜ್ಯ ಅಧ್ಯಕ್ಷ ಕಂಪ್ಲಿಯ ರಾಹುಲ್ ನಾಗಪ್ಪ ಮಾತನಾಡಿ ಹಿಂದೆ ಭಿಕ್ಷಾಟನೆ ನಮ್ಮ ಪ್ರಮುಖ ವೃತ್ತಿಯಾಗಿತ್ತು. ಊರೂರು ಅಲೆಯುತ್ತಿದ್ದೆವು, ನಮಗೆ ಜಾತಿಯೆಂಬುದೇ ಇರಲಿಲ್ಲ ಅದನ್ನೂ ಹೋರಾಟ ಮಾಡಿ ಪಡೆದೆವು. ಕಾಯ್ದೆ ಬಂದಮೇಲೆ ಭಿಕ್ಷಾಟನೆ ಬಿಟ್ಟು ವಿವಿಧ ಕಸುಬು ಮಾಡುತ್ತಿದ್ದೇವೆ. ನಾವು ಸೌಲಬ್ಯ ಪಡೆಯಲು ಕೊರತೆ ಎದುರಿಸುತ್ತಿದ್ದೇವೆ. ಇದನ್ನು ಇಲಾಖೆಗಳು ಗಂಭೀರವಾಗಿ ಪರಿಗಣಿಸಿ ಸೌಲಭ್ಯ ಒದಗಿಸುವ ಕೆಲಸ ಮಾಡಬೇಕೆಂದು ತಿಳಿಸಿದರು.
ಜಿಲ್ಲಾಧ್ಯಕ್ಷ ವೈ.ಶಿವಕುಮಾರ ಮಾತನಾಡಿ ನಮ್ಮ ಜನಾಂಗಕ್ಕೆ ಸರಿಯಾದ ಸೌಲಭ್ಯ ಸಿಕ್ಕರೆ ಯಾಕೆ ಭಿಕ್ಷೆ ಬಿಡುತ್ತಾರೆ. ಮಾಧ್ಯಮ ತಪ್ಪು ವರಧಿಯಿಂದ ನಮ್ಮ ಮಾನ ಹರಾಜಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿ ಹೋರಾಟ ಕೈಗೊಳ್ಳಲಾಗುವುದು. ನಮ್ಮವರು ಅವಿದ್ಯಾವಂತರೆಂದು ಈರೀತಿ ಅವಮಾನ, ಅಪಮಾನ ಎದುರಿಸಬೇಕಾಗಿದೆ. ಅಂಬೇಡ್ಕರ್ ಆಶಯದಂತೆ ಮೊದಲು ನೀವೂ ಶಿಕ್ಸಿತರಾಗಬೇಕೆಂದು ಸಿಂದೋಳ ಸಮುದಾಯಕ್ಕೆ ಕರೆ ನೀಡಿದರು. ಅಧಿಕಾರಿಗಳಾದ ಈಶ್ವರ್ ರಾವ್ , ಮೈನಾವತಿ, ಗಂಗಾಧರ್, ಇತರರು ಉಪಸ್ಥಿತರಿದ್ದರು.