ಸಿರಿಗೇರಿಯಲ್ಲಿ ಸಂಗೀತ ತರಬೇತಿ ಶಾಲೆ ಪ್ರಾರಂಭ


ಸಂಜೆವಾಣಿ ವಾರ್ತೆ
ಸಿರಿಗೇರಿ ಜು.4. ಗ್ರಾಮದ ಜೆಎಚ್‌ವಿ ಶಾಲೆಯಲ್ಲಿ ಜುಲೈ 1 ಶನಿವಾರರಂದು ಧಾತ್ರಿ ರಂಗಸಂಸ್ಥೆ ಸಿರಿಗೇರಿ ವತಿಯಿಂದ ಸಂಗೀತ ತರಬೇತಿ ಶಾಲೆಗೆ ಚಾಲನೆ ನೀಡಲಾಯಿತು. ಸಂಗೀತ ಆಸಕ್ತ ಮಕ್ಕಳಿಂದಲೇ ಉದ್ಘಾಟನೆಗೊಂಡ ಕಾರ್ಯಕ್ರಮದಲ್ಲಿ ಧಾತ್ರಿ ರಂಗಸಂಸ್ಥೆಯ ಕಾರ್ಯದರ್ಶಿ, ನಟ, ನೀನಾಸಂ ಮಂಜು ಇವರು ಮಾತನಾಡಿ, ನಮ್ಮ ಗ್ರಾಮದಲ್ಲಿ ಮತ್ತು ಸುತ್ತಲಿನ ಕೆಲ ಗ್ರಾಮಗಳಲ್ಲಿ ಸಂಗೀತವನ್ನು ಕಲಿಯುವ ಹಂಬಲ ಉಳ್ಳ ಅನೇಕ ವಿದ್ಯಾರ್ಥಿಗಳು ಇದ್ದಾರೆ. ಅವರ ಪೋಷಕರ ಒತ್ತಾಯದ ಮೇರೆಗೆ ಈಗ ನಮ್ಮ ಸಂಸ್ಥೆಯಿಂದ ಸಂಗೀತ ಕಲಿಸುವ ತರಗತಿಗಳನ್ನು ಪ್ರಾರಂಭಿಸಲಾಗಿದೆ. ವಾರಾಂತ್ಯದಲ್ಲಿ ಅಂದರೆ ಶನಿವಾರ ಭಾನುವಾರ ಎರಡು ದಿನಗಳು ಸಂಗೀತ ತರಬೇತಿ ತರಗತಿಗಳು ನಡೆಯಲಿವೆ. ಈಗಾಗಲೇ ಸಾಕಷ್ಟು ವಿದ್ಯಾರ್ಥಿಗಳು ಮತ್ತು ಸಂಗೀತ ಆಸಕ್ತರು ತಮ್ಮ ಹೆಸರುಗಳನ್ನು ನೋಂದಾಯಿಸಿಕೊಂಡಿದ್ದು, ಸಂಗೀತ ತರಬೇತಿಯಲ್ಲಿ ಹಾರ್ಮೋನಿಯಂ ತಬಲಾ ಮತ್ತು ಗಾಯನಗಳ ಕುರಿತು ಹೇಳಿಕೊಡಲಾಗುವುದು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಹಾರ್ಮೋನಿಯಂ ಕಲಾವಿದ ಶಿಕ್ಷಕ ಡಿ. ಪುರುಷೋತ್ತಮ, ತಬಲಾ ವಾದಕ ಶಿಕ್ಷಕ ಬಾಲಾಜಿ ಗುಲ್ಬರ್ಗ, ಜೆಎಚ್‌ವಿ ಶಾಲೆಯ ಶಿಕ್ಷಕಿ ಶಿವಲೀಲಾ, ವಿದ್ಯಾರ್ಥಿಗಳು ಪೋಷಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

One attachment • Scanned by Gmail