
ಸಂಜೆವಾಣಿ ವಾರ್ತೆ
ಸಿರಿಗೇರಿ ಏ.22. ಗ್ರಾಮದಲ್ಲಿ ಮುಸ್ಲಿಂ ಸಮುದಾಯದವರಿಂದ ಪವಿತ್ರ ರಂಜಾನ್ ಹಬ್ಬವು ಶ್ರದ್ಧೆ ಭಕ್ತಿಯಿಂದ ಆಚರಿಸಲಾಯಿತು. ನಿನ್ನೆಯ ದಿನ ಸಂಜೆ ಮೋಡದಲ್ಲಿನ ಚಂದಪ್ಪನನ್ನು ಮುಸ್ಲಿಂ ಸಮುದಾಯದವರು ವೀಕ್ಷಿಸಿ ದರ್ಶನ ಪಡೆದು ಇಂದು ತಮ್ಮ ಪವಿತ್ರ ರಂಜಾನ್ ಹಬ್ಬದ ಆಚರಣೆಯಲ್ಲಿ ತೊಡಗಿ ಬೆಳಿಗ್ಗೆ ಸ್ನಾನ ಮುಗಿಸಿ ಹೊಸಬಟ್ಟೆ ತೊಟ್ಟು ಗ್ರಾಮದ ಜಾಮಿಯಾ ಮಸೀದಿಯಲ್ಲಿ ಜಮಾವಣೆಗೊಂಡು ಮೊದಲ ಹಂತದ ನಮಾಜ್ (ಪ್ರಾರ್ಥನೆ) ಯನ್ನು ಮುಗಿಸಿದರು. ನಂತರ ನಡವಿ ರಸ್ತೆಯ ಈದ್ಗಾ ಮೈದಾನಕ್ಕೆ ತೆರಳಿ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿದರು. ಜಾಮಿಯಾ ಮಸೀದಿ ಸಾಹೇಬ್ ಅಲ್ಲಾನ ಕುರಿತು ಪಠಣ ಮಾಡಿ ಭೂಮಿಯ ಮೇಲಿನ ಸಕಲ ಪ್ರಾಣಿ ಸಂಕುಲಕ್ಕೆ ಒಳಿತು ಮಾಡುವಂತೆ ಕಾಲಕಾಲಕ್ಕೆ ಮಳೆಬೆಳೆ ಸಮೃದ್ಧಿಯಾಗುವಂತೆ, ಎಲ್ಲರೂ ಕೈಗೊಳ್ಳುವ ದುಡಿಮೆಗೆ ಉತ್ತಮ ಫಲ ನೀಡುವಂತೆ ಪ್ರಾರ್ಥನೆ ಮಾಡಿದರು. ನಂತರ ಕೆಲವರು ಪಕ್ಕದ ಖಬರ್‍ಸ್ಥಾನಕ್ಕೆ ತೆರಳಿ ತಮ್ಮ ಕುಟುಂಬದ ಹಿರಿಯರ ಘೋರಿಗಳಿಗೆ ನಮಸ್ಕರಿಸಿ ಭಕ್ತಿ ಸಮರ್ಪಿಸಿದರು. ಗ್ರಾಮದಿಂದ ಬೇರೆ ಊರುಗಳಿಗೆ ದುಡಿಮೆಗಾಗಿ, ಕೆಲಸಕ್ಕಾಗಿ ತೆರಳಿದ್ದ ಸಿರಿಗೇರಿಯ ಮುಸ್ಲಿಂ ಸಮುದಾಯದವರು ಬಂದು ನಮಾಜ್‍ನಲ್ಲಿ ಪಾಲ್ಗೊಂಡು ರಂಜಾನ್ ಹಬ್ಬ ಆಚರಿಸಿದರು.