ಸಿರಿಗೇರಿಯಲ್ಲಿ ನಿರಂತರ ಕರೆಂಟ್ ಕಟ್


ಸಂಜೆವಾಣಿ ವಾರ್ತೆ
ಸಿರಿಗೇರಿ ಜು21. ಗ್ರಾಮವು 24 ತಾಸೂ ನಿರಂತರ ವಿದ್ಯುತ್ ಸಂಪರ್ಕಕ್ಕೆ ಭಾಜನವಾಗಿ ವರ್ಷಗಳೇ ಉರುಳಿದವು. ಇಲ್ಲಿಯವರೆಗೆ ಕರೆಂಟ್ ಹೋಗಲಾರದ ದಿನಗಳನ್ನು ಎಷ್ಟು ಹೆಕ್ಕಿ ಹುಡುಕಿದರೂ ಆ ದಿನಗಳು ಸಿಗುವುದಿಲ್ಲ. ಬದಲಿಗೆ ನಿರಂತರ ಕರೆಂಟ್ ತೆಗೆಯಲು ನಿರಂತರ ವಿದ್ಯುತ್ ಸಂಪರ್ಕದ ಗ್ರಾಮಗಳ ಹಣೆಪಟ್ಟಿ ಹೊಂದಿದೆ ಎನ್ನುವುದು ಧಾರಾಳವಾಗಿ ಕಂಡುಬರುತ್ತಿದೆ. ಈಗ ಸಿರಿಗೇರಿಯಲ್ಲಿ ದಿನದಲ್ಲಿ ಕನಿಷ್ಠ 30 ರಿಂದ 50 ಭಾರಿ ಧಾರಾಳವಾಗಿ ಕರೆಂಟ್ ತೆಗೆಯಲಾಗುತ್ತಿದೆ. ಯಾಕಪ್ಪಾ ಅಂತ ಇತ್ತೀಚೆಗೆ ಕೇಳುವವರೇ ಇಲ್ಲ. ಇದು ವಿದ್ಯುತ್ ಇಲಾಖೆಯ ಅಧಿಕಾರಿಗಳಿಗೆ, ಸಿಬ್ಬಂದಿಗಳಿಗೆ ಸಿರಿಗೇರಿಯವರ ಬಗ್ಗೆ ಇರುವ ನಿಲುವಾಗಿದೆ. ಸಿರಿಗೇರಿ ಕ್ರಾಸ್ ನಲ್ಲಿ ಇರುವ ವಿದ್ಯುತ್ ವಿತರಣಾ ಘಟಕದಲ್ಲಿ ಯಾವುದೇ ಊರಿಗೆ ಕರೆಂಟ್ ಹೆಚ್ಚಿಗೆ ಕೊಡುವ ಸಂದರ್ಭ ಬಂದಾಗ ಸಿರಿಗೇರಿ ಕನೆಕ್ಷನ್ ತೆಗೆದು ಆ ಊರಿಗೆ ಕೊಡಿ ಎನ್ನುವಷ್ಟರ ಮಟ್ಟಿಗೆ ನಿಲುವು ಹೊಂದಲಾಗಿದೆ ಎಂದು ಇಲ್ಲಿ ಕರೆಂಟ್ ಸಮಸ್ಯೆ ಎದುರಿಸುವವರು ಮಾತನಾಡಿಕೊಳ್ಳುತ್ತಿದ್ದಾರೆ. ಜೋತುಬಿದ್ದ ಕಟೆಂಟ್ ವೈರ್. ವಾಲಿದ, ಶಿಥಿಲಗೊಂಡ, ಹಳೆಯ ಕಂಬಗಳು. ನೂರಾರು ಮನೆಗಳ ಮೇಲೆ ಕೈಗೆ ಸಿಗುವ ಕರೆಂಟ್ ಲೈನ್, ಜನನಿಬಿಡ ಸಾರ್ವಜನಿಕ ಮುಖ್ಯರಸ್ತೆಯ ಪಕ್ಕದಲ್ಲಿಯೇ ಅಪಾಯ ಒಡ್ಡುತ್ತಿರುವ ಜೋಡು ಟಿಸಿಗಳು. ಪದೇ ಪದೇ ಎಲ್ಸಿ ತೆಗೆದುಕೊಳ್ಳುವುದು, ಈರೀತಿ ಹತ್ತು ಹಲವು ವಿದ್ಯುತ್ ಸಂಬಂಧಿತ ಸಮಸ್ಯೆಗಳು ಗ್ರಾಮದಲ್ಲಿವೆ. ಸಮಸ್ಯೆಗಳ ಕುರಿತು ಹಲವುಬಾರಿ ವರಧಿ ಮಾಡಿದರೂ ಕ್ಯಾರೆ ಅನ್ನದ ಕೆ ಇ ಬಿ ಅಧಿಕಾರಿಗಳು. ಜವಾಬ್ದಾರಿ ಇರುವ ಗ್ರಾಮದ ಜನಪ್ರತಿನಿಧಿಗಳು ದಿನದಲ್ಲಿ 15 ತಾಸಿಗೂ ಹೆಚ್ಚು ಹೋಗುತ್ತಿರುವ, ಪದೇ ಪದೇ ಕಟ್ ಆಗುವ ಕರೆಂಟ್ ಬಗ್ಗೆ ತಲೆ ಕೆಡಿಸಿಕೊಳ್ಳಬೇಕೆಂಬುದು ಸಿರಿಗೇರಿ ಗ್ರಾಮಸ್ಥರ ಆಗ್ರಹವಾಗಿದೆ.