ಸಿರಿಗೇರಿಯಲ್ಲಿ ತೆಕ್ಕಲಕೋಟೆ ಹೋಬಳಿ ಮಟ್ಟದ ಕ್ರೀಢಾಕೂಟ”


ಸಂಜೆವಾಣಿ ವಾರ್ತೆ
ಸಿರಿಗೇರಿ ಜೂ27. ಗ್ರಾಮದ ಎರಡು ಪ್ರಮುಖ ಖಾಸಗೀ ಶಾಲೆಗಳಾದ ಜೆಎಚ್‍ವಿ ಮತ್ತು ವಿವೇಕಾನಂದ ಸಂಸ್ಥೆಯ ಗೋಡೆ ಅಡಿವೆಪ್ಪ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಇಂದು ತೆಕ್ಕಲಕೋಟೆ ಹೋಬಳಿ ಮಟ್ಟದ ಹಿರಿಯ ಪ್ರಾಥಮಿಕ ಶಾಲೆಗಳ ವಿದ್ಯಾರ್ಥಿಗಳಿಂದ ಹೋಬಳಿ ಮಟ್ಟದ ಕ್ರೀಢಾಕೂಟ ಚಾಲನೆಗೊಂಡಿದೆ. ತೆಕ್ಕಲಕೋಟೆ ಹೋಬಳಿ ವ್ಯಾಪ್ತಿಯ ಸಿರಿಗೇರಿ, ಹಳೆಕೋಟೆ, ತೆಕ್ಕಲಕೋಟೆ, ಕೊಂಚಿಗೇರಿ, ಎಂ.ಸೂಗೂರು, ನಡವಿ, ಮುದ್ದಟನೂರು, ಒಳಗೊಂಡ 3ಕ್ಲಸ್ಟರ್‍ಗಳ 39 ಶಾಲೆಗಳ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕ್ರೀಢಾಕೂಟದಲ್ಲಿ ಭಾಗವಹಿಸಿದ್ದರು. ಮೊದಲ ಹಂತವಾಗಿ ಜೆಎಚ್‍ವಿ ಶಾಲೆಯಲ್ಲಿ ಬಾಲಕಿಯರಿಗೆ ಕಬ್ಬಡ್ಡಿ ಮತ್ತು ಥ್ರೋಬಾಲ್ ಪಂದ್ಯಾವಳಿಗಳು, ಗೋಡೆ ಅಡಿವೆಪ್ಪ ಅನುದಾನಿತ ಶಾಲೆಯ ಆವರಣದಲ್ಲಿ ಬಾಲಕರ ಕಬ್ಬಡ್ಡಿ, ಥ್ರೋಬಾಲ್ ಪಂದ್ಯಾವಳಿಗಳಿಗೆ ಚಾಲನೆ ನೀಡಲಾಗಿದೆ.
ಕ್ರೀಢಾಕೂಟ ನಡೆಯುವ ಸ್ಥಳದಲ್ಲಿ ಸುಸ್ತಾದ ವಿದ್ಯಾರ್ಥಿಗಳು ಸುಧಾರಿಸಿಕೊಳ್ಳಲು ನೆರಳಿಗಾಗಿ ಶಾಮಿಯಾನ ವ್ಯವಸ್ಥೆ ಇಲ್ಲದಿರುವುದು, ಮಕ್ಕಳಿಗೆ ಕುಡಿವನೀರು ಸ್ಥಳದಲ್ಲಿಯೇ ಸಿಗುವಂತೆ ಇಲ್ಲದಿರುವುದು ಎದ್ದುಕಾಣುತ್ತಿರುವುದನ್ನು ಜನರು ಹೆಚ್ಚು ಗಮನಿಸಿದ್ದು ಕಂಡುಬಂತು. ಜು.29 ರಂದು ಸಿರಿಗೇರಿಯ ಮದರ್ ಥೆರೆಸ್ಸಾ ಖಾಸಗೀ ಶಾಲೆಯಲ್ಲಿ ನಡೆಯುವ ಸಮಾರೋಪ ಸಮಾರಂಭದ ಕಾರ್ಯಕ್ರಮದ ಮೇಲೆ ಹೆಚ್ಚು ಒತ್ತು ನೀಡಿದ್ದರಿಂದ ಇಂದಿನಿಂದ ಪ್ರಾರಂಭವಾಗಿರುವ ಮೊದಲೆರಡು ದಿನಗಳ ಕ್ರೀಢೆಗಳಲ್ಲಿ ಆಡುವ ಮಕ್ಕಳಿಗೆ ನೀರು ನೆರಳಿನ ವ್ಯವಸ್ಥೆ ಮಾಡಬೇಕೆಂಬುದು ಗ್ರಾಮದ ಕೆಲವರ ಅಭಿಪ್ರಾಯವಾಗಿತ್ತು. ಕ್ರೀಢಾಕೂಟ ಆಯೋಜಕರಾದ ಎಂ.ಸತೀಶ್‍ಕುಮಾರ್, ತೆಕ್ಕಲಕೋಟೆ ಹೋಬಳಿ ಕ್ರೀಢಾ ಕಾರ್ಯದರ್ಶಿ ಶಂಕರ್‍ವಾಲಿಕಾರ್, ಇಸಿಒ ಪಂಪಾಪತಿ, ಮುಖ್ಯಸ್ಥರಾದ ಸಿರಿಗೇರಿ ಸಿಆರ್‍ಪಿ ಎ.ಅರುಣಕುಮಾರ್, ತೆಕ್ಕಲಕೋಟೆ ಸಿಆರ್‍ಪಿ ಮೊಹಮ್ಮದ್ ಫಯಾಜ್, ಎಂ.ಸೂಗೂರು ಸಿಆರ್‍ಪಿ ಪ್ರಭುರಾಜ್ ಮತ್ತು ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಶಾಲೆಗಳ ದೈಹಿಕ ಶಿಕ್ಷಕರು, ಸಹ ಶಿಕ್ಷಕರು ಪಾಲ್ಗೊಂಡಿದ್ದರು.