ಸಿರಿಗೇರಿಯಲ್ಲಿ ಡಾ| ಬಿ.ಆರ್.ಅಂಬೆಡ್ಕರ್ ರಾತ್ರಿ ಶಾಲೆ ಉದ್ಘಾಟನೆ”


ಸಂಜೆವಾಣಿ ವಾರ್ತೆ
ಸಿರಿಗೇರಿ ನ22. ಗ್ರಾಮದ ಸಿರಿಗೇರಮ್ಮ ದೇವಸ್ಥಾನದ ಹತ್ತಿರ ದಲಿತ ಕಾಲೋನಿಯ ಸಮುದಾಯ ಭವನದಲ್ಲಿ ಡಾ.ಬಿ.ಆರ್.ಅಂಬೆಡ್ಕರ್ ರಾತ್ರಿ ಶಾಲೆಯನ್ನು ಉದ್ಘಾಟಿಸಲಾಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಬಿ.ಲೀಲಾವತಿಬಸವನಗೌಡ ಇವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಿರುಗುಪ್ಪ ತಾಲೂಕು ಸಹಾಯಕ ನಿರ್ದೇಶಕರಾದ ಶ್ರೀಮತಿ ರಾಜೇಶ್ವರಿ ಯವರು ಸಂವಿಧಾನದ ಪೀಠಿಕೆ ಓದುವ ಮೂಲಕ ಉದ್ಘಾಟಿಸಿದರು. ನಂತರ ಮಾತನಾಡಿ ಶಿಕ್ಷಣದಿಂದ ಎಲ್ಲವೂ ಸಾಧ್ಯ, ಸಮಗ್ರ ಅಭಿವೃದ್ಧಿಗೆ ಶಿಕ್ಷಣವೇ ಬುನಾದಿ ಎಲ್ಲರೂ ಶಿಕ್ಷಣಕ್ಕೆ ಒತ್ತು ನೀಡಿ ಓದಬೇಕು ಮತ್ತು ಓದುವವರಿಗೆ ಪ್ರೇರಣೆ ಸಹಕಾರ ನೀಡಬೇಕೆಂದು ತಿಳಿಸಿದರು.
ಸರ್ಕಾರಿ ಮಾದರಿ ಶಾಲೆ ಮುಖ್ಯಗುರು ಸತೀಶ್‍ಕುಮಾರ್ ಮಾತನಾಡಿ ಸಾಕ್ಷರತೆಯಲ್ಲಿ ಪ್ರತಿಶತ ಶೇಕಡ ಸಾಧಿಸಲು ಸಾಧ್ಯವಾಗುತ್ತಿಲ್ಲ. ಸಾಧನೆಗೆ ಪ್ರತಿಯೊಬ್ಬರ ಸಹಕಾರ ಅಗತ್ಯ. ಸಂವಿಧಾನದ 395 ಮೂಲ ವಿಧಿಗಳನ್ನು ಓದುಬರಹ ಬಲ್ಲವರು ಓದಬೇಕು. ಶಿಕ್ಷಣವು ಎಲ್ಲರಿಗೂ ಮಾನ ಮನ್ನಣೆ ದೊರಕಿಸುತ್ತದೆ. ಶಾಲೆಯಲ್ಲಿ ಇರುವವರೆಗೆ ಮಕ್ಕಳು ನಮ್ಮ ಜವಾಬ್ದಾರಿ, ಹೊರಗೆ ಬಂದಮೇಲೆ ಅವರ ಓದನ್ನು ಘಟ್ಟಿಗೊಳಿಸುವ ಕಾರ್ಯ ಈ ರಾತ್ರಿ ಶಾಲೆ ಜವಾಬ್ದಾರಿ ತೆಗೆದುಕೊಂಡಿದ್ದು ಸಂತಸದ ವಿಷಯ ಎಂದು ತಿಳಿಸಿದರು.   
ದಲಿತ ವಿದ್ಯಾರ್ಥಿ ಪರಿಷತ್ ಜಿಲ್ಲಾಧ್ಯಕ್ಷ ಎಚ್.ಲಕ್ಷ್ಮಣ ಭಂಡಾರಿ ಪ್ರಾಸ್ತಾವಿಕ ಮಾತನಾಡಿ ಸಂತೋಷಕ್ಕೆ, ಹೆಚ್ಚು ಲಾಭವಾದಾಗ ದೊಡ್ಡದೊಡ್ಡ ದೇವಸ್ಥಾನಗಳಿಗೆ ಹೋಗುತ್ತೇವೆ, ಅದೇ ಕಷ್ಟ ಬಂದಾಗ ಪೋಲಿಸ್ ಠಾಣೆಗೆ ಹೋಗುತ್ತೇವೆ. ಕಷ್ಟದಲ್ಲಿದ್ದವರಿಗೆ ಠಾಣೆಯೇ ದೇವಸ್ಥಾನ ಇಲ್ಲಿ ಸಂವಿದಾನಾತ್ಮಕ ನ್ಯಾಯ ಸಿಗುವಂತೆ ಮಾಡಿದವರೇ ಅಂಬೆಡ್ಕರ್‍ರವರು. ಮಕ್ಕಳನ್ನು ರಾತ್ರಿಶಾಲೆಗೆ ಕಳಿಸುವ ಮೂಲಕ ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಬೇಕೆಂದು ತಿಳಿಸಿದರು.
ನಂತರ ಜಿಲ್ಲಾ ಸಂಚಾಲಕ ಉಮಾಪತಿದ್ರಾವಿಡ್ ಮತ್ತು ತಾಲೂಕು ಸದಸ್ಯ ಕುಮಾರಸ್ವಾಮಿ ಮಾತನಾಡಿ ಆಸ್ತಿ-ಹಣ ಎಲ್ಲಾ ಸಮಯದಲ್ಲಿ ಕೆಲಸಕ್ಕೆ ಬರುವುದಿಲ್ಲ, ಎಲ್ಲಾ ಸಮಯಕ್ಕೆ ಪರಿಹಾರ ಶಿಕ್ಷಣ ಮಾತ್ರ. ಇದು ಬರೀ ರಾತ್ರಿ ಶಿಕ್ಷಣ (ಟ್ಯೂಶನ್) ಮಾತ್ರವಲ್ಲ ರಾಜ್ಯಮಟ್ಟದಲ್ಲಿ ಪರೀಕ್ಷೆ ಎದುರಿಸುವ, ಅಂಬೆಡ್ಕರ್ ಅಕಾಡೆಮಿಯಿಂದ ಐಎಎಸ್, ಕೆಎಎಸ್, ಐಪಿಎಸ್ ನಂತಹ ಕೋಚಿಂಗ್‍ಗೂ ಅವಕಾಶವಿದೆ. ಸಂಘಟನೆಗಳೆಂದರೇ ಬರೀ ಹೋರಾಟ ಮಾಡುವುದಲ್ಲ. ದಲಿತ ವಿದ್ಯಾರ್ಥಿ ಪರಿಷತ್ ಮೂಲಕ ಸಮಾಜಕ್ಕೆ ಗಣ್ಯರನ್ನು, ಪ್ರಾಮಾಣಿಕ ಅಧಿಕಾರಿಗಳನ್ನು ತಯಾರಿಸುವ ಉದ್ದೇಶ ಹೊಂದಲಾಗಿದೆ. ಇದಕ್ಕೆ ಮಕ್ಕಳ ಪೋಷಕರು, ಮುಖಂಡರು, ಗಣ್ಯರು, ಅಧಿಕಾರಿಗಳು ಸಹಕರಿಸಬೇಕೆಂದು ಕೋರಿದರು.
ಗ್ರಾ.ಪಂ.ಉಪಾಧ್ಯಕ್ಷ ಭಜಂತ್ರಿರಮೇಶ್, ಅತಿಥಿ ಶಿಕ್ಷಕ ಎಚ್.ಈರಣ್ಣ ಮಾತನಾಡಿ ಶಾಲೆಯಿಂದ ಬಂದ ಮಕ್ಕಳಿಗೆ ಬರೀ ಶಾಲೆಯಲ್ಲಿನ ಸಮಸ್ಯೆಗಳನ್ನೇ ಕೇಳುತ್ತೇವೆ, ಸರಿಯಾಗಿ ಶಾಲೆಗೆ ಹೋಗಿದ್ದೆಯಾ, ಶಿಕ್ಷಕರು ಏನು ಕಲಿಸಿದರು. ಏನು ಕಲಿತುಕೊಂಡೆ ಎಂದು ಕೇಳುತ್ತಿಲ್ಲ. ಮಕ್ಕಳ ವಿದ್ಯಾಭ್ಯಾಸದ ಕಡೆ ಪೋಷಕರೂ ಜವಾಬ್ದಾರಿ ಹೊಂದಿರಬೇಕೆಂದರು. ಗ್ರಾಮದ ಮುಖಂಡರಾದ ಬಕಾಡೆಈರಯ್ಯ, ಡ್ರೈವರ್‍ಹುಲುಗಪ್ಪ, ಗ್ರಾ.ಪಂ.ಸದಸ್ಯರಾದ ಕೆಂಚಮ್ಮ, ಕರಿಬಸಪ್ಪ, ಸಲೀಮ್, ಹಾಸ್ಟಲ್ ವಾರ್ಡನ್ ಬಗವಂತಪ್ಪ, ಪೋಲಿಸ್ ಇಲಾಖೆಯ ಬಸವರಾಜ್, ಮಂಜುನಾಥ ಹಾಗೂ ಸಾಸಲಮರಿ ಹುಲುಗಪ್ಪ, ದಲಿತ ವಿದ್ಯಾರ್ಥಿ ಪರಿಷತ್‍ನ ಜಿಲ್ಲಾ, ತಾಲೂಕು, ಮತ್ತು ಗ್ರಾಮ ಘಟಕಗಳ ಪದಾಧಿಕಾರಿಗಳು, ವಿದ್ಯಾರ್ಥಿಗಳು, ಪೋಷಕರು ಪಾಲ್ಗೊಂಡಿದ್ದರು. ಹುಲುಗಪ್ಪ, ದೊಡ್ಡಬಸವ, ಉಮೇಶ್, ಕಾರ್ಯಕ್ರಮ ನಿರ್ವಹಿಸಿದರು. 
ಪೋಟೋ:  ಸಿರಿಗೇರಿ ಗ್ರಾಮದಲ್ಲಿ ಡಾ.ಬಿ.ಆರ್.ಅಂಬೆಡ್ಕರ್ ರಾತ್ರಿ ಶಾಲೆಯನ್ನು ಸಂವಿಧಾನ ಪೀಠಿಕೆ ಓದಿ ಉದ್ಘಾಟಿಸಲಾಯಿತು.