ಸಿರಿಗೇರಿಯಲ್ಲಿ ಅಕ್ಕ ನಾಗಲಾಂಬಿಕೆ ನಾಟಕ ಪ್ರದರ್ಶನ”


ಸಂಜೆವಾಣಿ ವಾರ್ತೆ
ಸಿರಿಗೇರಿ ನ18. ಗ್ರಾಮದ ಶ್ರೀ ಶಂಭುಲಿಂಗೇಶ್ವರ ಸಭಾ ಭವನದಲ್ಲಿ ನ.16 ರಂದು ಬುಧವಾರ ಶರಣೆ ಅಕ್ಕ ನಾಗಲಾಂಬಿಕೆ ಎನ್ನುವ ಐತಿಹಾಸಿಕ ನಾಟಕ ಪ್ರದರ್ಶನಗೊಂಡಿತು. ಶ್ರೀ ಬಸವಾದಿ ಶರಣರ ಸಾಹಿತ್ಯ ದರ್ಶನ ಎನ್ನುವ ಕಾರ್ಯಕ್ರಮ ಅಡಿಯಲ್ಲಿ, ಶ್ರೀ ಶಿವಕುಮಾರ ಕಲಾ ಸಂಘ ಸಾಣೆಹಳ್ಳಿ ಇವರು ನಾಟಕವನ್ನು ಆಯೋಜಿಸಿದ್ದರು. ಸಿರಿಗೇರಿಯ ಧಾತ್ರಿ ರಂಗ ಸಂಸ್ಥೆಯ ಸಾಣೆಹಳ್ಳಿ ಪಂಡಿತರಾಧ್ಯ ಸ್ವಾಮೀಜಿ ರಚಿಸಿದ, ಜಗದೀಶ ಆರ್.ಜಾನಿ ಇವರ ನಿರ್ಧೇಶನ ಮಾಡಿದ್ದರು. ನಾಟಕದ ಪ್ರಾರಂಭದಲ್ಲಿ ನಡೆದ ವೇದಿಕೆ ಕಾರ್ಯಕ್ರಮ ಉದ್ದೇಶಿಸಿ ದೇವದುರ್ಗ ಸರ್ಕಲ್ ಇನ್‍ಸ್ಪೆಕ್ಟರ್ ಕೆ.ಹೊಸಗೇರಪ್ಪ ಮಾತನಾಡಿ ನಾಟಕಗಳು ಶರಣರ ಜೀವನದ ಬಗ್ಗೆ ತಿಳಿಸುತ್ತಾ ನಮ್ಮ ಜೀವನದ ಮಾರ್ಗ ತೋರುತ್ತವೆ. 12ನೇ ಶತಮಾನದಲ್ಲಿ ನಡೆದ ಅದ್ಯಾತ್ಮದ ಶರಣರ ಕಥೆಗಳು ನಾಟಕ ರೂಪದಲ್ಲಿ ಇಂದಿಗೂ ನಮಗೆ ದಾರಿದೀಪ. ಶರಣರು ತೋರಿದ ಭಕ್ತಿಮಾರ್ಗ, ಐಕ್ಯ ಮಾರ್ಗದಲ್ಲಿ ನಡೆದು ಗ್ರಾಮಗಳ ಅಭಿವೃದ್ಧಿಯಲ್ಲಿ ತೊಡಗಬೇಕು. ಗ್ರಾಮ ಸೌಂದರ್ಯಕ್ಕೆ ಒತ್ತುನೀಡಿ ತ್ಯಾಜ್ಯದಿಂದ ತುಂಬಿದ ಸಿರಿಗೇರಿ ಹೃದಯ ಭಾಗದ ಕೆರೆಯನ್ನು ಸ್ವಚ್ಚಗೊಳಿಸುವ ಕೆಲಸವಾಗಬೇಕಿದೆ ಎಂದರು.
ಇದೇವೇಳೆ ಸಹಕಾರ ರತ್ನ ರಾಜ್ಯ ಪ್ರಶಸ್ತಿ ಪುರಸ್ಕೃತ ಹಾಗಲೂರು ಮಲ್ಲನಗೌಡರನ್ನು ಅಭಿನಂದಿಸಿದರು. ಶಂಭುಲಿಂಗೇಶ್ವರ ಟ್ರಸ್ಟ್ ವತಿಯಿಂದ ಮಲ್ಲನಗೌಡರನ್ನು ಸನ್ಮಾನಿಸಲಾಯಿತು. ನಾಟಕ ಮುಕ್ತಾಯದ ನಂತರ ಸಿರುಗುಪ್ಪ ನಗರದ ಅಕ್ಕನ ಬಳಗದ ಹಿರಿಯ ಮಹಿಳೆಯೊಬ್ಬರು ಮಾತನಾಡಿ ಮಹಿಳೆಯರಿಗೆ ಸ್ಥಾನಮಾನ ಕಲ್ಪಿಸಿದ ಅಕ್ಕನಾಗಲಾಂಬಕೆ ನಾಟಕವನ್ನು 1ವರೆ ತಾಸಿನಲ್ಲಿ ಮನಮುಟ್ಟುವಂತೆ ಅಭಿನಯಿಸಿದ ಎಲ್ಲಾ ಕಲಾವಿದರನ್ನು ಹೊಗಳಿ ಕೊಂಡಾಡಿದರು. ನಾಗಲಾಂಬಿಕೆ ಪಾತ್ರದಾರಿ ರಂಜನಿ ಚನ್ನರಾಯಪಟ್ಟಣ, ಬಸವಣ್ಣ ಪಾತ್ರದಾರಿ ಆಕಾಶ್ ಹಾವೇರಿ ಇವರನ್ನು ಸನ್ಮಾನಿಸಿ ಗೌರವಿಸಿದರು. ಕಲಾವಿದರಾದ ಮಣಿಕಂಠ ಶಿರಿಗೇರಿ, ಮಂಜುನಾಥ ಯಾದಗಿರಿ, ಶಿವರಾಜ್ ತೋರಣಗಲ್ಲು, ತುಳಸಿ ಧಾರವಾಡ, ಲಕ್ಷ್ಮಿ ಶಿವಮೊಗ್ಗ, ಭೀಮೇಶ್ ಹಾಗಲೂರು, ಹರ್ಷಿತ್ ಕೊಪ್ಪಳ, ರಮೇಶ್ ಹಗರಿಬೊಮ್ಮನಹಳ್ಳಿ, ನವೀನ್‍ಪ್ರತಾಪ್ ಚನ್ನಗಿರಿ ಇವರು ಉತ್ತಮವಾಗಿ ಅಭಿನಯಿಸಿ ಪ್ರೇಕ್ಷಕರ ಮೆಚ್ಚುಗೆ ಪಡೆದರು. ಧಾತ್ರಿ ರಂಗಸಂಸ್ಥೆಯ ನೀನಾಸಂ ಮಂಜು, ಶಂಭುಲಿಂಗೇಶ್ವರ ಟ್ರಸ್ಟ್‍ನ ಆಡಳಿತ ಮಂಡಳಿಯವರು, ಬಸವಬಳಗದ ಸದಸ್ಯರು, ಸುತ್ತಲಿನ ಗ್ರಾಮಗಳ ನಾಟಕ ಪ್ರೇಮಿಗಳು ಕಲಾಸಕ್ತರು, ಶಾಲಾ ವಿದ್ಯಾರ್ಥಿಗಳು ಇದ್ದರು.