ಸಿರಿಗೆರೆ ತರಳಬಾಳು ಮಠದಿಂದ ಪರಿಸರ ಸಂರಕ್ಷಣೆ

 ದಾವಣಗೆರೆ. ನ.೨೫; ಸಿರಿಗೆರೆ ತರಳಬಾಳು ಮಠವು ಸಹ ಪರಿಸರದ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸುತ್ತಿದೆ, ಕೆರೆಗಳ ಸಂರಕ್ಷಣೆ, ಜಲ ಸಮೃದ್ಧಿ ಬಗ್ಗೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಸುತ್ತಮುತ್ತಲ ಪರಿಸರ ಸ್ವಚ್ಛವಾಗಿರಬೇಕು, ಶೌಚಾಲಯ ಬಳಕೆಯನ್ನು ಜನರ ರೂಢಿ ಮಾಡಿಕೊಳ್ಳಬೇಕು ಎಂಬ ಸಂದೇಶವನ್ನು ನೀಡುತ್ತಾ ವಿಶ್ವ ಶೌಚಾಲಯ ದಿನದ ನೆನಪಿಗಾಗಿ ಭಿತ್ತಿ ಪತ್ರವನ್ನು ಬಿಡುಗಡೆಗೊಳಿಸಿದರು.ಅವರು ಸಿರಿಗೆರೆಯಲ್ಲಿ ಬಿ. ಲಿಂಗಯ್ಯ ವಸತಿ ಪದವಿ ಪೂರ್ವ ಕಾಲೇಜು ಪಠ್ಯಪೂರಕ ಮತ್ತು ರಾಷ್ಟ್ರೀಯ ಸೇವಾ ಯೋಜನೆ ಚಟುವಟಿಕೆಗಳ ಉದ್ಘಾಟನೆ ಸಮಾರಂಭದಲ್ಲಿ ವಿಶ್ವ ಶೌಚಾಲಯ ದಿನದ ನೆನಪಿಗಾಗಿ ಮಾತನಾಡಿದರು.ರೊಟೇರಿಯನ್ ವೆಂಕಟೇಶ ಶೆಟ್ಟರು ಮಾತನಾಡುತ್ತಾ ಶೌಚಾಲಯಗಳ ಬಗ್ಗೆ ಗ್ರಾಮೀಣ ಮಕ್ಕಳಲ್ಲಿ ಜಾಗೃತಿ ಮೂಡಿಸಬೇಕು. ಬಯಲು ಶೌಚಮುಕ್ತ ಗ್ರಾಮಗಳನ್ನಾಗಿ ಮಾಡಿಕೊಳ್ಳಬೇಕು, ಸ್ವಚ್ಚತೆಯ ಅರಿವು ಹೆಚ್ಚಾದಷ್ಟು ಆರೋಗ್ಯ ನೆಮ್ಮದಿ ದೊರೆಯುವುದು ಎಂದರು.ಬಯಲಿನಲ್ಲಿ ಶೌಚ ಮಾಡುವುದರಿಂದ ಮನುಷ್ಯನ ಮಲದಿಂದ ಹರಡುವ ಕಾಯಿಲೆಗಳು, ಜೀವವನ್ನೇ ಕಸಿದುಕೊಳ್ಳುವಷ್ಟು ಮಾರಕವಾಗಿರುತ್ತವೆ. ಇಷ್ಟೇ ಅಲ್ಲದೆ ಸಾಂಕ್ರಾಮಿಕ ಕಾಯಿಲೆಗಳು ಹರಡಲೂ ಕಾರಣವಾಗುತ್ತವೆ, ಆರೋಗ್ಯವೇ ಏರುಪೇರಾಗುತ್ತದೆ. ಮನುಷ್ಯನ ಆರೋಗ್ಯವಷ್ಟೇ ಅಲ್ಲದೇ ಸಾಮಾಜಿಕ ಬೆಳವಣಿಗೆ, ದೇಶದ ಶೈಕ್ಷಣಿಕ, ಆರ್ಥಿಕ ವ್ಯವಸ್ಥೆಯ ಮೇಲೂ ಹೊಡೆತ ಬೀಳುತ್ತದೆ. ಬಯಲು ಶೌಚದಿಂದ ಹರಡುವ ಕಾಯಿಲೆಯಿಂದ ಮಕ್ಕಳು ಹೆಚ್ಚು ಸಮಸ್ಯೆ ಎದುರಿಸುತ್ತಾರೆ ಎಂದರು. ಸುರಕ್ಷಿತ ಶೌಚಾಲಯವಿಲ್ಲದೆ ಶೌಚಕ್ಕೆ ತೆರಳಲು ಮಹಿಳೆಯರು ಕತ್ತಲಾಗುವುದನ್ನೇ ಕಾಯುವಂತಾಗಿದೆ. ಇದು ಅವರ ಜೀವವನ್ನೇ ಸವಾಲಿಗೆ ಒಡ್ಡಿದಂತೆ. ರಾತ್ರಿ ವೇಳೆ ವಿಷ ಜಂತುಗಳ ದಾಳಿಯೂ ಮಹಿಳೆಯರಿಗೆ ಮಾರಕವಾಗಿದೆ ಎಂದರು.ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾಧ್ಯಕ್ಷರಾದ ಡಾ. ಎಚ್. ಕೆ. ಎಸ್. ಸ್ವಾಮಿ ಅವರು ಮಾತನಾಡುತ್ತಾ ಮಠಗಳು ಜನಜಾಗೃತಿಯಲ್ಲಿ ಹೆಚ್ಚಿನ ಪ್ರಭಾವ ಬೀರುತ್ತವೆ. ಜಗದ್ಗುರುಗಳ ಸನ್ನಿಧಿಗೆ ಬರುವಂತಹ ಭಕ್ತರಿಗೆ ಶೌಚಾಲಯ ಬಳಕೆಯಿಂದ ಸ್ವಚ್ಛ ಪರಿಸರವನ್ನು ಇಟ್ಟುಕೊಳ್ಳುವುದರ ಬಗ್ಗೆ ಭಿತ್ತಿಪತ್ರಗಳ ಪ್ರದರ್ಶನ ಪ್ರಭಾವಶಾಲಿಯಾಗಿರುತ್ತದೆ, ಕಡಿಮೆ ಸಮಯದಲ್ಲಿ ಹೆಚ್ಚು ಜನರಿಗೆ ತಲುಪಿಸುವಂತಹ ದೊಡ್ಡದೊಡ್ಡ ವೇದಿಕೆಗಳನ್ನು ನಾವು ಬಳಕೆ ಮಾಡಿ, ಜನರಲ್ಲಿ ಶೌಚಾಲಯದ ಬಗ್ಗೆ ಜಾಗೃತಿ ಮೂಡಿಸಬೇಕು ಎಂದರು. ವಿದ್ಯಾರ್ಥಿಗಳು ವಿಶ್ವ ಶೌಚಾಲಯ ದಿನದ ಜಾಗೃತಿ ಭಿತ್ತಿ ಪತ್ರಗಳ ಪ್ರದರ್ಶನ ಮಾಡಿ ಜನರಲ್ಲಿ ಅರಿವು ಮೂಡಿಸಿದರು. ಕಾರ್ಯಕ್ರಮದಲ್ಲಿ ತರಳಬಾಳು ವಿದ್ಯಾಸಂಸ್ಥೆಯ ಪ್ರಾಚಾರ್ಯರು, ಸ್ಥಳೀಯ ಸಲಹಾ ಸಮಿತಿ ಸದಸ್ಯರು, ನೌಕರರ ಬಳಗ ಮತ್ತು ವಿದ್ಯಾರ್ಥಿವೃಂದ ಹಾಜರಿದ್ದರು.