ಸಿರಿಗೆರೆ ತರಳಬಾಳು ಕೋವಿಡ್ ಕೇರ್ ಸೆಂಟರ್ ಉದ್ಘಾಟನೆ

ಚಿತ್ರದುರ್ಗ,ಜೂ.3; ಕಾಣದ ವೈರಿ ಕೊರೊನಾ ಮಹಾಮಾರಿ ಎದುರಿಸಲು ಸಮಾಜ, ಸರ್ಕಾರ ಸೇರಿದಂತೆ ಪ್ರತಿಯೊಬ್ಬ ನಾಗರಿಕರೂ ಸಹ ಜಾಗೃತಿ ಮೂಡಿಸುವ ಜೊತೆಗೆ ಸ್ವಯಂ ಶಿಸ್ತು ಕಾಪಾಡಿಕೊಂಡು ಸಾಮಾಜಿಕ ಸ್ವಾಸ್ಥ್ಯ ಕಾಪಾಡುವ ಕೆಲಸ ಮಾಡಬೇಕು ಎಂದು ಗೃಹ ಸಚಿವರಾದ ಬಸವರಾಜ್ ಬೊಮ್ಮಾಯಿ ಅಭಿಪ್ರಾಯಪಟ್ಟರು.
ಚಿತ್ರದುರ್ಗ ತಾಲ್ಲೂಕಿನ ಸಿರಿಗೆರೆ ಗ್ರಾಮದ ಶಿವಕುಮಾರ ಬಾಲಕರ ನಿಲಯದಲ್ಲಿ ಬುಧವಾರ ಜಿಲ್ಲಾಡಳಿತ ಮತ್ತು ಆರ್.ಪ್ರವೀಣ್ ಚಂದ್ರ ಜಾನ್‍ಮೈನ್ಸ್ ಮಾಲೀಕರು ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ತರಳಬಾಳು ಕೋವಿಡ್ ಕೇರ್ ಸೆಂಟರ್ ಉದ್ಘಾಟಿಸಿ ಅವರು ಮಾತನಾಡಿದರು.
ಕೋವಿಡ್ ಎರಡನೇ ಅಲೆಯು ಬಹಳಷ್ಟು ಆತಂಕ ಹಾಗೂ ಸಾವು ನೋವುಗಳನ್ನು ತಂದಿದೆ. ದಿನ ನಿತ್ಯದ ಬದುಕನ್ನು ಛಿದ್ರಗೊಳಿಸಿದೆ. ರೈತ, ವೈದ್ಯರು, ಸಾಹಿತಿ, ಶಿಕ್ಷಕರು,  ಮಕ್ಕಳು ಹೀಗೆ ಎಲ್ಲಾ ವರ್ಗದ ಜನರ ಬದುಕನ್ನು ಕಸಿದುಕೊಂಡಿದೆ ಎಂದು ಹೇಳಿದರು.
ಕೋವಿಡ್-19 ಸೋಂಕಿತರು ಕೋವಿಡ್ ಆರೈಕೆ ಕೇಂದ್ರಗಳಿಗೆ ದಾಖಲಾಗುವುದರಿಂದ ಬಹಳ ಬೇಗ ಆರೋಗ್ಯ ಸುಧಾರಿಸಿ ಕೋವಿಡ್‍ನಿಂದ ಗುಣಮುಖರಾಗಲು ಸಾಧ್ಯವಾಗುತ್ತದೆ. ಕೋವಿಡ್ ಕೇರ್ ಸೆಂಟರ್‍ನಲ್ಲಿ ವೈದ್ಯರು, ಶುಶ್ರೂಷಕರು ಆತ್ಮಸ್ಥೈರ್ಯ ತುಂಬುವುದರ ಜೊತೆಯಲ್ಲಿ ಆರೋಗ್ಯದ ಕಾಳಜಿಗೆ ಸ್ಪಂದಿಸುತ್ತಾರೆ ಎಂದು ಹೇಳಿದರು.  
ತರಳಬಾಳು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರು ಸಮಾಜಮುಖಿ ಕೆಲಸದ ವೇಳೆಯಲ್ಲಿ ಬಿಡುವು ಮಾಡಿಕೊಂಡು ಕೋವಿಡ್-19 ಸೋಂಕಿತರ ಆರೈಕೆಗಾಗಿ ಸದಾ ಅವರ ಫೋನ್‍ಗೆ ಕರೆ ಮಾಡಿ ಆರೋಗ್ಯ ವಿಚಾರಿಸಿ ಧೈರ್ಯ ತುಂಬುತ್ತಿರುವುದು ಸಂತೋಷ ತಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಅನಿರೀಕ್ಷಿತ ಭೇಟಿ ನೀಡಿದ ಗೃಹ ಸಚಿವರು ಹಾಗೂ ಕೃಷಿ ಸಚಿವರು ತರಳಬಾಳು ಕೋವಿಡ್-19 ಸೆಂಟರ್‍ನ ಉದ್ಘಾಟನೆ ಮಾಡುವುದರೊಂದಿಗೆ ಸೋಂಕಿತರಿಗೆ ಧೈರ್ಯ, ಆತ್ಮವಿಶ್ವಾಸ ಬಂದಿದೆ ಎಂದರೆ ತಪ್ಪಾಗಲಾರದು ಎಂದು ಹೇಳಿದರು.
ಕೊರೊನಾ ನಗರ, ಗ್ರಾಮೀಣ ಎಲ್ಲಾ ಸಾರ್ವಜನಿಕರ ಬದುಕ ಕಸಿದುಕೊಳ್ಳುವುದರ ಜೊತೆಗೆ ಮಕ್ಕಳನ್ನು ತಬ್ಬಲಿಯನ್ನಾಗಿ ಮಾಡಿದೆ. ಎಲ್ಲಾ ರಾಷ್ಟ್ರಗಳಿಗೆ ಕೊರೊನಾ ಒಂದೇ ವೈರಿಯಾಗಿದೆ. 30 ರಿಂದ 40 ವರ್ಷದ ಯುವಕರೇ ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್‍ಗೆ ಬಲಿಯಾಗುತ್ತಿರುವುದು ದುಃಖದ ಸಂಗತಿಯಾಗಿದೆ. ಕೋವಿಡ್ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಮುಂಜಾಗ್ರತಾ ಕ್ರಮ ಅನುಸರಿಸುವುದರ ಜೊತೆಗೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಹೇಳಿದರು.
ದಾವಣಗೆರೆ ಸಂಸದರಾದ ಜಿ.ಎಂ.ಸಿದ್ದೇಶ್ವರ್ ಮಾತನಾಡಿ, ತರಳಬಾಳು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯವರು ಕೊರೊನಾ ರೋಗಿಗಳ ಆರೋಗ್ಯದ ಕಡೆ ಗಮನವಿರಿಸಿ ಕೋವಿಡ್ ಸೋಂಕಿತರು, ವೈದ್ಯರು, ಪೋಲಿಸರು, ಆಶಾಕಾರ್ಯತೆರ್ಯರು ಹೀಗೆ ಪ್ರತಿನಿತ್ಯ ದಾಸೋದ ವ್ಯವಸ್ಥೆ ಮಾಡಿದ್ದಾರೆ. ವಿಶೇಷವಾಗಿ ಸೋಂಕಿತರ ಆರೋಗ್ಯದ ಕಡೆ ಗಮನವಿರಿಸುವುದರ ಜೊತೆಯಲ್ಲಿ ಸದಾ ಅವರ ಆರೋಗ್ಯದ ಬಗ್ಗೆ ವಿಚಾರಿಸಿ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.
ಇಆರ್‍ಎಂ ಗ್ರೂಪ್ಸ್ ಮಾಲೀಕರಾದ ಆರ್.ಪ್ರವೀಣ ಚಂದ್ರ ಅವರು ಸಿರಿಗೆರೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ರೆಫ್ರಿಜರೇಟರ್, ಜನರೇಟರ್, 20 ಹಾಸಿಗೆ, ಇಸಿಜಿ ಉಪಕರಣಗಳು, ಆಕ್ಸಿಜನ್ ಕಾನ್ಸ್‍ಟ್ರೇಟರ್, 8 ಪಲ್ಸ್ ಆಕ್ಸೀಮೀಟರ್, ಗೀಸರ್, ಡ್ರಿಂಕಿಂಗ್ ವಾಟರ್ ಹೀಟರ್, 100 ಬೆಡ್‍ಶೀಟ್, 2000 ಸರ್ಜಿಕಲ್ ಹ್ಯಾಂಡ್ ಗ್ಲೌಸ್ ಹಾಗೂ ಸ್ಯಾನಿಟೈಸರ್‍ಗಳನ್ನು ಒಟ್ಟು ರೂ.36.72 ಲಕ್ಷ ವೆಚ್ಚದಲ್ಲಿ ಕೊಡುಗೆಯಾಗಿ ನೀಡಿದರು.
ಕಾರ್ಯಕ್ರಮದಲ್ಲಿ ಕೃಷಿ ಸಚಿವರಾದ ಬಿ.ಸಿ.ಪಾಟೀಲ್, ಹೊಳಲ್ಕೆರೆ ಶಾಸಕರು ಹಾಗೂ ಕೆಎಸ್‍ಆರ್‍ಟಿಸಿ ನಿಗಮದ ಅಧ್ಯಕ್ಷರಾದ ಎಂ.ಚಂದ್ರಪ್ಪ, ಚಿತ್ರದುರ್ಗ ಸಂಸದರಾದ ಎ.ನಾರಯಣಸ್ವಾಮಿ, ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಜಿ.ರಾಧಿಕಾ, ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ.ಕೆ.ನಂದಿನಿ ದೇವಿ, ತಹಶೀಲ್ದಾರ್ ವೆಂಕಟೇಶಯ್ಯ ಸೇರಿದಂತೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಫೋಟೋ ವಿವರ: ಚಿತ್ರದುರ್ಗ ತಾಲ್ಲೂಕಿನ ಸಿರಿಗೆರೆ ಗ್ರಾಮದ ಶಿವಕುಮಾರ ಬಾಲಕರ ನಿಲಯದಲ್ಲಿ ಬುಧವಾರ ಜಿಲ್ಲಾಡಳಿತ ಮತ್ತು ಆರ್.ಪ್ರವೀಣ್ ಚಂದ್ರ ಜಾನ್‍ಮೈನ್ಸ್ ಮಾಲೀಕರು ಇವರ ಸಂಯುಕ್ತಾಶ್ರಯದಲ್ಲಿ ತರಳಬಾಳು ಕೋವಿಡ್ ಕೇರ್ ಸೆಂಟರ್ ಉದ್ಘಾಟಿಸಲಾಯಿತು.