ಸಿರಿಗೆರೆಯಲ್ಲಿ ಮೂರು ದಿನಗಳ ಸಂಭ್ರಮದ ಕನ್ನಡ ನುಡಿಹಬ್ಬ

 ಸಂಜೆವಾಣಿ ವಾರ್ತೆ

ಸಿರಿಗೆರೆ ಅ.೩೦; ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ ಮತ್ತು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಇಲ್ಲಿನ ಶ್ರೀ ಗುರುಶಾಂತೇಶ್ವರ ದಾಸೋಹ ಮಂಟಪದಲ್ಲಿ  ನ. ೩.೪ ಮತ್ತು ೫ರಂದು ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಮೂರು ದಿನಗಳ ಕಾಲ ಕನ್ನಡ ನುಡಿಹಬ್ಬ ಜರುಗಲಿದೆ. ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ ದಿವ್ಯ ಸಾನ್ನಿಧ್ಯದಲ್ಲಿ ವಿಚಾರ ಗೋಷ್ಠಿ, ಕವಿಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಕನ್ನಡ ಸಾಹಿತ್ಯ ಪರಂಪರೆ,ಕವಿಗೋಷ್ಠಿ , ವಚನ ಸಾಹಿತ್ಯ ಗೋಷ್ಠಿ ಮತ್ತು ಮರೆಯಲಾಗದ ಮಹನೀಯರು  ಎಂಬ ಗೋಷ್ಠಿಗಳಲ್ಲಿ ನಾಡಿನ ಹೆಸರಾಂತ ವಿದ್ವಾಂಸರು ಭಾಗವಹಿಸುವವರು. ನ.  ೩ರ ಶುಕ್ರವಾರ ಬೆಳಗ್ಗೆ ೮-೦೦ಕ್ಕೆ ವಿವಿಧ ಜನಪದ ಕಲಾ ತಂಡಗಳೊಂದಿಗೆ ಭುವನೇಶ್ವರಿ ದೇವಿ ಪ್ರತಿಮೆ ಮೆರವಣಿಗೆ  ನಡೆಯುತ್ತದೆ. ಆನಂತರ ಧ್ವಜಾರೋಹಣ ಮತ್ತುಸಿರಿಗೆರೆಯ  ವಿವಿಧ ಶಾಲಾ ಕಾಲೇಜುಗಳ ಐದು ಸಾವಿರ ವಿದ್ಯಾರ್ಥಿಗಳಿಂದ ನಾಡಗೀತೆ  ಮತ್ತು ಕನ್ನಡ ಗೀತೆಗಳ ಗಾಯನ ನಡೆಯಲಿದೆ.  ರಾಜ್ಯೋತ್ಸವವನ್ನು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕವಿ ಮೂಡ್ನಕೂಡು ಚಿನ್ನಸ್ವಾಮಿ  ಉದ್ಘಾಟಿಸಲಿದ್ದಾರೆ. ಪ್ರತಿದಿನ ಸಂಜೆ ನಾಡಿನ ಹೆಸರಾಂತ ಕಲಾತಂಡಗಳಿಂದ ನಾಟಕ, ಸಂಗೀತ, ನೃತ್ಯ ಕಾರ್ಯಕ್ರಮಗಳಿರುತ್ತವೆ. ನ. ೫ರ ಸಂಜೆ ಸಮಾರೋಪ ಸಮಾರಂಭದಲ್ಲಿ ಚಿಕ್ಕಮಗಳೂರಿನ ಪ್ರಸಿದ್ಧ ಸಂಸ್ಕೃತಿ ಚಿಂತಕ ಡಾ. ಜೆ ಪಿ ಕೃಷ್ಣೆಗೌಡರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಇದೇ ಸಂದರ್ಭದಲ್ಲಿ ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಯ ೨೦೨೩ರ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರನ್ನು ಗೌರವಿಸಲಾಗುವುದು. ಪ್ರೊ.ಎಸ್ ಬಿ ರಂಗನಾಥ, ಡಾ. ವಾಮದೇವಪ್ಪ, ಬಿ ವಾಮದೇವಪ್ಪ, ಕೆ ಎಂ ಶಿವಸ್ವಾಮಿ, ಸೂರಿ ಶ್ರೀನಿವಾಸ, ಕೆ ಎಸ್ ಸಿದ್ಧಲಿಂಗಪ್ಪ, ಡಿ ಮಂಜುನಾಥ್ ಮುಂತಾದವರು ಭಾಗವಹಿಸಲಿದ್ದಾರೆ.ನ೩ ರಂದು ೧೦-೩೦ಕ್ಕೆ ಕನ್ನಡ ಸಾಹಿತ್ಯ ಮತ್ತು ಪರಂಪರೆಯ ಗೋಷ್ಠಿಯಲ್ಲಿ ಕನ್ನಡ ಪ್ರಾಚೀನ ಸಾಹಿತ್ಯ ಸಿರಿ ಎಂಬ ವಿಷಯದ ಬಗ್ಗೆ ಡಾ. ಎಚ್ ಎಸ್ ಸತ್ಯನಾರಾಯಣ , ನಡುಗನ್ನಡ ಸಾಹಿತ್ಯದಲ್ಲಿ ಜೀವನ ಮೌಲ್ಯಗಳ ಬಗ್ಗೆ ಡಾ. ಶುಭ ಮರವಂತೆ, ಬಂಡಾಯ ಮತ್ತು  ದಲಿತ ಕಾವ್ಯದ ವಿಭಿನ್ನ ನೆಲೆಗಳು ಕುರಿತು ಡಾ. ಟಿ ಯಲ್ಲಪ್ಪ  ಹಾಗೂ ಕನ್ನಡ ಮಹಿಳಾ ಸಾಹಿತ್ಯ ನಡೆದು ಬಂದ ದಾರಿ ಕುರಿತು ಸಿ ಬಿ ಶೈಲ ಜಯಕುಮಾರ್ ಮಾತನಾಡಲಿದ್ದಾರೆ.