ಸಿರಾ ಬಿಜೆಪಿ ಗೆಲುವು ನಿಶ್ಚಿತ: ದೇವರಾಜು

ಚೇಳೂರು, ನ. ೧- ಸಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಡಾ. ರಾಜೇಶ್‌ಗೌಡ ಅವರ ಗೆಲುವು ನಿಶ್ಚಿತ. ಸಿರಾದಲ್ಲಿ ಕಾಡುಗೊಲ್ಲರು ಬಿಜೆಪಿ ಪರ ನಿಂತಿದ್ದು ನಮ್ಮ ಅಭ್ಯರ್ಥಿ ಗೆಲುವು ಖಚಿತ ಎಂದು ಕಾಡುಗೊಲ್ಲ ಸಂಘದ ತಾಲ್ಲೂಕು ಅಧ್ಯಕ್ಷ ಹಾಗೂ ಹೈಕೋರ್ಟ್ ವಕೀಲ ದೇವರಾಜು ತಿಳಿಸಿದರು.
ತಾಲ್ಲೂಕಿನ ಮೇಳೆಕೋಟೆ ಗೊಲ್ಲರಹಟ್ಟಿ, ಮದಕ್ಕನಹಳ್ಳಿ ಗೊಲ್ಲರಹಟ್ಟಿಗಳಲ್ಲಿ ಬಿಜೆಪಿ ಅಭ್ಯರ್ಥಿ ಪರ ಮತಯಾಚನೆ ಮಾಡಿ ಮಾತನಾಡಿದ ಅವರು, ರಾಜ್ಯದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯೂಡಿವರಪ್ಪನವರು ಕಾಡುಗೊಲ್ಲರನ್ನು ನಿಗಮ ಮಂಡಳಿಗೆ ಸೇರಿಸಿದ್ದು ಮುಂದೆ ನಮ್ಮ ಜನಾಂಗವನ್ನು ಎಸ್‌ಟಿಗೆ ಸೇರಿಸಲಿದ್ದಾರೆ ಎಂಬ ಭರವಸೆ ನಮಗಿದೆ. ನಿಗಮ ಮಂಡಳಿ ಮಾಡಿರುವುದರಿಂದ ರಾಜ್ಯದಲ್ಲಿರುವ ಎಲ್ಲ ಗೊಲ್ಲರಹಟ್ಟಿಗಳು ಅಭಿವೃದ್ದಿಯಾಗಲಿದ್ದು, ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇರುವುದರಿಂದ ಸಿರಾದಲ್ಲಿ ರಾಜೇಶ್‌ಗೌಡ ಗೆಲ್ಲುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದರು.
ಸಿರಾ ಭಾಗದಲ್ಲಿ ಸುಮಾರು ೩೦ ಸಾವಿರದಷ್ಟು ಗೊಲ್ಲ ಸಮುದಾಯವಿದ್ದು, ಈ ಬಾರಿ ಅವರ ಒಲವು ಬಿಜೆಪಿ ಕಡೆಗಿದೆ. ಕೊಟ್ಟ ಭರವಸೆಯನ್ನು ಮುಖ್ಯಮಂತ್ರಿ ಯಡಿಯೂರಪ್ಪನವರು ಈಡೇರಿಸಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ತಿಮ್ಮಯ್ಯ, ಹಾಲಿಗೌಡ್ರು, ತಮ್ಮಯ್ಯ, ಶಿವಲಿಂಗಯ್ಯ, ಕೃಷ್ಣಮೂರ್ತಿ, ಮಾರಣ್ಣ ಸೇರಿದಂತೆ ಕಾಡುಗೊಲ್ಲರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.