ಸಿರಾ, ಜಯದ ವಿಶ್ವಾಸದಲ್ಲಿ ರಾಜೇಶ್

ತುಮಕೂರು, ಅ. ೨೬- ನಗರದ ಸಿದ್ದಗಂಗಾ ಮಠಕ್ಕೆ ಸಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಬಿಜೆಪಿ ಅಭ್ಯರ್ಥಿ ಡಾ. ರಾಜೇಶ್ ಅವರು ಭೇಟಿ ನೀಡಿ ಲಿಂಗೈಕ್ಯ ಹಿರಿಯ ಶ್ರೀಗಳಾದ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ ಗದ್ದುಗೆ ದರ್ಶನ ಪಡೆದು ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು.
ನ. ೩ ರಂದು ಸಿರಾ ವಿಧಾನಸಭಾ ಉಪಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಬಿರುಸಿನ ಪ್ರಚಾರದಲ್ಲಿ ತೊಡಗಿರುವ ಡಾ. ರಾಜೇಶ್‌ಗೌಡ ಅವರು ವಿಜಯದಶಮಿಯಾದ ಇಂದು ಶ್ರೀಮಠಕ್ಕೆ ಭೇಟಿ ನೀಡಿ ಧ್ಯಾನ ಮಂದಿರದಲ್ಲಿ ಕೆಲ ಹೊತ್ತು ಧ್ಯಾನ ಮಾಡಿದರು.
ಇದಕ್ಕೂ ಹಿರಿಯ ಶ್ರೀಗಳ ಗದ್ದುಗೆ ಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಿ ಉಪಚುನಾವಣೆಯಲ್ಲಿ ಗೆಲುವಿನ ಮಾಲೆ ತಮ್ಮ ಕೊರಳಿಗೆ ಬೀಳುವಂತೆ ಪ್ರಾರ್ಥಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿರಾದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಹಳೆಯ ಹುರಿಯಾಳುಗಳು. ಹಾಗಾಗಿ ಈ ಬಾರಿ ಬದಲಾವಣೆ ಬಯಸಿದ್ದು, ಹೊಸ ಮುಖವಾಗಿರುವ ತಮಗೆ ಮತ ನೀಡಿ ಗೆಲ್ಲಿಸುತ್ತಾರೆ ಎಂದರು.
ಚುನಾವಣೆಯಲ್ಲಿ ಬಿಜೆಪಿಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಎರಡೂ ಪಕ್ಷಗಳು ಪ್ರತಿ ಸ್ಪರ್ಧಿಗಳೆ. ಕಾಂಗ್ರೆಸ್ ಅಭ್ಯರ್ಥಿ ಜಯಚಂದ್ರ ಅವರು ೬ ಬಾರಿ ಶಾಸಕರಾಗಿ, ಸಚಿವರಾಗಿದ್ದವರು. ಹಾಗಾಗಿ ಈ ಚುನಾವಣೆಯಲ್ಲಿ ತೀವ್ರ ಹಣಾಹಣಿ ಇದ್ದೇ ಇದೆ. ಯಾರಿಗೂ ಸಹ ಸುಲಭದ ಜಯ ದೊರೆಯುವುದಿಲ್ಲ ಎಂದರು.
ನಾನು ರಾಜಕೀಯಕ್ಕೆ ಹೊಸಬನಾಗಿದ್ದರೂ ನನ್ನ ತಂದೆ ಶಾಸಕರು, ಸಂಸದರಾಗಿದ್ದವರು. ನನಗೂ ರಾಜಕೀಯದ ಹಿನ್ನೆಲೆಯಿದೆ. ಅಲ್ಲದೆ ವೈದ್ಯನಾಗಿ ಜನರ ಒಡನಾಟ ಹೊಂದಿದ್ದೇನೆ. ಕ್ಷೇತ್ರದಲ್ಲಿ ನಾನು ಚಿರಪರಿಚಿತನಾಗಿದ್ದು, ಈ ಬಾರಿ ನೂರಕ್ಕೆ ನೂರರಷ್ಟು ನನ್ನ ಕೊರಳಿಗೆ ವಿಜಯದ ಮಾಲೆಯನ್ನು ಕ್ಷೇತ್ರದ ಜನತೆ ಹಾಕಲಿದ್ದಾರೆ ಎಂಬ ಆತ್ಮವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.
ಕಳೆದ ೪ ವರ್ಷದಿಂದ ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದೇನೆ. ಕ್ಷೇತ್ರದ ಜನತೆಗೆ ರಾಜೇಶ್‌ಗೌಡ ಯಾರು, ಏನು ಎಂಬುದು ಚೆನ್ನಾಗಿ ತಿಳಿದಿದ ಎಂದರು.
ಈ ಸಂದರ್ಭದಲ್ಲಿ ಶಿವಕುಮಾರ್, ನಾಗದೇವ್, ಕರಣ್ ಮತ್ತಿತರರು ಉಪಸ್ಥಿತರಿದ್ದರು.