ಸಿರಾ ಕೈ ಗೆಲುವು ನಿಶ್ಚಿತ: ಕೆಎನ್‌ಆರ್

ತುಮಕೂರು, ನ. ೯- ಸಿರಾ ವಿಧಾನಸಭಾ ಕ್ಷೇತ್ರದಲ್ಲಿ ೧೦ ಸಾವಿರ ಮತಗಳ ಅಂತರದಿಂದ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂದು ಮಾಜಿ ಶಾಸಕ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್. ರಾಜಣ್ಣ ವಿಶ್ವಾಸ ವ್ಯಕ್ತಪಡಿಸಿದರು.
ಯಾರು ಏನೇ ಹೇಳಿದರೂ ನಾವು ಗೆದ್ದೇ ಗೆಲ್ಲುತ್ತೇವೆ. ಅಹಿಂದ ಮತ ಬ್ಯಾಂಕ್ ಕಾಂಗ್ರೆಸ್ ಅಭ್ಯರ್ಥಿ ಕೈ ಹಿಡಿದಿದೆ ಎಂದು ಅವರು ಹೇಳಿದರು.
ಜೆಡಿಎಸ್ ಕೂಡ ೩೦ ರಿಂದ ೩೫ ಸಾವಿರ ಮತ ಪಡೆಯುತ್ತದೆ. ಕುಮಾರಸ್ವಾಮಿ ಅವರು ಗೆಲುವಿನ ಹತ್ತಿರ ಬರುತ್ತೀವಿ ಎಂದಿದ್ದರು. ಆದರೆ ಗೆಲ್ಲುತ್ತೇವೆ ಎಂಬುದಾಗಿ ಹೇಳಿಲ್ಲ ಎಂದರು.
ಕೊನೆ ಘಳಿಗೆಯಲ್ಲಿ ಜೆಡಿಎಸ್ ಮತಗಳು ವ್ಯಾಪಾರದ ಮೂಲಕ ಬಿಜೆಪಿಗೆ ಹೋಗುತ್ತವೆ ಎಂದು ಕೊಂಡಿದ್ದರು. ಆದರೆ ಪಕ್ಷ ಉಳಿಸಿಕೊಳ್ಳುವುದಕ್ಕಾಗಿ ದೇವೇಗೌಡರೇ ಕ್ಷೇತ್ರಕ್ಕೆ ಬಂದು ಪ್ರಯತ್ನ ಮಾಡಿದ್ದಾರೆ. ಈ ಇಳಿ ವಯಸ್ಸಿನಲ್ಲೂ ಹಳ್ಳಿ ಹಳ್ಳಿಗೆ ಪ್ರಚಾರದ ಗಾಡಿಯಲ್ಲೇ ಹೋದರು. ಈ ವಯಸ್ಸಿನಲ್ಲಿ ಇಷ್ಟೊಂದು ಕಷ್ಟಪಟ್ಟು ಚುನಾವಣೆ ಮಾಡುತ್ತಿದ್ದಾರೆ ಎಂದು ನನಗೆ ಅನಿಸಿತು ಎಂದ ಅವರು, ನಾಮಕಾವಸ್ಥೆಗೆ ಅವರ ಮಕ್ಕಳು, ಮೊಮ್ಮಕ್ಕಳು ಬಂದಿರಬಹುದು. ಆದರೆ ದೇವೇಗೌಡರು ತೆಗೆದುಕೊಂಡಷ್ಟು ಶ್ರಮ, ಆ ಪಕ್ಷದ ಅಭ್ಯರ್ಥಿಯೂ ಕೂಡ ತೆಗೆದುಕೊಂಡಿಲ್ಲ. ಅವರ ಶ್ರಮಕ್ಕೆ ಆ ಪಕ್ಷದ ಗೌರವ ಉಳಿಯುವಷ್ಟು ಮತ ಬರುತ್ತವೆ ಎಂದು ದೇವೇಗೌಡರನ್ನು ಹಾಡಿ ಹೊಗಳಿದರು.
ಆಡಳಿತಾರೂಢ ಬಿಜೆಪಿ ಪಕ್ಷಕ್ಕೆ ದುಡ್ಡಿನ ಅಹಂ ಅಷ್ಟೆ. ಸರ್ಕಾರ ಇದೆ, ದುಡ್ಡು ಕೊಡ್ಡಿದ್ದೀವಿ, ಗೆದ್ದೇ ಬಿಟ್ವಿ ಎನ್ನುವ ಅಹಂ ಇದೆ. ಅವರಿಗೆ ಅವರ ನಂಬಿಕೆ ಸುಳ್ಳು ಎಂಬುದನ್ನು ಸಿರಾ ಜನರು ತೀರ್ಮಾನ ಹೊರ ಹಾಕುತ್ತಾರೆ ಎನ್ನುವ ವಿಶ್ವಾಸ ತಮಗಿದೆ ಎಂದು ಅವರು ಹೇಳಿದರು.
ಅಹಿಂದ ಮತದಾರರು ಕಾಂಗ್ರೆಸ್ ಪರ ಹೆಚ್ಚು ಒಲವು ತೋರಿದ್ದಾರೆ. ಈ ಬಾರಿ ಗೆಲುವು ನಮ್ಮದೇ. ಇದರಲ್ಲಿ ಯಾವುದೇ ಸಂದೇಹ ಬೇಡ ಎಂದು ಅವರು ಪುನರುಚ್ಚರಿಸಿದರು.
ಸಿಎಂ ಬದಲಾದರೂ ಅಚ್ಚರಿಯಿಲ್ಲ
ಉಪಚುನಾವಣೆ ಫಲಿತಾಂಶ ಏನೇ ಬಂದರೂ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬದಲಾವಣೆ ಮಾತ್ರ ನಿಶ್ಚಿತ ಎಂದು ಬಿಜೆಪಿಯವರೇ ಹೇಳುತ್ತಿದ್ದಾರೆ. ಹಾಗಾಗಿ ಮುಖ್ಯಮಂತ್ರಿಗಳ ಬದಲಾವಣೆಯಾದರೂ ಯಾರೂ ಆಶ್ಚರ್ಯಪಡಬೇಕಿಲ್ಲ ಎಂದರು.
ಬಿಜೆಪಿಯ ಹಿರಿಯ ಶಾಸಕರಾದ ಬಸವನಗೌಡ ಪಾಟೀಲ್ ಯತ್ನಾಳ್ ಈ ಹಿಂದೆ ಕೇಂದ್ರ ಸಚಿವರಾಗಿದ್ದವರು. ಪಕ್ಷದ ಹಿರಿಯ ನಾಯಕರಾಗಿದ್ದಾರೆ. ಅವರೇ ಸಿಎಂ ಬದಲಾವಣೆ ವಿಚಾರ ಪ್ರಸ್ತಾಪಿಸುತ್ತಿದ್ದಾರೆ ಎಂದರೆ ಏನೇ ಇದ್ದೇ ಇರುತ್ತದೆ. ಹೊಗೆಯಾಡಬೇಕು ಎಂದರೆ ಬೆಂಕಿ ಇದ್ದೇ ಇರಬೇಕು ಅಲ್ವಾ ಎಂದು ಅವರು ಪ್ರಶ್ನಿಸಿದರು.
ಮುಖ್ಯಮಂತ್ರಿಗಳ ಬದಲಾವಣೆ ಆಗುತ್ತದೆ ಎಂದು ಬಿಜೆಪಿಯ ಪ್ರಮುಖ ನಾಯಕರೇ ನನಗೆ ಹೇಳಿದ್ದಾರೆ. ಆದರೆ ಅವರು ಹೆಸರನ್ನು ಹೇಳಲು ಸಾಧ್ಯವಿಲ್ಲ ಎಂದು ಅವರು ಪ್ರತಿಕ್ರಿಯಿಸಿದರು.