ಸಿರಾ ಉಪ-ಸಮರ ಜಯಚಂದ್ರ ಕೈ ಅಭ್ಯರ್ಥಿ

ಬೆಂಗಳೂರು, ಸೆ. ೧೬- ಮುಂಬರುವ ಸಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಮಾಜಿ ಸಚಿವ ಟಿ.ಬಿ. ಜಯಚಂದ್ರ ಅವರನ್ನು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲು ಕಾಂಗ್ರೆಸ್ ತೀರ್ಮಾನ ಕೈಗೊಂಡಿದೆ.
ಸಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಸಂಬಂಧ ಪ್ರದೇಶ ಕಾಂಗ್ರೆಸ್ ಕಚೇರಿಯಲ್ಲಿಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ರವರ ಅಧ್ಯಕ್ಷತೆಯಲ್ಲಿ ನಡೆದ ಪಕ್ಷದ ಹಿರಿಯ ನಾಯಕರು ಹಾಗೂ ತುಮಕೂರು ಜಿಲ್ಲಾ ಕಾಂಗ್ರೆಸ್ ಮುಖಂಡರ ಸಭೆಯಲ್ಲಿ ಸಿರಾ ಉಪಚುನಾವಣೆಯಲ್ಲಿ ಜಯಚಂದ್ರ ರವರನ್ನೇ ಅಭ್ಯರ್ಥಿಯನ್ನಾಗಿಸುವ ತೀರ್ಮಾನ ಕೈಗೊಳ್ಳಲಾಗಿದೆ.
ಈ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಇಂದಿನ ಸಭೆಯಲ್ಲಿ ಉಪಚುನಾವಣೆಯಲ್ಲಿ ಟಿ.ಬಿ. ಜಯಚಂದ್ರ ರವರನ್ನು ಅಭ್ಯರ್ಥಿಯನ್ನಾಗಿಸಬೇಕು ಎಂದು ಪಕ್ಷದ ಹಿರಿಯ ಮುಖಂಡ ಕೆ.ಎನ್. ರಾಜಣ್ಣ ಅಭಿಪ್ರಾಯ ವ್ಯಕ್ತಪಡಿಸಿದ್ದು, ಅವರ ಅಭಿಪ್ರಾಯಕ್ಕೆ ಸಭೆಯಲ್ಲಿ ಎಲ್ಲ ನಾಯಕರು ಸಮ್ಮತಿ ವ್ಯಕ್ತಪಡಿಸಿದ್ದು, ಅದರಂತೆ ಸಿರಾ ಉಪಚುನಾವಣೆಯಲ್ಲಿ ಟಿ.ಬಿ. ಜಯಚಂದ್ರ ಅವರು ಪಕ್ಷದ ಅಭ್ಯರ್ಥಿಯಾಗುವರು ಎಂದು ಹೇಳಿದರು.
ಪಕ್ಷದ ರಾಜ್ಯ ನಾಯಕರ ಅಭಿಪ್ರಾಯವನ್ನು ವರಿಷ್ಠರ ಅನುಮೋದನೆಗೆ ಕಳುಹಿಸಿ ಅಧಿಕೃತವಾಗಿ ಟಿ.ಬಿ. ಜಯಚಂದ್ರ ಅವರ ಹೆಸರನ್ನು ಪ್ರಕಟಿಸಲಾಗುವುದು ಎಂದು ಅವರು ಹೇಳಿದರು.
ಸಿರಾ ಉಪಚುನಾವಣೆಯನ್ನು ಒಗ್ಗಟ್ಟಿನಿಂದ ಎದುರಿಸಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದ್ದು, ಅದರಂತೆ ಮಾಜಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅಧ್ಯಕ್ಷತೆಯಲ್ಲಿ ಚುನಾವಣಾ ಉಸ್ತುವಾರಿ ಸಮಿತಿಯನ್ನು ರಚಿಸಲಾಗಿದ್ದು, ಈ ಸಮಿತಿಗೆ ರಾಜಣ್ಣ ಅವರು ಸಹ ಅಧ್ಯಕ್ಷರಾಗಿರುತ್ತಾರೆ. ಎಲ್ಲ ನಾಯಕರುಗಳು ಒಂದಾಗಿ, ಒಗ್ಗಟ್ಟಿನಿಂದ ಚುನಾವಣೆಯಲ್ಲಿ ಕೆಲಸ ಮಾಡುತ್ತೇವೆ ಎಂದು ಹೇಳಿದರು
ಸಿರಾ ವಿಧಾನಸಭಾ ಉಪಚುನಾವಣೆಗೆ ಇಂದಿನಿಂದಲೇ ಪಕ್ಷದ ತಯಾರಿ ನಡೆದಿದೆ. ಎಲ್ಲ ನಾಯಕರುಗಳು ಒಗ್ಗಟ್ಟಾಗಿ ಪ್ರಚಾರ ನಡೆಸುತ್ತೇವೆ ಎಂದು ಅವರು ಹೇಳಿದರು.
ಸಿರಾ ವಿಧಾನಸಭೆಗೆ ಚುನಾವಣೆಗೆ ದಿನಾಂಕ ಪ್ರಕಟಣೆ ಬಾಕಿ ಇರುವ ಮುನ್ನವೇ ಕಾಂಗ್ರೆಸ್ ಪಕ್ಷ ಅಭ್ಯರ್ಥಿಯನ್ನು ಆಯ್ಕೆಗೊಳಿಸಿ ಚುನಾವಣಾ ಅಖಾಡಕ್ಕೆ ಇಳಿದಿದ್ದು, ಬಿಜೆಪಿ ಹಾಗೂ ಜೆಡಿಎಸ್ ಸೆಡ್ಡು ಹೊಡೆಯುವ ಉಮೇದಿನಲ್ಲಿದೆ.