ಸಿರಾ ಉಪಸಮರ: ೩೩೦ ಮತಗಟ್ಟೆ ಸ್ಥಾಪನೆ, ೧೫೮೮ ಮತಗಟ್ಟೆ ಅಧಿಕಾರಿಗಳ ನಿಯೋಜನೆ- ಡಿಸಿ

ತುಮಕೂರು, ನ. ೨- ಇಡೀ ರಾಜ್ಯದ ಗಮನ ಸೆಳೆದಿರುವ ಸಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಮತದಾನಕ್ಕೆ ಕ್ಷಣಗಣನೆ ಆರಂಭವಾಗಿದೆ.
ಉಪಚುನಾವಣೆಯನ್ನು ನಿಷ್ಪಕ್ಷಪಾತವಾಗಿ ನಡೆಸಲು ಜಿಲ್ಲಾಡಳಿತ ಕೋವಿಡ್ ಮುಂಜಾಗ್ರತೆಯಿಂದ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದು, ಸಿರಾ ಕ್ಷೇತ್ರದಲ್ಲಿ ೬ ವಲ್ನರೆಬಲ್, ೬೪ ಕ್ರಿಟಿಕಲ್ ಮತಗಟ್ಟೆಗಳು ಸೇರಿ ಒಟ್ಟು ೩೩೦ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಡಾ. ಕೆ. ರಾಕೇಶ್‌ಕುಮಾರ್ ತಿಳಿಸಿದರು. ಕ್ರಿಟಿಕಲ್ ಮತಗಟ್ಟೆಗಳಲ್ಲಿ ಮೈಕ್ರೋ ಅಬ್ಸರ್ವಱ್ಸ್, ವಿಡಿಯೋಗ್ರಾಪಿ, ವೆಬ್ ಕ್ಯಾಸ್ಟಿಂಗ್ ಮಾಡಿಸಲಾಗುವುದು ಎಂದು ಅವರು ಹೇಳಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿರಾ ಕ್ಷೇತ್ರದಲ್ಲಿ ೧೧೦೨೮೧ ಪುರುಷ ಮತದಾರರು, ೧೦೫೪೩೪ ಮಹಿಳಾ ಮತದಾರರು, ಇತರೆ ೧೦ ಸೇರಿ ಒಟ್ಟು ೨,೧೫,೭೨೫ ಮತದಾರರಿದ್ದಾರೆ ಎಂದರು.
ನಮೂನೆ-೧೨ ಡಿ ಅಡಿ ಅಂಚೆ ಮತಪತ್ರದ ಮೂಲಕ ೨೬೭೪ ಮಂದಿ ೮೦ ವರ್ಷ ಮೇಲ್ಪಟ್ಟವರು, ೨೦೪೨ ಅಂಗವಿಕಲರು, ೧೦೫ ಕೋವಿಡ್ ಸೋಂಕಿತರು ಸೇರಿ ೪೮೨೧ ಮಂದಿ ಮತ ಚಲಾಯಿಸಿದ್ದಾರೆ ಎಂದರು.
ಉಪಚುನಾವಣೆಯ ಕರ್ತವ್ಯಕ್ಕೆ ತುಮಕೂರು ಮತ್ತು ಗುಬ್ಬಿ ತಾಲ್ಲೂಕುಗಳಿಂದ ಮತಗಟ್ಟೆ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ನೇಮಿಸಲಾಗಿದ್ದು, ೩೩೦ ಮತಗಟ್ಟೆಗಳಿಗೆ ಒಟ್ಟು ೧,೫೮೮ ಮಂದಿ ಮತಗಟ್ಟೆ ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದರು.
ಚುನಾವಣೆ ಹಿನ್ನೆಲೆಯಲ್ಲಿ ೧೦ ಸ್ಥಳಗಳಲ್ಲಿ ತೆರೆಯಲಾಗಿರುವ ಚೆಕ್‌ಪೋಸ್ಟ್‌ಗಳು ಕಾರ್ಯನಿರ್ವಹಿಸುತ್ತಿವೆ. ಹಾಗೆಯೇ ೫ ಫ್ಲೈಯಿಂಗ್ ಸ್ಕ್ವಾಡ್, ೩ ಪಾಳಿಯಲ್ಲಿ ಎಫ್‌ಎಸ್‌ಟಿ ತಂಡಗಳು, ೧೦ ಸ್ಟ್ಯಾಟಿಕ್ ಸರ್ವೆಲೆನ್ಸ್ ಟೀಮ್, ೩ ವಿಡಿಯೋ ಸರ್ವೆಲೆನ್ಸ್ ಟೀಮ್ ಹಾಗೂ ೨೮ ಸೆಕ್ಟರ್ ಅಧಿಕಾರಿಗಳ ತಂಡ ಚುನಾವಣಾ ಅಕ್ರಮಗಳು ನಡೆಯದಂತೆ ಹದ್ದಿನ ಕಣ್ಣಿಟ್ಟು ಕಾರ್ಯನಿರ್ವಹಿಸಲಿದ್ದಾರೆ ಎಂದರು.
೨೪೩ ಅಬಕಾರಿ ಪ್ರಕರಣ
ಉಪಚುನಾವಣೆ ಘೋಷಣೆಯಾದ ದಿನದಿಂದ ಈವರೆಗೆ ೨೪೩ ಅಬಕಾರಿ ಪ್ರಕರಣಗಳನ್ನು ದಾಖಲಿಸಲಾಗಿದೆ. ೫೦೦.೮೩೮ ಐ.ಎಂ.ಎಲ್. ಮದ್ಯ ಹಾಗೂ ೧೪.೩೬೦ ಲೀ. ಬಿಯರ್ ಸೇರಿ ಒಟ್ಟು ೨.೨೫ ಲಕ್ಷ ರೂ. ಮೌಲ್ಯದ ೫೧೫.೧೯೮ ಲೀಟರ್ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ. ಅಕ್ರಮ ಮದ್ಯ ಸಾಗಾಟದಲ್ಲಿ ತೊಡಗಿದ್ದ ೬ ದ್ವಿಚಕ್ರ ವಾಹನ ಹಾಗೂ ಒಂದು ಮೂರು ಚಕ್ರದ ವಾಹನವನ್ನು ಸಹ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಚುನಾವಣಾ ಪ್ರಚಾರದ ವೇಳೆ ಕೋವಿಡ್ ಮಾರ್ಗಸೂಚಿಗಳನ್ನು ಉಲ್ಲಂಘನೆಗೆ ಸಂಬಂಧಿಸಿದಂತೆ ೧೯ ಪ್ರಕರಣ ದಾಖಲಾಗಿದೆ. ಈ ಪೈಕಿ ಬಿಜೆಪಿ ೬, ಕಾಂಗ್ರೆಸ್ ೧ ಹಾಗೂ ಕೆ.ಆರ್.ಎಸ್. ೧ ಸೇರಿ ೮ ಎಫ್‌ಐಆರ್ ದಾಖಲಿಸಲಾಗಿದೆ. ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಪಕ್ಷಗಳ ವಿರುದ್ಧ ೧೧ ಎನ್‌ಸಿಆರ್ ದಾಖಲಾಗಿದ್ದು, ನ್ಯಾಯಾಲಯದ ಅನುಮತಿ ಪಡೆದು ಎಫ್‌ಐಆರ್ ದಾಖಲಿಸಲಾಗುವುದು ಎಂದರು.
ಮತದಾನಕ್ಕೆ ೪೮ ಗಂಟೆ ಮುಂಚಿತವಾಗಿ ನ. ೧ ರಂದು ಸಂಜೆ ೬ ಗಂಟೆಗೆ ಬಹಿರಂಗ ಪ್ರಚಾರ ಅಂತ್ಯವಾಗಿರುವುದರಿಂದ ಸಿರಾ ಕ್ಷೇತ್ರದ ಮತದಾರರಲ್ಲದವರು ಕೂಡಲೇ ಕ್ಷೇತ್ರ ಬಿಟ್ಟು ಹೊರಗೆ ಹೋಗಬೇಕು. ಒಂದು ವೇಳೆ ಕ್ಷೇತ್ರದಲ್ಲದವರು ಪ್ರಚಾರದಲ್ಲಿ ತೊಡಗಿರುವುದು ಕಂಡು ಬಂದಲ್ಲಿ ಅಂತಹವರ ವಿರುದ್ದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಮಾಸ್ಕ್ ಕಡ್ಡಾಯ
ನ. ೩ ರಂದು ಮತದಾನ ಮಾಡಲು ಮತಗಟ್ಟೆಗಳಿಗೆ ಬರುವವರು ಕಡ್ಡಾಯವಾಗಿ ಮಾಸ್ಕ್ ಧರಿಸಿರಲೇಬೇಕು. ಎಲ್ಲ ಮತಗಟ್ಟೆಗಳನ್ನು ಸ್ಯಾನಿಟೈಸ್ ಮಾಡಿಸಿ ಶುಚಿಗೊಳಿಸಿ ಮತದಾನಕ್ಕೆ ಸಜ್ಜುಗೊಳಿಸಲಾಗಿದೆ ಎಂದರು.
ಮತದಾನಕ್ಕೆ ಬರುವ ಮತದಾರರನ್ನು ಮತಗಟ್ಟೆಯ ಹೊರಗೆ ಸರದಿ ಸಾಲಿನಲ್ಲಿ ನಿಂತಿರುವಾಗಲೇ ಅವರಿಗೆ ಗ್ಲೌಸ್ ನೀಡಲಾಗುವುದು. ಮತದಾರರು ಸಹಿ ಹಾಕಿ, ಮತದಾನ ಮಾಡಿದ ನಂತರ ಆ ಗ್ಲಾಸ್‌ನ್ನು ಅಲ್ಲಿ ವ್ಯವಸ್ಥೆ ಮಾಡಲಾಗಿರುವ ಡಸ್ಟ್‌ಬಿನ್ ಹಾಕಿ ಬರುವಂತೆ ಅವರು ಮನವಿ ಮಾಡಿದರು.
ಪ್ರತಿ ಮತಗಟ್ಟೆಗೆ ಒಬ್ಬ ಆರೋಗ್ಯಾಧಿಕಾರಿ, ಎಎನ್‌ಎಂ, ಆಶಾ ಕಾರ್ಯಕರ್ತರುಗಳನ್ನು ನೇಮಕ ಮಾಡಲಾಗಿದೆ. ಮತದಾರರಿಗೆ ನೆರಳಿನ ವ್ಯವಸ್ಥೆಯನ್ನು ಸಹ ಮಾಡಲಾಗಿದೆ. ಕೋವಿಡ್ ಪಾಸಿಟಿವ್ ಶಂಕಿತ ಮತದಾರರಿಗೆ ಮತದಾನ ಮುಗಿಯುವ ಒಂದು ಗಂಟೆಗೆ ಮುಂಚಿತವಾಗಿ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದ ಅವರು, ಎಲ್ಲ ಮತಗಟ್ಟೆ ಅಧಿಕಾರಿಗಳಿಗೆ ಪಿಪಿಇ ಕಿಟ್ ಸಹ ವಿತರಿಸಲಾಗಿದೆ ಎಂದು ಅವರು ಹೇಳಿದರು.
ತುಮಕೂರಿನಲ್ಲಿ ಮತಎಣಿಕೆ
ನ. ೩ ರಂದು ನಡೆಯುವ ಸಿರಾ ವಿಧಾನಸಭಾ ಕ್ಷೇತ್ರದ ಚುನಾವಣೆ ಮತದಾನ ನಡೆದ ಬಳಿಕ ಮತಯಂತ್ರಗಳನ್ನು ತುಮಕೂರಿನ ಸರ್ಕಾರಿ ಪಾಲಿಟೆಕ್ನಿಕ್ ಭದ್ರತಾ ಕೊಠಡಿಗೆ ಸ್ಥಳಾಂತರಿಸಲಾಗುವುದು. ನ. ೧೦ ರಂದು ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿಯೇ ಮತ ಎಣಿಕೆ ಕಾರ್ಯ ನಡೆಯಲಿದೆ ಎಂದರು.
ಒಂದು ಕೊಠಡಿ ೭ ಟೇಬಲ್ ಹಾಕುವಂತೆ ನಿಯಮ ಇರುವುದರಿಂದ ಸಿರಾದಲ್ಲಿ ಕೊಠಡಿಯ ಕೊರತೆ ಎದುರಾಗಲಿದೆ. ಹಾಗಾಗಿ ತುಮಕೂರಿನಲ್ಲೇ ಮತ ಎಣಿಕೆ ಕಾರ್ಯ ನಡೆಸಲಾಗುತ್ತಿದೆ ಎಂದು ಅವರು ಸ್ಪಷ್ಟಪಡಿಸಿದರು.
೯೦೦ ಪೊಲೀಸರ ನಿಯೋಜನೆ
ಜಿಲ್ಲಾ ಪೊಲೀಸ್ ರಕ್ಷಣಾಧಿಕಾರಿ ಡಾ. ಕೆ. ವಂಶಿಕೃಷ್ಣ ಮಾತನಾಡಿ, ಸಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಕಟ್ಟುನಿಟ್ಟಾಗಿ ನಡೆಯಲು ಪೊಲೀಸ್ ಇಲಾಖೆಯಿಂದ ಅಗತ್ಯ ಕ್ರಮ ಕೈಗೊಂಡಿದ್ದು, ಚುನಾವಣಾ ಭದ್ರತಾ ಕಾರ್ಯಕ್ಕಾಗಿ ೯೦೦ ಮಂದಿ ಪೊಲೀಸರನ್ನು ನಿಯೋಜಿಸಲಾಗಿದೆ ಎಂದರು.
ಇಬ್ಬರು ಡಿವೈಎಸ್ಪಿಗಳು, ೫ ಸರ್ಕಲ್ ಇನ್ಸ್‌ಪೆಕ್ಟರ್‌ಗಳು, ೨೧ ಸಬ್‌ಇನ್ಸ್‌ಪೆಕ್ಟರ್‌ಗಳು, ೧೯ ಸಹಾಯಕ ಸಬ್‌ಇನ್ಸ್‌ಪೆಕ್ಟರ್‌ಗಳು, ೨೦೮ ಮುಖ್ಯ ಪೇದೆಗಳು, ೫೬೧ ಪೇದೆಗಳು, ೫೦ ಹೋಂಗಾರ್ಡ್ಸ್‌ಗಳನ್ನು ಚುನಾವಣಾ ಬಂದೋಬಸ್ತ್ ಕಾರ್ಯಕ್ಕಾಗಿ ನಿಯೋಜಿಸಲಾಗಿದೆ. ಜತೆಗೆ ಸಿಆರ್‌ಪಿಎಫ್ ತುಕಡಿಗಳು ಸಹ ಭದ್ರತಾ ಕಾರ್ಯಕ್ಕೆ ನಿಯೋಜನೆಗೊಂಡಿವೆ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಜಿ.ಪಂ. ಸಿಇಓ ಶುಭಕಲ್ಯಾಣ್, ಅಪರ ಜಿಲ್ಲಾಧಿಕಾರಿ ಚನ್ನಬಸಪ್ಪ ಉಪಸ್ಥಿತರಿದ್ದರು.