ಸಿರಾ ಉಪಕದನ: ಸಿಪಿಐ(ಎಂ) ಅಭ್ಯರ್ಥಿ ಬೆಂಬಲಿಸಲು ಮನವಿ

ತುಮಕೂರು, ಅ. ೨೮- ನೀತಿ ಮತ್ತು ತತ್ವಯುತ ರಾಜಕಾರಣಕ್ಕೆ ಹೆಸರಾಗಿರುವ ಸಿಪಿಐ(ಎಂ) ಪಕ್ಷ ಸಿರಾ ವಿಧಾನಸಭಾ ಉಪಚುನಾವಣೆಯಲ್ಲಿ ಸ್ಪರ್ಧಿಸಿರುವ ಸಿಪಿಐ ಪಕ್ಷದ ಅಭ್ಯರ್ಥಿ ಗಿರೀಶ್ ಅವರನ್ನು ಬೆಂಬಲಿಸುವಂತೆ ಸಿಪಿಐ(ಎಂ) ರಾಜ್ಯ ಸಮಿತಿ ಸದಸ್ಯ ಸೈಯದ್ ಮುಜೀಬ್ ಮತದಾರರಲ್ಲಿ ಮನವಿ ಮಾಡಿದರು.
ಪಕ್ಷದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿರಾ ವಿಧಾನಸಭಾ ಉಪಚುನಾವಣೆಯಲ್ಲಿ ಸಿರಾ ಕ್ಷೇತ್ರದ ಸಮಗ್ರ ಅಭಿವೃದ್ದಿಗೆ ಹೊರತಾಗಿ, ಜಾತಿ, ಉಪ ಜಾತಿ, ಹಣ, ಹೆಂಡಗಳ ಹಂಚಿಕೆ ಆಧಾರದಲ್ಲಿ ಚುನಾವಣೆ ನಡೆಯುತ್ತಿರುವುದು ದುರದೃಷ್ಟಕರ. ತತ್ವಯುತ ಮತ್ತು ನೀತಿವಂತರನ್ನು ಆಯ್ಕೆ ಮಾಡಿಕೊಳ್ಳಲು ಸಿರಾ ಕ್ಷೇತ್ರದ ಜನತೆಗೆ ಇದೊಂದು ಅವಕಾಶವಿದ್ದು, ಸದಾ ಜನರ ಹಿತ ಬಯಸುವ ಸಿಪಿಐ ಪಕ್ಷದ ಗಿರೀಶ್ ಅವರಿಗೆ ಮತ ನೀಡುವ ಮೂಲಕ ಮತದಾರರು ನಮ್ಮ ಮತವನ್ನು ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳು ಹಂಚುವ ಹಣ, ಹೆಂಡ, ತಳ ಬುಡವಿಲ್ಲದ ಭರವಸೆಗಳಿಗೆ ಮಾರಿಕೊಳ್ಳುವುದಿಲ್ಲ ಎಂಬುದನ್ನು ಸಾಬೀತು ಮಾಡಿ ತೋರಿಸಬೇಕಿದೆ ಎಂದರು.
ಕಳೆದ ಆರು ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಪಕ್ಷದಿಂದ ಪ್ರಜಾಪ್ರಭುತ್ವದ ಕಗ್ಗೊಲೆ ನಡೆದಿದೆ. ಜನತಾ ತೀರ್ಪಿನಿಂದ ಆಯ್ಕೆಯಾದ ಶಾಸಕರನ್ನು ರಾಜೀನಾಮೆ ಕೊಡಿಸಿ, ಉಪಚುನಾವಣೆ ನಡೆಸಿ ಮತದಾರರಿಗೆ ಇನ್ನಿಲ್ಲದ ಆಮಿಷಗಳನ್ನು ನೀಡಿ, ಮತ ಪಡೆದು ಗೆದ್ದು, ಅಧಿಕಾರ ಹಿಡಿದು, ಜನತಂತ್ರ ವ್ಯವಸ್ಥೆಗೆ ಸಂಚಕಾರ ತರುತ್ತಿದೆ. ಚುನಾವಣೆಗಾಗಿ ಉದ್ಯಮಿಗಳಿಂದ ಪಡೆದ ಹಣದ ಋಣ ತೀರಿಸಲು ಜನವಿರೋಧಿ ನೀತಿಗಳಾದ ಎಪಿಎಂಸಿ ಕಾಯ್ದೆ ತಿದ್ದುಪಡಿ, ಭೂಸ್ವಾಧೀನ ಕಾಯ್ದೆಗೆ ತಿದ್ದುಪಡಿ ತಂದು ಬಡವರು ಬಡವರಾಗಿಯೇ ಬದುಕುವಂತಹ ವಾತಾವರಣ ಸೃಷ್ಟಿಸಿದೆ. ಜನತೆ ಸಿರಾ ಉಪಚುನಾವಣೆಯಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಅಭ್ಯರ್ಥಿಗಳನ್ನು ಸೋಲಿಸಿ, ಜನವಿರೋಧಿ ನೀತಿಗಳ ಜಾರಿ ವಿರುದ್ದ ಸೇಡು ತೀರಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.
ಸಿಪಿಐನ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಕಂಬೇಗೌಡ ಮಾತನಾಡಿ, ಸಿಪಿಐ ಜನಪರ ಹೋರಾಟದಲ್ಲಿ ತೊಡಗಿಕೊಂಡಿದ್ದು, ಜನರಿಗೆ ಅಗತ್ಯವಾಗಿರುವ ಎಲ್ಲಾ ರೀತಿಯ ಸವಲತ್ತು, ಸೌಕರ್ಯಗಳು ದೊರೆಯುವಂತೆ ಮಾಡಿದೆ. ಇದು ಮತ್ತಷ್ಟು ಜನರಿಗೆ ತಲುಪಬೇಕೆಂಬ ಉದ್ದೇಶದಿಂದ ಗಿರೀಶ್ ಅವರನ್ನು ಪಕ್ಷ ಕಣಕ್ಕೆ ಇಳಿಸಿದೆ. ಜನತೆ ಅವರಿಗೆ ಮತ ಹಾಕುವ ಮೂಲಕ ತಮ್ಮ ಪರವಾಗಿ ಮಾತನಾಡುವ ವ್ಯಕ್ತಿಯೊಬ್ಬರನ್ನು ವಿಧಾನಸಭೆಗೆ ಕಳುಹಿಸುವ ಕೆಲಸ ಮಾಡಬೇಕು ಎಂದು ಹೇಳಿದರು.
ಕಟ್ಟಡ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಬಿ. ಉಮೇಶ್ ಮಾತನಾಡಿ, ಸಿರಾ ಉಪಚುನಾವಣೆಯಲ್ಲಿ ರಾಜಾರೋಷವಾಗಿ ರಾಷ್ಟ್ರೀಯ ಪಕ್ಷಗಳು ಹಣ ಹಂಚುತ್ತಿದ್ದರೂ ಚುನಾವಣಾ ಆಯೋಗವಾಗಲಿ, ಜಿಲ್ಲಾಡಳಿತವಾಗಲಿ ಕ್ರಮ ಕೈಗೊಂಡಿಲ್ಲ. ಸರ್ಕಾರವೇ ಇವುಗಳಿಗೆ ಕುಮ್ಮಕ್ಕು ನೀಡುತ್ತಿದೆಯೆನೋ ಎಂಬ ಅನುಮಾನ ಜನತೆಯಲ್ಲಿ ಕಾಡುತ್ತಿದೆ. ನೆರೆ ಪರಿಹಾರ, ಕೊರೊನಾ ಹಾವಳಿ ಬಗ್ಗೆ ತಲೆ ಕೆಡಿಸಿಕೊಳ್ಳದ ಸರ್ಕಾರ ಉಪಚುನಾವಣೆ ಗೆಲ್ಲಲ್ಲು ತನ್ನೆಲ್ಲಾ ಶಕ್ತಿಯನ್ನು ವ್ಯಯಿಸುತ್ತಿದೆ. ಇದರ ವಿರುದ್ದ ಜನರು ಒಂದಾಗಿ, ಸಿಪಿಐ ಪಕ್ಷದ ಅಭ್ಯರ್ಥಿ ಗಿರೀಶ್ ಅವರಿಗೆ ಮತ ನೀಡುವಂತೆ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಸಿಪಿಐ ಪಕ್ಷದ ಕಾಂತರಾಜು, ಸಿಪಿಐ(ಎಂ)ನ ಜಿಲ್ಲಾ ಕಾರ್ಯದರ್ಶಿ ಎನ್.ಕೆ.ಸುಬ್ರಮಣ್ಯ ಮತ್ತಿತರರು ಉಪಸ್ಥಿತರಿದ್ದರು.