ಸಿರಾಜ್ ಮಾರಕ ಬೌಲಿಂಗ್, ಭಾರತಕ್ಕೆ ಏಷ್ಯಾಕಪ್: ಲಂಕಾ ಧೂಳೀಪಟ

ಕೊಲಂಬೊ, ಸೆ.17-ವೇಗದ ಬೌಲರ್ ಮೊಹ್ಮದ್ ಸಿರಾಜ್ ಮಾರಕ ದಾಳಿಯ ನೆರವನಿಂದ ಶ್ರೀಲಂಕಾ ವಿರುದ್ಧ ಭಾರತ 10 ವಿಕೆಟ್ ಗಳ ಭರ್ಜರಿ ಜಯಳಿಸಿ ಏಷ್ಯಾ ಕಪ್ ಮುಡಿಗೇರಿಸಿದೆ.
ಈ ಗೆಲುವಿನೊಂದಿಗೆ ರೋಹಿತ್ ಪಡೆ ಎಂಟನೇ ಬಾರಿಗೆ ಏಷ್ಯಾ ಕಪ್ ಗೆದ್ದ ಕೀರ್ತಿಗೆ ಪಾತ್ರವಾಗಿದೆ.
ಏಷ್ಯಾ ಕಪ್ ಫೈನಲ್ ಪಂದ್ಯ ಅಪಾರ ಕುತೂಹಲ, ರೋಚಕತೆಯಿಂದ ಕೂಡಿರಲಿದೆ ಎಂದು ನಿರೀಕ್ಷೆಯೊಂದಿಗೆ ಪ್ರೇಕ್ಷಕರು ಮೈದಾನಕ್ಕೆ ಲಗ್ಗೆ ಹಾಕಿದ್ದರು. ಆದರೆ ಆಚ್ಚರಿಯ ರೀತಿಯಲ್ಲಿ ನಿರೀಕ್ಷೆ‌ ಹುಸಿಯಾಯಿತು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಶ್ರೀಲಂಕಾ ಭಾರತದ ಬೌಲಿಂಗ್ ದಾಳಿಗೆ ಧೂಳಿಪಟವಾಯಿತು. ಆರಂಭದಲ್ಲೇ ಜಸ್ಪ್ರೀತ್ ಬೂಮ್ರಾ ಅವರು ಕುಸಾಲ್ ಫೆರೇರಾ ವಿಕೆಟ್ ಉರುಳಿಸುವ ಮೂಲಕ ಹಾಲಿ ಚಾಂಪಿಯನ್ ಲಂಕಾ ಕುಸಿತಕ್ಕೆ ನಾಂದಿ ಹಾಡಿದರು.
ಮತ್ತೊಂದೆಡೆ ಮೊಹ್ಮದ್ ಸಿರಾಜ್ ಒಂದರ ಮೇಲೆ ಒಂದರಂತೆ ವಿಕೆಟ್ ಕಬಳಿಸುತ್ತಾ ಹೋದರು. ಶ್ರೀಲಂಕಾ ಕೇವಲ 12 ರನ್ ಗಳಿಗೆ ಆರು ವಿಕೆಟ್ ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿತ್ತು. ಇನ್ನೊಂದೆಡೆ ಹಾರ್ದಿಕ್ ಪಾಂಡ್ಯ ಬೌಲಿಂಗ್ ಕೈಚಳ ಪ್ರದರ್ಶಿಸಿ ಲಂಕಾ ತಂಡವನ್ನು ಕೇವಲ 15.2 ಓವರ್ ಗಳಲ್ಲಿ 50 ರನ್ ಗಳ ಅಲ್ಪಮೊತ್ತಕ್ಕೆ ಕುಸಿಯುವಂತೆ ಮಾಡಿದರು.


ಕುಸಾಲ್ ಮೆಂಡಿಸ್ 17 ದುಶಾನ್ ಹೇಮಂತ್ 13 ರನ್ ಗಳಿಸಿದ್ದನ್ನು ಬಿಟ್ಟರೆ, ಐದು ಮಂದಿ ಆಟಗಾರರು ಶೂನ್ಯಕ್ಕೆ ನಿರ್ಗಮಿಸಿದರು.
ಸಿರಾಜ್ 7 ಓವರ್ ಗಳಲ್ಲಿ 21 ರನ್ 6 ವಿಕೆಟ್ ಕಬಳಿಸಿದರು. ಒಂದೇ ಓವರ್ ನಲ್ಲಿ, ಮೇಡನ್ ಸಹಿತ ನಾಲ್ಕು ವಿಕೆಟ್ ಪಡೆದರು.‌ಈ ಮೂಲಕ ಏಕದಿನ ಕ್ರಿಕೆಟ್ ನಲ್ಲಿ ಶ್ರೇಷ್ಠ ಸಾಧನೆ ಮಾಡಿದ ಕೀರ್ತಿಗೆ‌ ಸಿರಾಜ್ ಪಾತ್ರರಾಗಿದ್ದಾರೆ.
ಅತೀ ಕಡಿಮೆ ಎಸೆತಗಳಲ್ಲಿ 5 ವಿಕೆಟ್ ಕಬಳಿಸಿದ ವಿಶ್ವದ 2ನೇ ಬೌಲರ್ ಎಂಬ ವಿಶ್ವ ದಾಖಲೆಯನ್ನು ಕೂಡ ತಮ್ಮದಾಗಿಸಿಕೊಂಡರು.
ಪಾಂಡ್ಯ 2.2 ಓವರ್ ಗಳಲ್ಲಿ ಮೂರು ರನ್ ನೀಡಿ 3 ವಿಕೆಟ್ ಪಡೆದರು. ಬುಮ್ರಾ ಒಂದು ವಿಕೆಟ್ ಗಳಿಸಿದರು.
ನಂತರ ಬ್ಯಾಟಿಂಗ್ ಆರಂಭಿಸಿದ ಭಾರತ ಕೇವಲ 37 ಎಸೆತಗಳಲ್ಲಿ ವಿಕೆಟ್ ನಷ್ಟವಿಲ್ಲದೆ 51 ರನ್ ಗಳಿಸಿ ಗೆಲುವಿನ ನಗೆ ಬೀರಿತು. ಗಿಲ್ 27 ಹಾಗೂ ಇಶಾನ್ ಕಿಶನ್ 23 ರನ್ ಗಳಿಸಿದರು.
ಒಟ್ಟಾರೆ ವರುಣಾ ಬಿಟ್ಟು ಬಿಡದ ಏಷ್ಯಾಕಪ್ ಟೂರ್ನಿಯನ್ನು ಕಾಡಿತ್ತು. ಇಂದಿನ ಪಂದ್ಯವು ಮಳೆಯಿಂದಾಗಿ ಆಟ ತಡವಾಗಿ ಆರಂಭವಾಗಿತ್ರು. ಭಾರತ ಭರ್ಜರಿ ಗೆಲುವು ಸಾಧಿಸುವ ಮೂಲಕ ಅಂತೂ ಇಂತೂ ಏಷ್ಯಾಕಪ್ ಗೆ ತೆರೆಬಿತ್ತು.