ಸಿರವಾರ – ಕೆ.ತುಪ್ಪದೂರು ಗ್ರಾ.ಪಂ. : ಅಭ್ಯರ್ಥಿಗಳ ಚಿನ್ಹೆ ಬದಲು

ಗ್ರಾಮದಲ್ಲಿ ಗೊಂದಲ – ೫ ಗಂಟೆ ತಡವಾಗಿ ಮತದಾನ ಆರಂಭ
ರಾಯಚೂರು.ಡಿ.೨೨- ನೂತನ ಸಿರವಾರ ತಾಲೂಕಿನ ಗಣದಿನ್ನಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೆ.ತುಪ್ಪದೂರು ಗ್ರಾ.ಪಂ. ಚುನಾವಣೆಯಲ್ಲಿ ಸ್ಪರ್ಧಿಸಿದ ಇಬ್ಬರು ಅಭ್ಯರ್ಥಿಗಳ ಚಿನ್ಹೆ ಬದಲಾವಣೆ ಭಾರೀ ಗೊಂದಲಕ್ಕೆಡೆ ಮಾಡಿದ ಹಿನ್ನೆಲೆಯಲ್ಲಿ ಮತದಾನ ಸುಮಾರು ೫ ಗಂಟೆಗೂ ಅಧಿಕ ತಡವಾಗಿ ಆರಂಭಗೊಂಡಿತ್ತು.
ಗ್ರಾಮ ಪಂಚಾಯತ ಹಿನ್ನೆಲೆಯಲ್ಲಿ ತುಪ್ಪದೂರು ಗ್ರಾಮದಲ್ಲಿ ಇಂದು ಮತದಾನ ೭ ಗಂಟೆಯಿಂದ ಆರಂಭಗೊಳ್ಳಬೇಕಾಗಿತ್ತುಂ.೭ ಗಂಟೆಗೆ ಮತದಾನ ಆರಂಭಿಸುವ ಸಂದರ್ಭದಲ್ಲಿ ಗ್ರಾಮದಲ್ಲಿ ಸ್ಪರ್ಧಿಸಿದ ಇಬ್ಬರು ಅಭ್ಯರ್ಥಿಗಳ ಚಿನ್ಹೆಗಳೆ ಬದಲಾಗಿರುವ ಮಾಹಿತಿ ಭಾರೀ ಗೊಂದಲಕ್ಕೆ ಕಾರಣವಾಯಿತು. ತಕ್ಷಣವೇ ಈ ವಿಷಯವನ್ನು ಮೇಲಾಧಿಕಾರಿಗಳಿಗೆ ತಿಳಿಸಲಾಯಿತು. ಆರಂಭದಲ್ಲಿ ಚುನಾವಣೆ ಸ್ಥಗಿತಗೊಳಿಸಲು ನಿರ್ಧರಿಸಲಾಯಿತಾದರೂ, ನಂತರ ಗ್ರಾಮಸ್ಥರ ಒತ್ತಾಯದ ಮೇರೆಗೆ ಝೇರಾಕ್ಸ್ ಮತಪತ್ರಗಳ ಮೂಲಕ ಮತದಾನ ಆರಂಭಿಸಲು ತೀರ್ಮಾನಿಸಲಾಯಿತು.
ತುಪ್ಪದೂರು ಗ್ರಾಮದಲ್ಲಿ ಒಂದೇ ಮತಗಟ್ಟೆಯಿದ್ದು, ೪೪೯ ಮತದಾರರಿದ್ದಾರೆ. ಪರಿಶಿಷ್ಟ ಪಂಗಡ ಮಹಿಳೆಗೆ ಮೀಸಲಾದ ಈ ಕ್ಷೇತ್ರದಲ್ಲಿ ದೇವಮ್ಮ ಗಂಡ ನಾಗರಾಜ ಟ್ರ್ಯಾಕ್ಟರ್ ಗುರುತಿನ ಮೇಲೆ ಸ್ಪರ್ಧಿಸಿದ್ದರೇ, ಸಿದ್ದಮ್ಮ ಗಂಡ ಭೀಮರಾಯ ಇವರು ಮಡಿಕೆ ಗುರುತಿನ ಮೇಲೆ ಚುನಾವಣೆಗೆ ಸ್ಪರ್ಧಿಸಿದ್ದರು. ಆದರೆ, ಚುನಾವಣೆ ಅಧಿಕಾರಿಗಳ ನಿರ್ಲಕ್ಷ್ಯೆ ಹಿನ್ನೆಲೆಯಲ್ಲಿ ಮತ ಪತ್ರಗಳಲ್ಲಿ ದೇವಮ್ಮ ಅವರಿಗೆ ಅಧಿಕೃತ ಚಿನ್ಹೆಯಾದ ಟ್ರ್ಯಾಕ್ಟರ್ ಬದಲಾಗಿ ಗ್ಯಾಸ್ ಸಿಲಿಂಡರ, ಸಿದ್ದಮ್ಮ ಅವರಿಗೆ ಅಧಿಕೃತ ಚಿನ್ಹೆಯಾದ ಮಡಿಕೆ ಬದಲಾಗಿ ಆಟೋ ಮತಪತ್ರದಲ್ಲಿ ಮುದ್ರಿತಗೊಂಡಿತ್ತು.
ಗ್ರಾಮ ಪಂಚಾಯತ ಚುನಾವಣೆಗೆ ಚಿನ್ಹೆ ವಿತರಿಸಿದ ದಿನದಿಂದ ದೇವಮ್ಮ ಅವರು ಟ್ರ್ಯಾಕ್ಟರ್ ಗುರುತಿಗೆ ಮತ ಚಲಾಯಿಸುವಂತೆ ಕರಪತ್ರ ಹಂಚಿ ಪ್ರಚಾರ ಮಾಡಿದ್ದರು. ಸಿದ್ದಮ್ಮ ಅವರು ಮಡಿಕೆ ಗುರುತಿಗೆ ಮತ ಚಲಾಯಿಸುವಂತೆ ಪ್ರಚಾರ ನಡೆಸಿದ್ದರು. ಆದರೆ, ಇಂದು ಮುಂಜಾನೆ ಮತದಾನ ಆರಂಭದ ಸಂದರ್ಭದಲ್ಲಿ ಚುನಾವಣಾ ಅಧಿಕಾರಿಗಳು ವಿತರಿಸಿದ ಇಬ್ಬರ ಅಧಿಕೃತ ಚಿನ್ಹೆಗಳ ಬದಲಾಗಿ ಗ್ಯಾಸ್ ಸಿಲಿಂಡರ್ ಮತ್ತು ಆಟೋ ಚಿನ್ಹೆಗಳು ಮತಪತ್ರದಲ್ಲಿ ಮುದ್ರಿತಗೊಂಡಿದ್ದವು. ಇದರಿಂದ ಅಭ್ಯರ್ಥಿಗಳು ಮತ್ತು ಅವರ ಬೆಂಬಲಿಗರು ತೀವ್ರ ಅಸಮಾಧಾನಗೊಂಡ ಪರಿಸ್ಥಿತಿ ಗೊಂದಲಮಯಗೊಂಡಿತು. ತಕ್ಷಣವೇ ಮೇಲಾಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಲಾಯಿತು.
ಸಹಾಯಕ ಆಯುಕ್ತ ವಿಶ್ವನಾಥ ಅವರು ಈ ಗೊಂದಲ ನಿವಾರಣೆಗೆ ಮುಂದಾಗಿ, ಚುನಾವಣೆ ರದ್ದಿಗೆ ತೀರ್ಮಾನಿಸಲಾಗಿತ್ತು. ಆದರೆ, ಗ್ರಾಮಸ್ಥರು ಮತದಾನ ನಡೆಸುವಂತೆ ಪಟ್ಟು ಹಿಡಿದ ಹಿನ್ನೆಲೆಯಲ್ಲಿ ೪೪೯ ಮತದಾರರನ್ನು ಹೊಂದಿದ ಈ ಗ್ರಾಮದಲ್ಲಿ ಮತದಾನ ನಿರ್ವಹಣೆಗೆ ಸಮಸ್ಯೆ ಇಲ್ಲ ಎನ್ನುವ ಕಾರಣಕ್ಕೆ ೫ ಗಂಟೆಗೂ ಅಧಿಕ ತಡವಾಗಿ ಮತದನ ಆರಂಭಿಸಲಾಯಿತು. ಸುಮಾರು ೧೧ ಗಂಟೆ ನಂತರ ಮತದಾನ ಆರಂಭಗೊಂಡಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಸ್ವತಃ ಸಹಾಯಕ ಆಯುಕ್ತ ಸಂತೋಷ ಕಾಮಗೌಡ ಅವರು, ಚುನಾವಣೆಯಲ್ಲಿ ಸ್ಪರ್ಧಿಸಿದ ದೇವಮ್ಮ ಗಂಡ ನಾಗರಾಜ ಅವರಿಗೆ ಟ್ರ್ಯಾಕ್ಟರ್ ಗುರುತು ಹಾಗೂ ಸಿದ್ದಮ್ಮ ಗಂಡ ಭೀಮರಾಯ ಅವರಿಗೆ ಮಡಿಕೆ ಗುರುತು ಹೊಂದಿದ ಝೇರಾಕ್ಸ್ ಮತಪತ್ರಗಳನ್ನು ಮತಗಟ್ಟೆಗೆ ನೀಡಿ, ಮತದಾನ ಆರಂಭಿಸಿದರು.
ಅವರನ್ನು ಭೇಟಿಯಾದ ಮಾಧ್ಯಮದವರೊಂದಿಗೆ ಮಾತನಾಡುತ್ತಾ, ಮತದಾನ ಆರಂಭಕ್ಕೆ ಸಂಬಂಧಿಸಿ ಡಂಗೂರ ಭಾರಿಸಲಾಗುತ್ತದೆ. ಅಲ್ಲದೇ, ೭ ಗಂಟೆವರೆಗೂ ಮತದಾನ ನಡೆಸಲಾಗುತ್ತದೆ. ಅಲ್ಲದೇ, ಚಿನ್ಹೆ ಬದಲಾವಣೆಗೆ ಯಾರ ನಿರ್ಲಕ್ಷ್ಯೆ ಕಾರಣವೆನ್ನುವುದು ಮುದ್ರಣದಲ್ಲಿ ದೋಷ ಪರಿಶೀಲಿಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ.