ಸಿಯೋನ್ ಆಶ್ರಮದ ಸೋಂಕಿತರು ಧರ್ಮಸ್ಥಳದ ರಜತಾದ್ರಿ ಕ್ವಾರಂಟೈನ್ ಕೇಂದ್ರಕ್ಕೆ

ಉಜಿರೆ, ಮೇ ೩೧- ನೆರಿಯದ ಗಂಡಿಬಾಗಿಲಿನಲ್ಲಿರುವ ಮಾನಸಿಕ ರೋಗಿಗಳ ಹಾಗೂ ನಿರ್ಗತಿಕರ ಪೋಷಣ ಮತ್ತು ಚಿಕಿತ್ಸಾ ಕೇಂದ್ರವಾದ ಸಿಯೋನ್ ಆಶ್ರಮದಲ್ಲಿ ಅತಿ ಹೆಚ್ಚಿನ ಸಂಖ್ಯೆಯ ಕೊರೊನಾ ಪಾಸಿಟಿವ್ ಪ್ರಕರಣಗಳು ಕಂಡುಬಂದ ಹಿನ್ನೆಲೆಯಲ್ಲಿ, ಸೋಂಕಿತರನ್ನು ಧರ್ಮಸ್ಥಳದ ರಜತಾದ್ರಿ ಕ್ವಾರಂಟೈನ್ ಕೇಂದ್ರಕ್ಕೆ ಭಾನುವಾರ ಅಂಬುಲೆನ್ಸ್ ಗಳ ಮೂಲಕ ಕಳುಹಿಸಿಕೊಡಲಾಯಿತು.
ಇಲ್ಲಿರುವ ೨೭೦ ಆಶ್ರಮವಾಸಿಗಳಲ್ಲಿ ೧೯೪ ಸಕ್ರಿಯ ಕೋವಿಡ್ ಪ್ರಕರಣಗಳಿವೆ.೭೪ ಪುರುಷ ಹಾಗೂ ೬೧ ಮಹಿಳಾ ಸೋಂಕಿತರನ್ನು ಕಳುಹಿಸಿಕೊಡಲಾಯಿತು. ಇಬ್ಬರನ್ನು ಮಂಗಳೂರಿನ ಕೋವಿಡ್ ಕೇಂದ್ರಕ್ಕೆ ರವಾನಿಸಲಾಗಿದೆ. ಓರ್ವ ಮೃತಪಟ್ಟಿದ್ದು ೫೯ ಮಂದಿ ಮಾನಸಿಕ ಅಸ್ವಸ್ಥರನ್ನು , ಹೋಂ ಐಸೋಲೇಶನ್ ಪೂರೈಸಿದ ಹಾಗೂ ನೆಗೆಟಿವ್ ವರದಿ ಬಂದಿರುವ ಉಳಿದ ಮಂದಿಯನ್ನು ಆಶ್ರಮದಲ್ಲಿ ಇರಿಸಿಕೊಳ್ಳಲಾಗಿದೆ.
ಶಾಸಕರ ತುರ್ತು ಭೇಟಿ
ಇಲ್ಲಿನ ಪ್ರಕರಣಗಳ ಗಂಭೀರತೆ ಅರಿತ ಶಾಸಕ ಹರೀಶ್ ಪೂಂಜ ಭಾನುವಾರ ಆಶ್ರಮಕ್ಕೆ ಭೇಟಿ ನೀಡಿ, ಟ್ರಸ್ಟಿ ಯು. ಸಿ. ಪೌಲೋಸ್ ಹಾಗೂ ಸ್ಥಳೀಯಾಡಳಿತದ ಜತೆ ಚರ್ಚಿಸಿ,ಸೋಂಕಿತರನ್ನು ಧರ್ಮಸ್ಥಳದ ರಜತಾದ್ರಿ ಕ್ವಾರಂಟೈನ್ ಕೇಂದ್ರಕ್ಕೆ ಸ್ಥಳಾಂತರಿಸುವ ಕುರಿತು ಸೂಚನೆ ನೀಡಿದರು. ಅಲ್ಲಿಗೆ ಸೋಂಕಿತರ ಯೋಗಕ್ಷೇಮ ನೋಡಿಕೊಳ್ಳಲು ಇಬ್ಬರು ಆಶ್ರಮದ ಉದ್ಯೋಗಿಗಳ ಇನ್ನಿಬ್ಬರನ್ನು ಹೆಚ್ಚುವರಿಯಾಗಿ ನೇಮಿಸಲಾಗುವುದು ಎಂದು ತಿಳಿಸಿದರು. ಆಶ್ರಮದಲ್ಲಿರುವ ರೋಗಿಗಳಿಗೆ ಬೇಕಾಗಿರುವ ಹೆಚ್ಚಿನ ವ್ಯವಸ್ಥೆಗಳ ಕುರಿತು ಸಮಾಲೋಚನೆ ನಡೆಸಿದರು.
ನೆರಿಯ ಗ್ರಾಪಂ ಅಧ್ಯಕ್ಷೆ ವಸಂತಿ, ಉಪಾಧ್ಯಕ್ಷೆ ಕುಶಲಾ, ಸದಸ್ಯರು,ಪಿಡಿಒ ಗಾಯತ್ರಿ ಪಿ, ಆರೋಗ್ಯಾಧಿಕಾರಿ ಡಾ. ಕಲಾಮಧು, ನೆರಿಯ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ವಾಣಿಶ್ರೀ, ಆರೋಗ್ಯ ಸಹಾಯಕಿ ಸರೋಜಾ ಮೊದಲಾದವರು ಉಪಸ್ಥಿತರಿದ್ದರು.
ಜಾನುವಾರುಗಳು ಗೋಶಾಲೆ
ಆಶ್ರಮದಲ್ಲಿ ಗೋಶಾಲೆ ಇದ್ದು ಗೋವುಗಳ ಕಾರ್ಯ ನಿರ್ವಹಿಸುವ ಕಾರ್ಮಿಕರು ಕೋವಿಡ್ ಕಾರಣ ಲಭ್ಯವಾಗದೇ ಅವುಗಳಿಗೆ ಮೇವಿನ ಕೊರತೆ ಹಾಗೂ ಇತರ ಸಮಸ್ಯೆಗಳು ಎದುರಾಗಿತ್ತು. ಶಾಸಕರ ಸೂಚನೆಯಂತೆ ಜಾನುವಾರುಗಳನ್ನು ಕಳೆಂಜದಲ್ಲಿರುವ ಗೋಶಾಲೆಗೆ ವಾಹನಗಳ ಮೂಲಕ ಸ್ಥಳಾಂತರಿಸಲಾಯಿತು.
ಶ್ರೀಕ್ಷೇತ್ರದ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರು ಮಹಾಮಾರಿ ಕೋವಿಡ್ ಸಂದರ್ಭದಲ್ಲಿ ಈಗಾಗಲೇ ೨೦೦ ಬೆಡ್ ವ್ಯವಸ್ಥೆ ಇರುವ ಉಜಿರೆಯ ಶ್ರೀ ಮಂಜುನಾಥೇಶ್ವರ ವ್ಯಸನಮುಕ್ತಿ ಮತ್ತು ಪರಿಶೋಧನಾ ಕೇಂದ್ರವನ್ನು ಕೋವಿಡ್ ಕೇರ್ ಸೆಂಟರಿಗೆ ನೀಡಿರುತ್ತಾರೆ. ಕ್ಷೇತ್ರದ ವತಿಯಿಂದ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ವಸತಿ, ಆಹಾರ ಹಾಗೂ ಇನ್ನಿತರ ವ್ಯವಸ್ಥೆಗಳನ್ನು ಇಲ್ಲಿರುವ ಸೋಂಕಿತರಿಗೆ ನೀಡಲಾಗುತ್ತಿದೆ. ಅದೇ ರೀತಿ ಜಿಲ್ಲಾಡಳಿತ ಹಾಗೂ ಶಾಸಕರ ಕೋರಿಕೆ ಮೇರೆಗೆ ಧರ್ಮಸ್ಥಳದ ರಜತಾದ್ರಿ ವಸತಿಗೃಹವನ್ನು ಅಗತ್ಯ ಸಂದರ್ಭದಲ್ಲಿ ಬಳಸಿಕೊಳ್ಳಲು ಅನುಮತಿ ನೀಡಿರುತ್ತಾರೆ.೩೦೦ ಕೋಣೆ,೬೦೦ ಬೆಡ್ ವ್ಯವಸ್ಥೆ ಜತೆ, ಸುಸಜ್ಜಿತ ಶೌಚಾಲಯ ಮೊದಲಾದ ಎಲ್ಲಾ ವಿಧದ ಅತ್ಯುತ್ತಮ ಸೌಕರ್ಯಗಳಿರುವ ರಜತಾದ್ರಿ ಕ್ವಾರಂಟೈನ್ ಕೇಂದ್ರವನ್ನು ಈಗ ಸಿಯೋನ್ ಆಶ್ರಮದ ಸೋಂಕಿತರಿಗೆ ನೀಡಲಾಗಿದೆ.
ಮುಂಜಾಗ್ರತೆ ವಹಿಸಿ
ಇಲ್ಲಿನ ಪರಿಸ್ಥಿತಿಯನ್ನು ಅರಿತು ಸೋಂಕಿತರನ್ನು ಧರ್ಮಸ್ಥಳದ ರಜತಾದ್ರಿ ಕ್ವಾರಂಟೈನ್ ಕೇಂದ್ರಕ್ಕೆ ಕಳುಹಿಸಲಾಗಿದೆ. ಸೋಂಕಿತರಿಗೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ. ನೆರಿಯ ಗ್ರಾಮದಲ್ಲಿ ಹೆಚ್ಚಿನ ಮುಂಜಾಗ್ರತೆ ವಹಿಸುವಂತೆ ಸ್ಥಳೀಯಾಡಳಿತಕ್ಕೆ ಸೂಚಿಸಲಾಗಿದೆ.
ಹರೀಶ್ ಪೂಂಜ,ಶಾಸಕರು,ಬೆಳ್ತಂಗಡಿ.