ಸಿಯುಕೆ ವಿರುದ್ಧ ದಲಿತ ಸಂಘಟನೆಗಳ ಸಮನ್ವಯ ಸಮಿತಿ ಗುಡುಗು

ಕಲಬುರಗಿ,ಏ 16: ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ವಿರೋಧಿ ಚಟುವಟಿಕೆಗಳು ವ್ಯಾಪಕವಾಗಿ ನಡೆಯುತ್ತಿದ್ದು, ಈ ಕುರಿತು ಸಮಗ್ರ ತನಿಖೆಗೆ ಆಗ್ರಹಿಸಿ ಇದೇ ಏಪ್ರಿಲ್ 20ರಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ದಲಿತ ಸಂಘಟನೆಗಳ ಸಮನ್ವಯ ಸಮಿತಿ ಮುಖಂಡರು ತಿಳಿಸಿದರು.
ಇಲ್ಲಿನ ಪತ್ರಿಕಾ ಭವನದಲ್ಲಿ ಸಮಿತಿಯ ಮುಖಂಡರಾದ ಎಸ್.ಪಿ.ಸುಳ್ಳದ್, ಅರ್ಜುನ ಭದ್ರೆ, ಡಾ.ದತ್ತಾತ್ರಯ ಇಕ್ಕಳಕಿ, ಅಶ್ವಿನಿ ಮದನಕರ್, ಬಸಣ್ಣ ಸಿಂಗೆ, ಲಕ್ಷ್ಮಿಕಾಂತ ಹುಬ್ಳಿ ಇನ್ನಿತರರು ಮಾತನಾಡುತ್ತಾ, ಸಿಯುಕೆ ಉಪಕುಲಪತಿ ಬಟ್ಟು ಸತ್ಯನಾರಾಯಣ ಸಹ ಆರ್.ಎಸ್.ಎಸ್. ಏಜೆಂಟರಂತೆ ವರ್ತಿಸುತ್ತಿದ್ದಾರೆ ಎಂದು ಟೀಕಿಸಿದರು.
ಸಿಯುಕೆ ಪ್ರಾಂಗಣದಲ್ಲಿ ಆರ್.ಎಸ್.ಎಸ್ ಪಥ ಸಂಚಲನ ನಡೆಸಲಾಗುತ್ತಿದೆ. ಮೇಲಾಗಿ, ಎಬಿವಿಪಿ ಕಚೇರಿಯನ್ನು ಸಹ ತೆರೆಯಲಾಗಿದೆ. ಆ ಮೂಲಕ ಸಾಂವಿಧಾನಿಕ ಚೌಕಟ್ಟಿಗೆ ವಿರುದ್ಧವಾದ ಚಟುವಟಿಕೆಗಳು ನಡೆಯುತ್ತಿವೆ ಎಂದರು.
ವಿಶ್ವವಿದ್ಯಾಲಯದ ಶಿಕ್ಷಣ ವಿರೋಧಿ ನೀತಿ ಖಂಡಿಸಿ ಕನ್ನಡ ವಿಭಾಗದ ಸಂಶೋಧನಾ ವಿದ್ಯಾರ್ಥಿ ನಂದಪ್ಪ ವಿವಿ ಆವರಣದಲ್ಲಿ ಏಕಾಂಗಿಯಾಗಿ ಪ್ರತಿಭಟನೆ ನಡೆಸಿದರೂ, ಉಪಕುಲಪತಿಯಿಂದ ಹಿಡಿದು ಯಾರೊಬ್ಬರೂ ಪ್ರತಿಭಟನಾನಿರತ ವಿದ್ಯಾರ್ಥಿಯನ್ನು ಸೌಜನ್ಯಕ್ಕೂ ಭೇಟಿ ಮಾಡಿಲ್ಲ. ಈ ಮಧ್ಯೆ, ವಿದ್ಯಾರ್ಥಿಯ ರಕ್ತದೊತ್ತಡ ಕುಸಿದ ಕಾರಣಕ್ಕಾಗಿ ಆತನನ್ನು ಕಲಬುರಗಿಯ ಇ.ಎಸ್.ಐ ಆಸ್ಪತ್ರೆಗೆ ದಾಖಲಿಸಿದರೂ ಸಿಯುಕೆಯ ಯಾರೊಬ್ಬರೂ ಈ ಬಗ್ಗೆ ಸ್ಪಂದಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಏಪ್ರಿಲ್ 4ರಂದು ಸಂಶೋಧನಾ ವಿದ್ಯಾರ್ಥಿ ನಂದಪ್ಪ ವಿರುದ್ಧ ಎಬಿವಿಪಿ ಅಧ್ಯಕ್ಷ ಸುಳ್ಳು ದೂರು ದಾಖಲಿಸಿದ ಹಿನ್ನೆಲೆಯಲ್ಲಿ ಆತನನ್ನು ವಿದ್ಯಾರ್ಥಿ ಕಲ್ಯಾಣ ಸಮಿತಿಯ ಅಧಿಕಾರಿಗಳ ಅನುಪಸ್ಥಿತಿಯಲ್ಲಿ ವಿಚಾರಣೆಗೆ ಒಳಪಡಿಸಲಾಗಿದೆ. ಈ ವೇಳೆ ನಂದಪ್ಪ ವಿರುದ್ಧ ಜಾತಿನಿಂದನೆ ಸಹ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಎಲ್ಲ ವಿದ್ಯಮಾನಗಳ ಕುರಿತು ಸಮಗ್ರ ತನಿಖೆ ಕೈಗೊಂಡು ಕರ್ನಾಟಕ ಕೇಂದ್ರೀಯ ವಿವಿಯಲ್ಲಿ ನಡೆಯುತ್ತಿರುವ ಶಿಕ್ಷಣ ವಿರೋಧಿ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕೆಂದು ಒತ್ತಾಯಿಸಿದರು.ಕಾಶಿನಾಥ ಮಾಳಗೆ, ಸುರೇಶ್ ಹಾದಿಮನಿ ಸೇರಿದಂತೆ ಇತರರು ಉಪಸ್ಥಿತರಿದ್ದರು.