ಸಿಯುಕೆ ನಲ್ಲಿ ಬಾಬಾಸಾಹೇಬ್ ಡಾ. ಬಿ ಆರ್ ಅಂಬೇಡ್ಕರ್ 132 ನೇ ಜನ್ಮ ದಿನಾಚರಣೆ

ಕಲಬುರಗಿ:ಏ.14:“ಡಾ. ಬಿ ಆರ್ ಅಂಬೇಡ್ಕರ್ ಅವರು ತಮ್ಮ ಇಡೀ ಜೀವನದಲ್ಲಿ ಪ್ರತಿಯೊಬ್ಬ ಭಾರತೀಯನ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಸಮಾನತೆಗಾಗಿ ಹೋರಾಡಿದ್ದಾರೆ. ಅವರ ಜೀವನ ನಮಗೆಲ್ಲರಿಗೂ ಅತ್ಯದ್ಭುತ ಸಂದೇಶವಾಗಿದೆ” ಎಂದು ಹೈದರಾಬಾದ್ ವಿಶ್ವವಿದ್ಯಾಲಯದ ಪ್ರೊ. ಭೀಮರಾವ್ ಭೋಸಲೆ ಹೇಳಿದರು. ಅವರು ಕಲಬುರಗಿಯ ಸಿಯುಕೆಯಲ್ಲಿ ಬಾಬಾಸಾಹೇಬ ಡಾ.ಬಿ.ಆರ್.ಅಂಬೇಡ್ಕರ್ ಅವರ 132ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಅವರು ಮುಂದುವರೆದು ಮಾತನಾಡಿ “ಡಾ. ಬಿ ಆರ್ ಅಂಬೇಡ್ಕರ್ ಅವರು ಸಾಮಾಜಿಕ ಪ್ರಜಾಪ್ರಭುತ್ವದ ಚೇತನ. ಪ್ರತಿಯೊಬ್ಬ ಭಾರತೀಯನಿಗೂ ಸಾಂವಿಧಾನಿಕ ಭಾರತವನ್ನು ಸ್ಥಾಪಿಸಲು ಅವರು ಶ್ರಮಿಸಿದರು. ಈ ದೇಶದ ಕಲ್ಯಾಣಕ್ಕಾಗಿ ಸಾಂವಿಧಾನಿಕ ಭಾರತವನ್ನು ಸ್ಥಾಪಿಸುವುದು ಬಹಳ ಮುಖ್ಯ. ಇದು ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಪ್ರಜಾಪ್ರಭುತ್ವವನ್ನು ಒಳಗೊಂಡಿದೆ” ಎಂದು ಹೇಳಿದರು.
ಸಾಮಾಜಿಕ ಪ್ರಜಾಪ್ರಭುತ್ವದ ಪ್ರಾಮುಖ್ಯತೆಯ ಬಗ್ಗೆ ಮಾತನಾಡುತ್ತಾ ಅವರು “ರಾಜಕೀಯ ಮತ್ತು ಆರ್ಥಿಕ ಪ್ರಜಾಪ್ರಭುತ್ವಕ್ಕಿಂತ ಸಾಮಾಜಿಕ ಪ್ರಜಾಪ್ರಭುತ್ವವು ಆರೋಗ್ಯಕರ ಸಾಮಾಜಿಕ ವ್ಯವಸ್ಥೆಯನ್ನು ನಿರ್ಮಿಸಲು ಮತ್ತು ಮಾನವ ಅಭಿವೃದ್ಧಿಗೆ ಅತ್ಯಂತ ಅವಶ್ಯಕವಾಗಿದೆ.”
ನಮ್ಮ ಸಂವಿಧಾನದ ಮುನ್ನುಡಿಯಲ್ಲಿ ಭಾರತಿಯರಾದ ನಾವು ಮತ್ತು ಒಳ್ಳೆಯ ಜನರನ್ನು ನಮ್ಮ ಪ್ರತಿನಿಧಿಗಳಾಗಿ ಆಯ್ಕೆ ಮಾಡುವ ಪ್ರಾಮುಖ್ಯತೆಯ ಬಗ್ಗೆ ಮಾತನಾಡುತ್ತಾ “ಭಾರತಿಯರಾದ ನಾವು ಎಂಬುದು ನಮ್ಮ ಸಂವಿಧಾನದ ಮೂಲವಾಗಿದೆ. ಇದು ನಮ್ಮ ಗುರುತಿನ ಬಗ್ಗೆ ಮಾತನಾಡುತ್ತದೆ. ಇಲ್ಲಿ ಭಾರತಿಯರಾದ ನಾವು ಎಂಬುದು ಮುಖ್ಯ ಧ್ಯೆಯವಾಗಿದೆ, ನಾವೆ ಇಲ್ಲಿ ಪಾತ್ರದಾರಿಗಳು ಮತ್ತು ನಾವೇ ಪ್ರೇಕ್ಷಕರು. ನಮ್ಮ ಸಂವಿಧಾನದ ಆಶಯದಂತೆ ನಡೆದುಕೊಳ್ಳುವವರನ್ನು ಆಯ್ಕೆ ಮಾಡುವುದು ನಮ್ಮ ಕರ್ತವ್ಯವಾಗಿದೆ. ನಾವು ಅದನ್ನು ಮಾಡಲು ವಿಫಲವಾದರೆ ನೋವುಗಳನ್ನು, ಬಡತನ, ಅನಕ್ಷರತೆ ಮತ್ತು ಇಂದು ಎಲದಕ್ಕೂ ನಾವೇ ಜವಾಬ್ದಾರರಾಗಿರುತ್ತೇವೆ” ಎಂದು ಹೇಳಿದರು.
ಆರ್ಥಿಕ ಪ್ರಜಾಪ್ರಭುತ್ವದ ಮಹತ್ವದ ಕುರಿತು ಮಾತನಾಡಿದ ಅವರು, “ಜನರ ಏಳಿಗೆ ಬಹಳ ಮುಖ್ಯ. ಸಮೃದ್ಧಿ ಇಲ್ಲದೆ ಸಾಮಾಜಿಕ ಮತ್ತು ರಾಜಕೀಯ ಪ್ರಜಾಪ್ರಭುತ್ವಗಳಿಗೆ ಅರ್ಥವಿಲ್ಲ. ನಮ್ಮ ಸಂವಿಧಾನದ ಪೀಠಿಕೆಯಲ್ಲಿ ಸಮೃದ್ಧಿ ಎಂಬ ಪದವು ಕಾಣೆಯಾಗಿದೆ ಮತ್ತು ಅದನ್ನು ತಿದ್ದುಪಡಿಯ ಮೂಲಕ ಸೇರಿಸಬೇಕಾಗಿದೆ ಎಂದು ನಾನು ಭಾವಿಸುತ್ತೇನೆ. ನಾವು ಎಂದಿಗೂ ಭಾರತವನ್ನು ಬೇಡುವ ದೇಶವಾಗಿ ನೋಡಲು ಬಯಸುವುದಿಲ್ಲ, ಬದಲಿಗೆ ಭಾರತವನ್ನು ನೀಡುವ ದೇಶವಾಗಿರುವುದನ್ನು ಬಯಸುತ್ತೇವೆ” ಎಂದು ಹೇಳಿದರು.
ಡಾ.ಬಿ.ಆರ್.ಅಂಬೇಡ್ಕರ್ ಅವರು ನೀಡಿದ ಶಿಕ್ಷಣ, ಹೋರಾಟ ಮತ್ತು ಸಂಘಟನೆಯ ಘೋಷಣೆಗಳ ಕುರಿತು ಮಾತನಾಡಿದ ಅವರು, ಈ ಘೋಷಣೆಗಳು ಮಂಡೂಕ ಉಪನಿಷತ್‍ನಲ್ಲಿ ಮತ್ತು ಬೌದ್ಧ ಧರ್ಮದಲ್ಲಿವೆ. ಬೌದ್ಧಧರ್ಮವು ಕೂಡ ಈತರ ಸಾಂಪ್ರದಾಯಿಕ ಧರ್ಮದಂತೆ ಎಂದು ಅನೇಕ ಜನರು ಭಾವಿಸುತ್ತಾರೆ. ಆದರೆ ಇದು ಸಾಂಪ್ರದಾಯಿಕವಲ್ಲ ಬದಲಿಗೆ ವೈಜ್ಞಾನಿಕ ಮತ್ತು ಆಧುನಿಕವಾಗಿದೆ. ಭಾರತವು ‘ವಿಶ್ವದ ಗುರು’ ಆಗಬೇಕೆಂದು ನಾವು ಬಯಸುತ್ತೇವೆ, ‘ವಿಶ್ವ ಗುರು’ ಆಗಬೇಕಾದರೆ ನಾವು ನಮ್ಮ ಪ್ರಾಚೀನ ಜ್ಞಾನ ವ್ಯವಸ್ಥೆ ಮತ್ತು ಪರಂಪರೆಯೊಂದಿ ಕಲಿತು ಕೊಳ್ಳಬೇಕು ಮತ್ತು ಅದರ ಬಗ್ಗೆ ಹೆಮ್ಮೆಯಿರಬೇಕು. ಬುದ್ಧ, ಕಬೀರ್ ಮತ್ತು ಜೋತಿಬಾಫುಲೆ ಅವರು ಡಾ. ಬಿ ಆರ್ ಅಂಬೇಡ್ಕರ್ ಅವರ ಜೀವನದ ಮೇಲೆ ಹೆಚ್ಚು ಪ್ರಭಾವ ಬೀರಿದ್ದಾರೆ ಮತ್ತು ಅವರು ಅವರನ್ನು ಗುರುಗಳಾಗಿ ಸ್ವೀಕರಿಸಿದ್ದಾರೆ” ಎಂದು ಹೇಳಿದರು.
ರಾಜಕೀಯ ವ್ಯವಸ್ಥೆಯ ಬಗ್ಗೆ ಡಾ.ಬಿ.ಆರ್.ಅಂಬೇಡ್ಕರ್ ಅವರ ಅಭಿಪ್ರಾಯಗಳ ಕುರಿತು ಮಾತನಾಡಿದ ಅವರು “ಡಾ. ಬಿ ಆರ್ ಅಂಬೇಡ್ಕರ್ ಅವರು ಕಮ್ಯುನಿಸಂ, ದೌರ್ಜನ್ಯ, ಸರ್ವಾಧಿಕಾರ ಮತ್ತು ವಂಶಪಾರಂಪರ್ಯ ಆಡಳಿತ ಪದ್ದತಿಗಳನ್ನು ಕಠೋರವಾಗಿ ವಿರೋಧಿಸಿದರು. ಪ್ರಜಾಪ್ರಭುತ್ವ ಮಾದರಿಯ ಸ್ವಯಂ ಆಡಳಿತದ ಸರ್ಕಾರವು ಅತ್ಯುತ್ತಮ ಸರಾಕಾರದ ರೂಪವಾಗಿದೆ. ನಾವು ಶಿಕ್ಷಣ, ಹೋರಾಟ ಮತ್ತು ಸಂಘಟಿಸದಿದ್ದರೆ ನಾವು ನಿಜವಾದ ಪ್ರಜಾಪ್ರಭುತ್ವ ಮಾದರಿಯ ಸ್ವಯಂ ಆಡಳಿತವನ್ನು ಹೊಂದಲು ಸಾಧ್ಯವಿಲ್ಲ” ಎಂದು ಹೇಳಿದರು.
ಜಾತಿ ಪದ್ಧತಿಯ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ ಅವರು “ಇದು ಭಾರತೀಯ ಸಮಾಜ ಮತ್ತು ಪ್ರಜಾಪ್ರಭುತ್ವಕ್ಕೆ ಕಪ್ಪು ಚುಕ್ಕೆಯಾಗಿದೆ. ಜಾತಿ ವ್ಯವಸ್ಥೆ ತೊಲಗದ ಹೊರತು ನಾವು ವಿನಮ್ರ ಮನುಷ್ಯರಾಗಲು ಸಾಧ್ಯವಿಲ್ಲ. ಋಗ್ವೇದದಲ್ಲಿ ಬ್ರಾಹ್ಮಣ, ಕ್ಷತ್ರಿಯ ಮತ್ತು ವೈಶ್ಯರಂತಹ ಕಾಯಕ ಆಧಾರಿತ ಮೂರು ಗುಂಪುಗಳು ಮಾತ್ರ ಇದ್ದವು ಮತ್ತು ಅವು ಪರಸ್ಪರ ಮುಕ್ತವಾಗಿವೆ. ವ್ಯಕ್ತಿ ಸಾಮಥ್ರ್ಯದ ಆಧಾರದ ಮೇಲೆ ಅವುಗಳಲ್ಲಿ ಯಾವುದನ್ನಾದರೂ ಅಯ್ಕೆ ಮಾಡಬಹುದಾಗಿತ್ತು, ಹೊರತು ಅವರ ಹುಟ್ಟಿನಿಂದಲ್ಲ. ದುರದೃಷ್ಟವಶಾತ್ ಕಾಲಾನಂತರದಲ್ಲಿ ಅದು ಹುಟ್ಟಿನಿಂದಲೇ ನಿರ್ಧಾರಿತವಾಗಿ ಅತ್ಯಂತ ಕಠಿಣ ಮತ್ತು ಶೋಷಣೆಯ ರೂಪವನ್ನು ಪಡೆಯಿತು.
ಮೀಸಲಾತಿ ಕುರಿತು ಮಾತನಾಡಿದ ಅವರು “ಮೀಸಲಾತಿಯು ಅಲ್ಪಸಂಖ್ಯಾತರ ಪರಿಕಲ್ಪನೆಯನ್ನು ಆಧರಿಸಿದೆ. ಮೂಲತಃ ಅಲ್ಪಸಂಖ್ಯಾತರ ವ್ಯಾಖ್ಯಾನವು ಸಾಮಾಜಿಕ ಪ್ರತ್ಯೇಕತೆ ಮತ್ತು ತಾರತಮ್ಯವನ್ನು ಆಧರಿಸಿದೆ. ಅತಿ ಹಿಂದುಳಿದ ವರ್ಗ, ಬುಡಕಟ್ಟು ಜನಾಂಗ, ಕ್ರಿಶ್ಚಿಯನ್ನರು ಮತ್ತು ಮುಸ್ಲಿಮರು ಅಲ್ಪಸಂಖ್ಯಾತರ ಅಡಿಯಲ್ಲಿ ಬರುತ್ತಾರೆ. ಪರಿಶಿಷ್ಟ ಜಾತಿ ಎಂದರೆ ಸಂವಿಧಾನದ ಅಡಿಯಲ್ಲಿ ಗುರುತಿಸಲ್ಪಟ್ಟ ಜಾತಿಗಳು. ಇದನ್ನು ನಾವು ಅತಿ ಹಿಂದುಳಿದ ವರ್ಗದ ಪ್ರತಿನಿಧಿಸುವಂತೆ ಬಳಸುತ್ತಿದ್ದೇವೆ. ಈ ಶೋಷಿತ ವರ್ಗಗಳ ಹಕ್ಕುಗಳನ್ನು ರಕ್ಷಿಸಲು ಡಾ. ಬಿ ಆರ್ ಅಂಬೇಡ್ಕರ್ ಅವರು ಪರಿಶಿಷ್ಟ ಜಾತಿಗಳ ಒಕ್ಕೂಟವನ್ನು ಸ್ಥಾಪಿಸಿದ್ದಾರೆ. ಏಕೆಂದರೆ ಅಲ್ಪಸಂಖ್ಯಾತರಲ್ಲಿ ಹಿಂದುಳಿದ ವರ್ಗದವರ ಬಗ್ಗೆ ಕಾಂಗ್ರೆಸ್ ಕಾಳಜಿ ವಹಿಸುವುದಿಲ್ಲ ಎಂದು ಅವರು ತಿಳಿದಿದ್ದರು” ಎಂದು ಹೇಳಿದರು.
ಸನ್ಮಾನ್ಯ ಕುಲಪತಿ ಪ್ರೊ.ಬುಟ್ಟು ಸತ್ಯನಾರಾಯಣ ಅಧ್ಯಕ್ಷತೆ ವಹಿಸಿ ಮಾತನಾಡಿ, “ಭೋಸ್ಲೆಯವರು ಡಾ. ಅಂಬೇಡ್ಕರ ರವರನ್ನು ಕುರಿತು ಬಹಳ ಚೆನ್ನಾಗಿ ಮಾತನಾಡಿದ್ದಾರೆ. ಇಂದಿನ ವಿಶ್ವವಿದ್ಯಾನಿಲಯಗಳು ಸಮಾಜದ ನಿರೀಕ್ಷೆಯನ್ನು ಹುಸಿಗೋಳಿಸಿವೆÉ. ವಿದೇಶಿ ವಿದ್ಯಾರ್ಥಿಗಳು ಭಾರತಕ್ಕೆ ಬರುತ್ತಿಲ್ಲ ಬದಲಾಗಿ ನಮ್ಮ ವಿದ್ಯಾರ್ಥಿಗಳು ವಿದೇಶಕ್ಕೆ ಹೋಗುತ್ತಿದ್ದಾರೆ. ಪ್ರಾಚೀನ ಕಾಲದಲ್ಲಿ ನಳಂದಾ, ತಕ್ಷಶೀಲ ಮಹಾನ್ ಶಿಕ್ಷಣ ಕೇಂದ್ರಗಳಾಗಿದ್ದವು ಮತ್ತು ಅನೇಕ ವಿದೇಶಿಯರು ಉನ್ನತ ಶಿಕ್ಷಣಕ್ಕಾಗಿ ಭಾರತಕ್ಕೆ ಬರುತ್ತಿದ್ದರು. ಗುಣಮಟ್ಟದ ವಿಶ್ವವಿದ್ಯಾಲಯಗಳನ್ನು ನಿರ್ಮಿಸುವ ಜವಾಬ್ದಾರಿ ನಮ್ಮ ಮೇಲಿದೆ. ವಿಶ್ವವಿದ್ಯಾನಿಲಯಗಳನ್ನು ಜಾತೀಯತೆಯಿಂದ ಮುಕ್ತಗೊಳಿಸಲು ಮತ್ತು ಭಾರತದ ಜನರ ನಿರೀಕ್ಷೆಗಳಿಗೆ ತಕ್ಕಂತೆ ಕೆಲಸ ಮಾಡೋಣ” ಎಂದು ಹೇಳಿದರು.
ಈ ಸಂದರ್ಭದಲ್ಲಿ ಹಲವು ವಿದ್ಯಾರ್ಥಿಗಳು ಡಾ.ಬಿ.ಆರ್.ಅಂಬೇಡ್ಕರ್ ಅವರ ಜೀವನ ಮತ್ತು ಸಾಧನೆಗಳನ್ನು ಕುರಿತು ಮಾತನಾಡಿದರು. ಡಾ.ಮಂಜುಳಾಕ್ಷಿ ಅವರು ಡಾ.ಬಿ.ಆರ್.ಅಂಬೇಡ್ಕರ್ ಅವರ ಕುರಿತು ತಾವು ಬರೆದ ಕವನ ವಾಚಿಸಿದರು. ಜಯದೇವಿ ಜಂಗಮಶೆಟ್ಟಿ, ಡಾ.ರವಿಕಿರಣ್ ನಾಕೋಡ್ ಮತ್ತು ಸ್ವಪ್ನೀಲ್ ಚಾಪೇಕರ್ ರಾಷ್ಟ್ರಗೀತೆ ಮತ್ತು ನಾಡಗೀತೆಯನ್ನು ಹಾಡಿದರು
ಪ್ರಭಾರ ಕುಲಸಚಿವ ಪ್ರೊ.ಚನ್ನವೀರ್ ಆರ್ ಎಂ, ಕಾರ್ಯಕ್ರಮದ ಸಂಯೋಜಕ ಡಾ.ನಿತಿನ್ ಬಿ, ಇಒಸಿ ಸಂಪರ್ಕಾಧಿಕಾರಿ ಡಾ.ಸಂಗಮೇಶ್, ಪರೀಕ್ಷಾ ನಿಯಂತ್ರಕ ಕೋಟ ಸಾಯಿಕೃಷ್ಣ, ಡೀನ್‍ರು, ಮುಖ್ಯಸ್ಥರು, ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.