ಸಿಯುಕೆಯಲ್ಲಿ “ವಿಕ್ಟಿಮ್ ಪ್ರೊಟೆಕ್ಷನ್ ಮತ್ತು ಕ್ರಿಮಿನಲ್ ಜಸ್ಟಿಸ್ ಫಾರ್ ವಿಟ್ನೆಸಸ್ ಮತ್ತು ಅಂಡರ್ ಟ್ರಯಲ್ಸ್” ಕುರಿತ ಒಂದು ದಿನದ ಸಮ್ಮೆಳನ ಆಯೋಜನೆ

ಕಲಬುರಗಿ:ಮಾ. 05:”ನಮ್ಮ ನ್ಯಾಯಾಂಗ ವ್ಯವಸ್ಥೆಯಲ್ಲಿ ಆರೋಪಿ ಅಪರಾಧಿಗಳನ್ನು ಅಳಿಯಂದಿರಂತೆ ಪರಿಗಣಿಸಲಾಗುತ್ತದೆ ಆದರೆ ಸಂತ್ರಸ್ತರು ಬೆದರಿಕೆಯಿಂದ ಬಳಲುತ್ತಿದ್ದಾರೆ” ಎಂದು ಗೌರವಾನ್ವಿತ ನ್ಯಾಯಮೂರ್ತಿ ರಾಮಚಂದ್ರ ಡಿ. ಹುದ್ದಾರ್, ನ್ಯಾಯಾಧೀಶರು- ಕರ್ನಾಟಕ ಹೈಕೋರ್ಟ್ ಅವರು ಹೆಳಿದರು.
ಅವರು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾನಿಲಯ, ಕಲಬುರಗಿಯ ಕಾನೂನು ನ್ಯಾಯಶಾಸ್ತ್ರ ಅಧ್ಯಯನ ನಿಕಾಯದ, ಕಾನೂನು ವಿಭಾಗ ಮತ್ತು ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣೆಗಳ ಸಂಸ್ಥೆ, ಜಂಟಿಯಾಗಿ ಆಯೋಜಿಸಿದ್ದ “ವಿಕ್ಟಿಮ್ ಪ್ರೊಟೆಕ್ಷನ್ ಮತ್ತು ಕ್ರಿಮಿನಲ್ ಜಸ್ಟಿಸ್ ಫಾರ್ ವಿಟ್ನೆಸಸ್ ಮತ್ತು ಅಂಡರ್ ಟ್ರಯಲ್ಸ್” ಕುರಿತ ಒಂದು ದಿನದ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಅವರು ಮುಂದುವರೆದು ಮಾತನಾಡಿ “ಆಪಾದಿತ ಅಪರಾಧಿಗಳಿಗೆ ದಿನಕ್ಕೆ ಮೂರು ಬಾರಿ ಸಮಯಕ್ಕೆ ಸರಿಯಾಗಿ ಊಟ, ಆಶ್ರಯ, ಕೌಶಲ್ಯ ತರಬೇತಿ ಮತ್ತು ಟಿವಿ ಎಲ್ಲಾ ಸೌಲಭ್ಯಗಳನ್ನು ಒದಗಿಸುತ್ತಿದ್ದೆವೆ” ಎಂದು ಅವರು ಹೇಳಿದರು. ಸಾಕ್ಷಿ ರಕ್ಷಣೆಯ ಪ್ರಾಮುಖ್ಯತೆಯನ್ನು ಒತ್ತಿಹೇಳುತ್ತಾ, “ಪ್ರಕರಣಗಳ ವಿಚಾರಣೆಯ ಸಮಯದಲ್ಲಿ ನ್ಯಾಯಾಲಯದ ಮುಂದೆಯೇ ಅನೇಕ ಬಾರಿ ಸಾಕ್ಷಿಗಳು ಆರೋಪಿಗಳಿಂದ ಬೆದರಿಕೆಗೆ ಒಳಗಾಗಿದ್ದನ್ನು ನಾವು ಕಂಡಿದ್ದೆವೆ. ನಾವು ಅಂತಹ ಆರೋಪಿ ಕ್ರಿಮಿನಲ್‍ಗಳಿಗೆ ಎಚ್ಚರಿಕೆ ನೀಡಿದ್ದೇವೆ ಮತ್ತು ಬಲಿಪಶು ವ್ಯಕ್ತಿಗಳಿಗೆ ಮತ್ತು ಸಾಕ್ಷಿಗಳಿಗೆ ಸುರಕ್ಷತೆಗಾಗಿ ಸೂಚಿಸಿದ್ದೇವೆ. ಒಂದು ಪ್ರಕರಣದಲ್ಲಿ ನಾನು ಸಂತ್ರಸ್ತರಿಗೆ ಮತ್ತು ಸಾಕ್ಷಿದಾರರಿಗೆ ರಕ್ಷಣೆ ನೀಡುವಂತೆ ಮತ್ತು ಅವರು ಮನೆಗೆ ತಲುಪುವವರೆಗೆ ರಕ್ಷಣೆ ನೀಡುವಂತೆ ಪೊಲೀಸರಿಗೆ ಹೇಳಿದ್ದೇನೆ. ಆದರೆ ಸಂತ್ರಸ್ತರಿಗೆ ಮತ್ತು ಸಾಕ್ಷಿಗಳಿಗೆ ಆನಂತರವೂ ಭದ್ರತೆಯ ಅಪಾಯವಿರುತ್ತದೆ. ಆದ್ದರಿಂದ ಬಲಿಪಶುವಿಗೆ, ಸಾಕ್ಷಿದಾರರಿಗೆ ಸುರಕ್ಷತೆ ಮತ್ತು ಗೌಪ್ಯತೆಯ ಹಕ್ಕನ್ನು ಒದಗಿಸುವುದು ಬಹಳ ಮುಖ್ಯ. ಕೆಲವೊಮ್ಮೆ ಆರೋಪಿಗಳಿಗೂ ಭದ್ರತೆ ಮತ್ತು ಖಾಸಗಿತನದ ಹಕ್ಕು ಕೂಡ ಬೇಕಾಗುತ್ತದೆ. ಆದ್ದರಿಂದ ಸಮ್ಮೇಳನದ ವಿಷಯವು ಅತ್ಯಂತ ಸೂಕ್ತ ಮತ್ತು ಸಮಯೋಚಿತವಾಗಿದೆ. ತ್ವರಿತ ವಿಚಾರಣೆ ಮತ್ತು ನ್ಯಾಯದಾನದ ಮೂಲಕ ಸ್ವಲ್ಪ ಮಟ್ಟಿಗೆ ಈ ಸಮಸ್ಯೆಗಳು ಪರಿಹರಿಸಬಹುದು. ಇತರ ರಾಜ್ಯಗಳಿಗೆ ಹೋಲಿಸಿದರೆ, ಕರ್ನಾಟಕ ರಾಜ್ಯದಲ್ಲಿ ಬಾಕಿ ಇರುವ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ ಎಂಬುದು ತೃಪ್ತಿದಾಯಕವಾಗಿದೆ” ಎಂದು ಅವರು ಹೇಳಿದರು.

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾನಿಲಯದ ಗೌರವಾನ್ವಿತ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಅವರು ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿ, “ಸಂಪೂರ್ಣ ಕಾನೂನನ್ನು ಸಂಪೂರ್ಣವಾಗಿ ಅನುಸರಿಸಬೇಕು ಮತ್ತು ಕಾನೂನು ಉಲ್ಲಂಘಿಸಿದರೆ ಎಲ್ಲರಿಗೂ ಸಮಾನ ಶಿಕ್ಷೆಯಾಗಬೇಕು. ಈ ಕಾಲದ ಅಗತ್ಯವಾಗಿರುವ ವಿಷಯದ ಮೇಲೆ ಸಮ್ಮೇಳನವನ್ನು ನಡೆಸಿದ್ದಕ್ಕಾಗಿ ನಾನು ಸಂಘಟಕರನ್ನು ಅಭಿನಂದಿಸುತ್ತೇನೆ”” ಎಂದು ಹೇಳೀದರು.
ಇದಕ್ಕೂ ಮುನ್ನ ಪ್ರಾಸ್ತಾವಿಕವಾಗಿ ಮಾತನಾಡಿದ ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆಯ ನಿರ್ದೇಶಕ ದ್ವಾರಕಾನಾಥ ಬಾಬು ಅವರು, ‘ಆರೋಪಿಗಳಿಗೆ ಕಾನೂನು ಬದ್ಧವಾಗುವಂತೆ ವ್ಯವಸ್ಥೆ ಮಾಡದಿದ್ದರೆ ಸಂತ್ರಸ್ತರಿಗೆ ಹಾಗೂ ಸಾಕ್ಷಿದಾರರಿಗೆ ನಾನಾ ವಿಧಾನಗಳಿಂದ ಕಿರುಕುಳ ನೀಡಲು ಮುಂದಾಗುತ್ತಾರೆ ಹಾಗಾಗಿ ಸಂತ್ರಸ್ತರಿಗೆ ರಕ್ಷಣೆ ನೀಡಬೇಕು. ಸಾಕ್ಷಿಗಳನ್ನು ರಕ್ಷಿಸಬೇಕಾಗಿದೆ ಮತ್ತು ಇಬ್ಬರಿಗೂ ಪರಿಹಾರವನ್ನು ನೀಡಬೇಕು, ನಾವು ಸಾಕ್ಷಿಗಳನ್ನು ಪ್ರೋತ್ಸಾಹಿಸಬೇಕು ಮತ್ತು ರಕ್ಷಿಸಬೇಕು” ಎಂದು ಹೇಳಿದರು.
ಕಾನೂನು ವಿಭಾಗದ ಮುಖ್ಯಸ್ಥ ಡಾ.ಬಸವರಾಜ ಎಂ.ಕುಬಕಡ್ಡಿ ಸ್ವಾಗತಿಸಿದರು, ಡಾ.ಅನಂತ ಡಿ.ಚಿಂಚುರೆ, ಡೀನ್‍ರು, ಮುಖ್ಯಸ್ಥರು, ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.