ಕಲಬುರಗಿ:ಅ.2: “ಬ್ರಿಟಿಷರು ಒಡೆದು ಆಳುವ ನೀತಿಯನ್ನು ಅನುಸರಿಸಿದರು, ಮಹಾತ್ಮ ಗಾಂಧಿಯವರು ಭಾರತೀಯರನ್ನು ಒಗ್ಗೂಡಿಸಿ ರಾಷ್ಟ್ರಕ್ಕೆ ಸ್ವಾತಂತ್ರ್ಯವನ್ನು ತಂದು ಕೊಟ್ಟರು” ಎಂದು ಸಯುಕೆಯ ಕುಲಪತಿ ಪೆÇ್ರ.ಬಟ್ಟು ಸತ್ಯನಾರಾಯಣ ಹೇಳಿದರು. ಇಂದು ಅವರು ಸಿಯುಕೆಯಲ್ಲಿ ನಡೆದ ಮಹಾತ್ಮ ಗಾಂಧೀಜಿಯವರ 154ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅವರು ಮುಂದುವರೆದು ಮಾತನಾಡಿ “ಗಾಂಧೀಜಿ ಸ್ವಾತಂತ್ರ್ಯವನ್ನು ಸಾಧಿಸಲು ಅಹಿಂಸಾ ಮಾರ್ಗವನ್ನು ಅನುಸರಿಸಿದರು. ಇಂದು ಇಡೀ ಜಗತ್ತು ಈ ದಿನವನ್ನು ಅಂತರಾಷ್ಟ್ರೀಯ ಅಹಿಂಸಾ ದಿನವನ್ನಾಗಿ ಆಚರಿಸುತ್ತಿದೆ. ಮಹಾತ್ಮಾ ಗಾಂಧೀಜಿಯವರು ಬಡ ದೇಶವಾಗಿದ್ದ ಭಾರತವನ್ನು ಪ್ರಗತಿಯ ಪಥದಲ್ಲಿ ನಡೆಯಲು ಸಹಾಯ ಮಾಡಿದರು. ಗ್ರಾಮ ಸ್ವರಾಜ್ಯದ ಕನಸನ್ನು ಕಂಡಿದ್ದರು, ಪ್ರತಿ ಗ್ರಾಮವು ಸ್ವಾವಲಂಬಿಯಾಗಬೇಕು ಎಂಬುದು ಅವರ ಬಯಕೆಯಾಗಿತ್ತು. ಈಗ ಪ್ರತಿಯೊಂದು ನಗರವೂ ಕಲುಷಿತಗೊಂಡಿದೆ ಮತ್ತು ಜನದಟ್ಟಣೆಯಿಂದ ಕೂಡಿದೆ, ಇದು ಹಳ್ಳಿಗಳನ್ನು ಅಭಿವೃದ್ಧಿಪಡಿಸುವ ಮತ್ತು ಸ್ವಾವಲಂಬಿಯಾಗಿಸುವ ಸಮಯವಾಗಿದೆ. ಅದಕ್ಕಾಗಿ ಅವರು ‘ಸ್ವದೇಶಿ’ ಮೇಕ್ ಇನ್ ಇಂಡಿಯಾಗೆ ಒತ್ತು ನೀಡಿದ್ದಾರೆ. ನಾವೀನ್ಯತೆ ಮತ್ತು ಉತ್ಪಾದನೆಯಲ್ಲಿ ‘ಸ್ವದೇಶಿ’ ವಿಧಾನಕ್ಕೆ ನಾವು ಹೆಚ್ಚು ಒತ್ತು ನೀಡಬೇಕು ಆಗ ನಮ್ಮ ಹಳ್ಳಿಗಳು, ನಗರಗಳು ಮತ್ತು ಇಡೀ ರಾಷ್ಟ್ರವು ಸ್ವಾವಲಂಬಿಯಾಗುತ್ತದೆ. ಅದೇ ನಾವು ಮಹಾತ್ಮ ಗಾಂಧೀಜಿಗೆ ಸಲ್ಲಿಸಬಹುದಾದ ಗೌರವವಾಗಿದೆ” ಎಂದು ಹೇಳಿದರು.
ಮುಖ್ಯ ಭಾಷಣಕಾರ ಡಾ. ರವಿ ಖಾಂಗೇಯ್ ಮಾತನಾಡಿ, “ಮಹಾತ್ಮ ಗಾಂಧಿಯವರ ಜೀವನವು ಸತ್ಯ, ಅಹಿಂಸೆ ಮತ್ತು ಬ್ರಹ್ಮಚರ್ಯದ ಪ್ರಯೋಗವಾಗಿದೆ. ಅವರ ಜೀವನವು ಬಹು ಆಯಾಮಗಳಿಂದ ಕೂಡಿದೆ. ಸರಳ ಜೀವನ ಉನ್ನತ ಚಿಂತನೆಗೆ ಒತ್ತು ನೀಡಿದರು. ಭೂಮಿಯು ಪ್ರತಿಯೊಬ್ಬರ ಅಗತ್ಯಗಳನ್ನು ಪೂರೈಸಬಲ್ಲದು ಆದರೆ ದುರಾಶೆಯನ್ನಲ್ಲ ಎಂದು ಅವರು ಹೇಳಿದರು. ಸೇವಾಗ್ರಾಮ ಆಶ್ರಮ ಅವರ ಜೀವನ ತತ್ವಕ್ಕೆ ಉತ್ತಮ ಉದಾಹರಣೆಯಾಗಿದೆ. ಇದು ಜೀವನದ ಸರಳ ವಿಧಾನವನ್ನು ಕಲಿಸುತ್ತದೆ. ಅವರು ಹೊರಗಿನ ಸೌಂದರ್ಯಕ್ಕಿಂತ ಆಂತರಿಕ ಶುದ್ಧತೆಗೆ ಪ್ರಾಮುಖ್ಯತೆ ನೀಡಿದರು. ಗಾಂಧೀಜಿಯವರ ಬೋಧನೆ ಮತ್ತು ಜೀವನ ಕಥೆ ಅವರ ಸಾವಿನೊಂದಿಗೆ ಕೊನೆಗೊಳ್ಳುವುದಿಲ್ಲ, ಅದು ಇಂದಿಗೂ ಮುಂದುವರೆದಿದೆ” ಎಂದು ಹೇಳಿದರು.
ಕುಲಸಚಿವ ಪೆÇ್ರ.ಆರ್.ಆರ್.ಬಿರಾದಾರ್ ಮಾತನಾಡಿ, “ಮಹಾತ್ಮಾ ಗಾಂಧೀಜಿಯವರ ಜೀವನ ಪ್ರೀತಿ, ವಾತ್ಸಲ್ಯ, ಶಾಂತಿ, ಸೌಹಾರ್ದತೆ, ಸಹನೆ, ಪ್ರಾಮಾಣಿಕತೆ, ಸತ್ಯ, ಸಕಾರಾತ್ಮಕತೆ ಮತ್ತು ಅಹಿಂಸೆಯ ಪ್ರತೀಕವಾಗಿದೆ. ಸಮಾಜದಲ್ಲಿ ಸೌಹಾರ್ದತೆಯನ್ನು ಬೆಳೆಸಲು ಮತ್ತು ಎಲ್ಲರೊಂದಿಗೆ ಪ್ರೀತಿ ಮತ್ತು ವಾತ್ಸಲ್ಯದಿಂದ ಬಾಳಲು ನಮಗೆ ಸಾಧ್ಯವಾಗುತ್ತದೆ. ನ್ಯಾಯಯುತ ಗುರಿಗಳನ್ನು ಸಾಧಿಸಲು ನಾವು ಸರಿಯಾದ ಮಾರ್ಗಗಳನ್ನು ಬಳಸಬೇಕು ಎಂದು ಅವರು ಹೇಳಿದರು. ಅವರು ಅಸ್ಪೃಶ್ಯತೆ, ಅಸಮಾನತೆ, ಮಹಿಳಾ ಸಬಲೀಕರಣ, ಬಡತನ ನಿರ್ಮೂಲನೆ ಮತ್ತು ಎಲ್ಲಾ ಸಾಮಾಜಿಕ-ಆರ್ಥಿಕ ಅನಿಷ್ಟಗಳ ನಿರ್ಮೂಲನೆಗೆ ಒತ್ತು ನೀಡಿದರು” ಎಂದು ಹೇಳಿದರು.
ಕಾರ್ಯಕ್ರಮದ ಸಂಯೋಜಕ ಡಾ.ಎನ್.ಬಾಬು ಸ್ವಾಗತಿಸಿದರು, ಡಾ.ಕುಮಾರ್ ಮಂಗಲಂ ಕಾರ್ಯಕ್ರಮ ನಿರೂಪಿಸಿದರು, ಯುನಿಕ್ಷಾ ಮಹಾಪಾತ್ರ ವಂದಿಸಿದರು. ಸಂಗೀತ ಮತ್ತು ಲಲಿತಕಲಾ ವಿಭಾಗದ ವಿದ್ಯಾರ್ಥಿಗಳು ರಾಷ್ಟ್ರಗೀತೆ ಮತ್ತು ದೇಶಭಕ್ತಿ ಗೀತೆಗಳನ್ನು ಹಾಡಿದರು.ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರು ಹಾಜರಿದ್ದರು.